ನೆನಪಿನ ಪಯಣ -02
ಮೂರು ವರ್ಷಗಳೆಂದರೆ ಬದುಕಿನಲ್ಲಿ ದೊಡ್ಡದೊಂದು ಸಮಯದ ಕಣಜ. ನಾವದನ್ನು ಹೇಗೆ ಕಳೆದಿದ್ದೇವೆ ಎಂಬುದರ ಮೇಲೆ ಅದು ಗೋಲ್ಡನ್ ಪಿರಿಯಡ್ ಆಗುತ್ತದೆಯೋ ವಿಷಾದದ ಸಮಯವಾಗುತ್ತದೋ ಎಂಬುದು ನಿರ್ಧಾರವಾಗುತ್ತದೆ. ಹದಿ ಹರೆಯದ ಆ ಮೂರು ವರ್ಷಗಳ ಕಾಲ ಕಾಲೇಜಿನಲ್ಲಿ ಕಲಿತ ಆ ದಿನಗಳು ಪ್ರತಿಯೊಬ್ಬರಿಗೂ ನೆನಪಿನಲ್ಲಿ ಇರುವಂಥದ್ದೇ. ಕೆಲವರು ಓಪನ್ ಆಗಿ ಹೇಳುತ್ತಾರೆ. ಕೆಲವರು ಮನಸ್ಸಿನೊಳಗೇ ಬಚ್ಚಿಡುತ್ತಾರೆ ಅಷ್ಟೇ..
ಕಾಲೇಜೆಂದರೆ ಎಲ್ಲೆಲ್ಲಿಂದ ಬಸ್ಸಿನಲ್ಲೋ, ರೈಲಿನಲ್ಲೋ ಬರುತ್ತಿದ್ದದ್ದು, ರೈಲಿನಲ್ಲಿ ಬರುವವರು ಲೇಟಾಗಿ ಫಸ್ಟ್ ಪಿರಿಯಡ್ ಗೆ ತಲಪುತ್ತಿದ್ದದ್ದು. ಮಧ್ಯಾಹ್ನದ ಊಟಕ್ಕೆ ಕೆಎಂಸಿ ಕ್ಯಾಂಟೀನಿಗೋ, ಶಾಂತಿ ಸಾಗರಿಗೋ, ಗೀತ ಭವನಕ್ಕೋ ಹೋಗುತ್ತಿದ್ದದ್ದು, ಮಧ್ಯಾಹ್ನ ಬುತ್ತಿ ತಂದವರು ಸಾಮೂಹಿಕವಾಗಿ ಲೈಬ್ರೆರಿ ಎದುರಿನ ಕುಡಿಯುವ ನೀರಿನ ಎದುರು ರಾಶಿ ಸೇರುತ್ತಿದ್ದದ್ದು ಹೀಗೆ...
ಕ್ಲಾಸಿನಲ್ಲಿ ಕಲಿತದ್ದು, ರವೀಂದ್ರ ಕಲಾ ಭವನದಲ್ಲಿ ಹಾರಾಡಿದ್ದು, ಎನ್ ಸಿಸಿ, ಎನ್ ಎಸ್ಸೆಸ್ಸೆನಲ್ಲಿ ಓಡಾಡಿದ್ದು, ಪರೀಕ್ಷೆ ಬರೆದದ್ದು, ನಕ್ಕು ನಲಿದದ್ದು ಎಲ್ಲ ಈಗ ಇತಿಹಾಸ. ಎಲ್ಲಿಂದಲೋ ಬಂದು ಮೂರು ವರ್ಷ ಒಟ್ಟಾಗಿದ್ದು ಮತ್ತೆ ಮತ್ತೆ ದೂರ ದೂರವಾದವರು ನಾವು.
ನಂಗೆ ಅನ್ನಿಸುವುದು ಆ ಕೆಂಪು ಕಟ್ಟಡದ ಸುತ್ತ ಎಷ್ಟೊಂದು ಸ್ನೇಹ, ಎಷ್ಟೊಂದು ಪ್ರೀತಿಗಳು ಮೊಳೆತರಿಲಕ್ಕಿಲ್ಲ. ಕೆಲವರು ಹೇಳಿಕೊಂಡಿದ್ದಾರೆ, ಕೆಲವರು ಒಟ್ಟಿಗೆ ಓಡಾಡಿದ್ದಾರೆ. ಕೆಲವರು ಇಂದಿನ ತನಕ ಆ ಮೆಚ್ಚುಗೆಯನ್ನು ಹೇಳಿಕೊಂಡೇ ಇಲ್ಲ. ಬದುಕೇ ಹಾಗೆ ಐದು ಬೆರಳುಗಳ ಹಾಗೆ ಎಲ್ಲರ ಅಭಿವ್ಯಕ್ತಿ ಒಂದೇ ಥರ ಇರುವುದಿಲ್ಲ. ಎಷ್ಟೊ ಸಂದರ್ಭ ಹೇಳದೇ ಕೇಳದೇ ಪ್ರೀತಿ ಆವರಿಸಿರುತ್ತದೆ. ಕಾಲೇಜಿನಲ್ಲಂತೂ ಕೇಳುವುದೇ ಬೇಡ, ತುಂಬ ಜನಕ್ಕೆ ಅದನ್ನು ವ್ಯಕ್ತಪಡಿಸುವ ಧೈರ್ಯ ಇರುವುದಿಲ್ಲ. ಒಂದು ವೇಳೆ ವ್ಯಕ್ತಪಡಿಸಿದರೂ ಅದು ಕೈಗೂಡುತ್ತದೆ ಎಂಬ ವಿಶ್ವಾಸ ಇರುವುದಿಲ್ಲ. ಕೆಲವರು ಕಣ್ಣಿನಲ್ಲೇ ಮಾತನಾಡಿಕೊಂಡರೇ, ಕೆಲವರಿಗೆ ಹತ್ತಿರ ಕುಳಿತು ನೇರವಾಗಿ ಮಾತನಾಡುವ ಧೈರ್ಯ ಇರುತ್ತದೆ. ಇನ್ನೂ ಕೆಲವರು ಮೂರು ವರ್ಷ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ, ಕೊನೆಗೆ ವಿದಾಯ ಕೋರುವ ಹೊತ್ತಿಗೂ ಏನನ್ನೂ ಹೇಳಲಾಗದೆ ಕಣ್ನೀರಿನಲ್ಲೇ ಮೂಕ ವಿದಾಯ ಕೋರಿದ್ದೂ ಇರಬಹುದು.ಈ ಕಾಲೇಜಿನ ಆವರಣಗಳು ಎಷ್ಟೊಂದು ಪ್ರೀತಿಗೆ, ಎಷ್ಟೊಂದು ಜೋಡಿಗಳ ಮಿಲನಕ್ಕೆ, ಎಷ್ಟೊಂದು ನಿಟ್ಟುಸಿರುಗಳಿಗೆ, ಎಷ್ಟೊಂದು ಕಳ್ಳ ನೋಟಗಳಿಗೆ ಸಾಕ್ಷಿಗಳಾಗಿರಬಹುದು. ಕಾಲೇಜಿನ ಗೋಡೆಗಳಿಗೆ ಬಾಯಿ ಇರುತ್ತಿದ್ದರೆ ಸಾವಿರಾರು ಕತೆಗಳನ್ನು ಬರೆಯಬಹುದಿತ್ತು....
ಕಾಲ ಬದಲಾಗುತ್ತಲೇ ಇರುತ್ತದೆ. ಆಕರ್ಷಣೆ ಅಥವಾ ಸ್ನೇಹದ ತೀವ್ರತೆ ಬದುಕಿನ ಜಂಜಾಟದಲ್ಲಿ ಹೆಚ್ಚು ಕಮ್ಮಿ ಆಗಲೂ ಬಹುದು. ಅವರವರ ಒತ್ತಡ, ತಾಪತ್ರಯ, ಓಡಾಟ, ಕೆಲಸ, ಸಂಸಾರಗಳು ಹಿಂದಿನ ನೆನಪುಗಳ ತೀವ್ರತೆಯನ್ನು ಕಳೆದುಕೊಂಡಿರಲೂ ಬಹುದು. ಕಾಲಕ್ಕೆ ಎಲ್ಲದರ ತೀವ್ರತೆ ಕಡಿಮೆ ಮಾಡುವ ತಾಕತ್ತು ಇದೆ. ಕಾಲೇಜೆಂದರೆ ಡಿಗ್ರಿಯೊಂದನ್ನು ಪಡೆದ ಜಾಗ ಮಾತ್ರವಲ್ಲದೆ ಸಾವಿರಾರು ನೆನಪುಗಳಿಗೆ, ವೇದಿಕೆ ಹತ್ತಿ ಮಾತನಾಡಿದ್ದಕ್ಕೆ, ಪದ್ಯ ಹೇಳಿದ್ದಕ್ಕೆ, ಕುಣಿದದ್ದಕ್ಕೆ, ಎನ್ ಸಿಸಿಯಲ್ಲಿ ಬಂದೂಕು ಬಿಟ್ಟದ್ದಕ್ಕೆ, ಕಾಲೇಜಿನ ಅಂಗಳದಲ್ಲಿ ಹೊಡೆದಾಡಿದ್ದಕ್ಕೂ ಇತಿಹಾಸವಾಗಿರುವುದು ಸಹಜ...
ಹಳೆ ಹಾಡು, ಹಳೆ ಫೋಟೋ, ಹಳೆ ಸಿನಿಮಾ, ಹಳೆ ಪದ್ಯದ ಸಾಲುಗಳು ಎಷ್ಟೊಂದು ಹಳೆ ನೆನಪುಗಳನ್ನು ಮೊಗೆ ಮೊಗೆದು ಕೊಡುತ್ತದೆ. ಕಲಿತ ಕಾಲೇಜು ಕೂಡಾ ಹಾಗೆಯೇ. ನೆನಪುಗಳ ಆಗರ.. ಮೊಗೆದಷ್ಟೂ ಹಸಿರು.. ಹಸಿರು..
-ಕೆಎಂ.
0 Comments