🎭🎭🎭🎭🎭🎭
ಸ್ನೇಹಿತರೇ...
😍😍
ನಮ್ಮೆಲ್ಲರ ಕನಸು, 19 ವರ್ಷಗಳ ಬಳಿಕ ಸಹಪಾಠಿಗಳೊಂದಿಗೆ ಪುನರ್ ಮಿಲನಕ್ಕೆ ಇನ್ನು ಮೂರು ದಿನ ಬಾಕಿ. ನಾವು ಯಥಾಸಾಧ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ನಮ್ಮ ಸಂಪರ್ಕದಲ್ಲಿರುವ ಸುಮಾರು ಶೇ.40ರಷ್ಟು ಮಂದಿ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದೀರಿ. ಬಹಳಷ್ಟು ಮಂದಿ ಪರ ಊರಿನಲ್ಲಿರುವ ಕಾರಣ ಹಾಗೂ ಇನ್ನು ಕೆಲವರಿಗೆ ವೈಯಕ್ತಿಕ ಸಮಸ್ಯೆಗಳ ಕಾರಣ ಕಾರ್ಯಕ್ರಮಕ್ಕೆ ಬರಲಾಗುತ್ತಿಲ್ಲ.
ಯಾಕಾಗಿ ಪುನರ್ ಮಿಲನ...
ಕಾಲೇಜೆಂದರೆ ಫೀಸ್ ಕಟ್ಟಿದ್ದೇವೆ ಎಂಬ ಕಾರಣಕ್ಕೆ ಮೂರು ವರ್ಷ ತರಗತಿಗಳಿಗೆ ಹೋಗಿದ್ದು, ತರಗತಿಗೆ ಹೋದ ಕಾರಣ ಪರೀಕ್ಷೆ ಬರೆದದ್ದು, ಸಂಬಳ ಕೊಡುತ್ತಾರೆ ಎಂಬ ಕಾರಣಕ್ಕೆ ಲೆಕ್ಚರರುಗಳು ಪಾಠ ಮಾಡಿದ್ದು, ಅಲ್ಲಿಗೆ ಮೂರು ವರ್ಷ ಆಯುಷ್ಯ ಕಳೆದು ಹೊರ ಬಂದಿದ್ದು... ಅಷ್ಟೆಯಾ...
ಖಂಡಿತಾ ಅಲ್ಲ.
ಇದಕ್ಕೂ ಮೀರಿದ ಭಾವಗಳು ಅಲ್ಲಿವೆ. ಸುದೀರ್ಘ ಬದುಕಿನಲ್ಲಿ ಮೂರು ವರ್ಷಗಳೆಂದರೆ ಸಣ್ಣ ಅವಧಿಯಲ್ಲಿ ಯೌವ್ವನದ ಆ ದಿನಗಳು ಬದುಕಿನ ನಿರ್ಣಾಯಕ ಘಟ್ಟವೂ ಹೌದು.
ಅಂದು ನಾವು ಯಾರೂ ಮಾತನಾಡಿಕೊಂಡು ಕಾಲೇಜಿಗೆ ಸೇರಿದ್ದಲ್ಲ. ಎಲ್ಲರೂ ಕಾಲೇಜಿಗೆ ಸೇರಿದ್ದು ಆಕಸ್ಮಿಕ. ಅವರವರ ಮನಸ್ಥಿತಿಗೆ ಹೊಂದಿಕೊಂಡು ನಾವೆಲ್ಲರೂ ಗೆಳಯರಾದೆವು. ಆಗ ಮೊಬೈಲು ವಾಟ್ಸಪ್ಪು ಎಲ್ಲ ಇರಲಿಲ್ಲ. ಹಾಗಾಗಿ ನಾವು ಅಗಲಲೇಬೇಕಾಯಿತು. ಹೇಗೋ ಆಕಸ್ಮಿಕವಾಗಿ ವಾಟ್ಸಪ್ಪು, ಫೇಸ್ ಬುಕ್ ಮೂಲಕ ಈಗ ಮತ್ತೆ ಸಂಪರ್ಕಕ್ಕೆ ಬಂದೆವು...
ಬದುಕಿನ ಏಕತಾನತೆ, ಯಾಂತ್ರಿಕತೆ, ಒತ್ತಡ ಇವೆಲ್ಲದರ ನಡುವೆ ಒಂದು ದಿನವಾದರೂ ಸಹಜವಾಗಿ, ಮತ್ತೆ ಎಳೆಯರಾಗಿ ಕಾಲ ಕಳೆಯುವ ಎಂಬ ಒತ್ತಾಸೆಯೇ ಈ ಪುನರ್ ಮಿಲನ ಆಯೋಜಿಸಲು ಪ್ರೇರಣೆ. ನಮ್ಮ ದುಡಿಮೆ, ಮುಗಿಯದ ಒತ್ತಡ, ಹೇಳಿಕೊಳ್ಳಲಾಗದ ಸಮಸ್ಯೆಗಳು, ಪರಿಹಾರ ಕಾಣದ ಸಂಧಿಗ್ಧತೆಗಳು, ಅಸಹನೆಗಳು, ಮಿತಿಗಳು... ಇವೆಲ್ಲದರ ಆಚೆಗೂ ಒಂದು ಬದುಕಿದೆ. ನಮಗೋಸ್ಕರ, ನಮ್ಮ ಮನಶ್ಶಾಂತಿಗೋಸ್ಕರ ಸಾಗಿಸಬೇಕಾದ ಒಂದು ಜೀವಿತಾವಧಿ ಇದೆ. ಅದು ಶಾಂತಿಯುತವಾಗಿ ತೇಲಬೇಕಾದರೆ ಮನಸ್ಸಿಗೆ ನೆಮ್ಮದಿ ಬೇಕು. ಅದು ನಮ್ಮ ಪ್ರೀತಿಪಾತ್ರರು, ಮಿತ್ರರು ಜೊತೆಗಿದ್ದರೆ ಹೆಚ್ಚು ಖುಷಿ ಖುಷಿಯಾಗಿರುತ್ತದೆ.
ಮನೆ, ಸಂಸಾರ, ಕುಟುಂಬದಲ್ಲಿ ಆಪ್ಯಾಯಮಾನ, ಆತ್ಮೀಯತೆ, ಪ್ರೀತಿ ಎಲ್ಲವೂ ಇರುತ್ತದೆ. ನಿಜ.
ಆದರೆ ಸ್ನೇಹವೆಂದರೆ ಅದು ಬೇರೇಯೇ...
ರಕ್ತಸಂಬಂಧವಲ್ಲ, ಜಾತಿ, ಧರ್ಮದಿಂದ ಕಟ್ಟಿಕೊಂಡದ್ದಲ್ಲ. ಅದು ಕೊಡುಕೊಳ್ಳುವಿಕೆಯಿಂದ ಬರುವುದಲ್ಲ. ಯಾವುದೇ ನಿರೀಕ್ಷೆಯಿಲ್ಲದೆ ಹುಟ್ಟಿಕೊಳ್ಳುವುದು ಸ್ನೇಹ. ಅದಕ್ಕೇ ಸ್ನೇಹವೆಂದರೆ ಅಲ್ಲಿ ಸಲುಗೆ, ಅಧಿಕಾರ, ಕುಶಾಲು, ಆತ್ಮೀಯತೆ ಎಲ್ಲ ಇರುತ್ತದೆ. ದಾನೆಂಬೇ ಮೂಜಿ ಕಾಸ್ದಾಯ ಅಂತ ನಿಮ್ಮ ಸ್ನೇಹಿತನನ್ನು ಕರೆದ ಹಾಗೆ ಇನ್ಯಾರೋ ಬಂಧುಗಳನ್ನು ಕರೆಯಲು ಸಾಧ್ಯವಿಲ್ಲ. ಆ ಸಲುಗೆಯ ವ್ಯಾಖ್ಯೆಯೇ ಬೇರೆ. ಅಂತಹ ಸ್ನೇಹಿತರ ಗುಂಪು ಒಂದು ತರಗತಿ.
ಆ ತರಗತಿಯಲ್ಲಿ ಮತ್ತೆ ಕುಳಿತು ಅಂತಹದ್ದೇ ನಮ್ಮದೇ ವಯಸ್ಸಿನ, ನಮ್ಮದೇ ಸಬ್ಜೆಕ್ಟು ಕಲಿತ, ನಮ್ಮದೇ ಕಾಲಮಾನದ, ನಮ್ಮದೇ ಮನಸ್ಥಿತಿಯ ಗೆಳೆಯ, ಗೆಳತಿಯ ಜೊತೆ ದಿನದ ಅರ್ಧ ಹೊತ್ತು ಕಳೆದರೆ ಮತ್ತೊಮ್ಮೆ ಬದುಕಿಗೊಂದು ಸರ್ವಿಸ್ ಮಾಡಿದ ಮನಸ್ಥಿತಿ ಸಿಕ್ಕೀತೆಂಬ ಭಾವ, ನಿರೀಕ್ಷೆ... ಹಾಗೂ ಒಂದು ಉದ್ವೇಗದ ಕಾತರತೆ ಎಲ್ಲರಿಗೂ ಇದೆ.
ಅಸಲಿಗೆ ನಾವು ಮುಂದಿನ ಭಾನುವಾರ ಕಾಲೇಜಿನಲ್ಲಿ ಜಗತ್ತಿನಲ್ಲಿ ಯಾರೂ ಮಾಡದ ಸಾಧನೆಯೇನನ್ನೂ ಮಾಡುವುದಿಲ್ಲ.
ಒಂದಷ್ಟು ಹೊತ್ತು ಜೊತೆ ಜೊತೆಗೆ ಕುಳಿತು ಹರಟುತ್ತೇವೆ ಅಷ್ಟೇ...
ತತ್ವಜ್ಞಾನಿಯೊಬ್ಬ ಹೇಳಿದ್ದಾನೆ... ಇಬ್ಬರು ಆತ್ಮೀಯ ಸ್ನೇಹಿತರು ಹೇಗಿರುತ್ತಾರೆ ಎಂದರೆ ಎಷ್ಟೋ ಸಮಯದ ಬಳಿಕ ಸಂಧಿಸಿದ ಬಳಿಕವೂ ಒಂದಷ್ಟು ಹೊತ್ತು ಅಕ್ಕ ಪಕ್ಕ ಕುಳಿತುಕೊಂಡು ಏನನ್ನೂ ಮಾತನಾಡದೆ ಹೋದರೂ ಬಹಳಷ್ಟು ಮಾತನಾಡಿದ ಭಾವವನ್ನು ಹೊಂದಿರುತ್ತಾರೆ ಎಂದು...
ನನಗೂ ಇದು ಹೌದು ಅನಿಸುತ್ತದೆ.
ಅಂದ ಹಾಗೆ.. ಮನುಷ್ಯನಿಗೆ ಶಾಂತಿ ಸಮಾಧಾನಗಳನ್ನು ಹುಡುಕಲು ಒಂದು ನೆಪ ಬೇಕು. ಖುಷಿ ಪಡಲು ಒಂದು ಕಾರಣ ಬೇಕು. ನಮ್ಮ ಪುನರ್ ಮಿಲನ ಕೂಡ ಪರಸ್ಪರ ಭೇಟಿಗೆ ಒಂದು ನೆಪ ಅಷ್ಟೇ... ಬದುಕಿನಲ್ಲಿ ನಾವು ಕಂಡುಕೊಂಡ ನೆನಪಿಡಬಹುದಾದ ಕೆಲವೇ ಕೆಲವೇ ದಿನಗಳ ಪೈಕಿ ಇದು ಕೂಡಾ ಒಂದು ದಿನವಾಗಿರಲಿ ಎಂಬ ಪ್ರಾಮಾಣಿಕ ಹಾರೈಕೆ ನನ್ನದು...
ಕಮೆಂಟು, ಲೈಕು, ಇಮೋಜಿ, ಮಿಸ್ಡ್ ಕಾಲು, ಸ್ಟೇಟಸ್ಸು ಎಲ್ಲದರಿಂದ ಹೊರ ಬಂದು, ಎದುರೆದುರೇ ಕುಳಿತು ಮಾತನಾಡುವ ಸುಖ ಎಲ್ಲರದ್ದೂ ಆಗಿರಲಿ....
ನೀವು ಬರುತ್ತೀರಲ್ಲ...?
🙏🙏🙏
-ಕೆಎಂ (11.12.2019)
0 Comments