Ticker

5/recent/ticker-posts

Header Ads Widget

MANGALORE UNIVERSITY

ನಿನ್ನೆ ಸತ್ತಿಹುದೀಗ, ನಾಳೆ ಹುಟ್ಟದೆ ಇರದು...

ಆತ್ಮೀಯ UCM ಮಿತ್ರರೇ...



ನಿನ್ನೆ ತಾನೇ ಕನ್ನಡದ ಜನಪ್ರಿಯ ನಟ ಚಿರಂಜೀವಿ ಸರ್ಜಾ ಅಕಸ್ಮಾತ್ ಎಂಬಂತೆ ಮೃತಪಟ್ಟರು. ಆತನಿಗೆ ಬಹುತೇಕ ನಮ್ಮದೇ ಪ್ರಾಯ. ನಮಗಿಂತಲೂ ಸ್ವಲ್ಪ ಸಣ್ಣವನೇ ಹೌದು. ತುಂಬ ಮಂದಿಗೆ ಈ ಸಾವು ಶಾಕ್ ತಂದುಕೊಟ್ಟಿದೆ. ಈ ಅಕಾಲಿಕ ಮರಣ ಹಲವರಲ್ಲಿ ಸ್ಮಶಾನ ಮೌನ ಹುಟ್ಟಿಸಿದೆ....

ಹೌದಲ್ವ... ಬದುಕು ಎಷ್ಟು ಕ್ಷಣಿಕ, ವಿಧಿ ಎಷ್ಟು ನಿಷ್ಕರುಣಿ.... ಹೋಗುವಾಗ ಏನೂ ಇಲ್ಲ. ಎಲ್ಲವನ್ನೂ ಬಿಟ್ಟು ಹೋಗುತ್ತೇವೆ ಎಂಬ ಭಾವ ಆವರಿಸಿರುವುದು ಜಾಲತಾಣಗಳ ಬರಹದಲ್ಲಿ ಕಾಣಸಿಗುತ್ತದೆ....

ಹೌದು ಇಂಥದ್ದೊಂದು ಗ್ರೂಪು ಇಲ್ಲದಿದ್ದರೆ ಬಹುಶಹ ನಾವೂ ಅಪರಿಚಿತರಾಗೇ ಸತ್ತು ಹೋಗುತ್ತಿದೆವೋ ಏನೋ... ಸಾಮಾಜಿಕ ಜಾಲ ತಾಣಗಳು ಬಿಡಿ.. ಮನೆಯಲ್ಲಿ ಸರಿಯಾಗಿ ಟೆಲಿಫೋನೂ ಇಲ್ಲದ ದಿನಗಳಲ್ಲಿ ಅಗಲಿದವರು ನಾವು. 2-3 ದಶಕಗಳ ಹಿಂದೆ ಬಿಟ್ಟು ಹೋದ ನೆನಪುಗಳು ಮತ್ತೆ ಜೀವ ಕೊಡಬಲ್ಲ ಸಾಮರ್ಥ್ಯ ಹೊಂದಿದ್ದು ಈ ಗ್ರೂಪು...
ಜಾಲತಾಣ ಇಂಟರ್ ನೆಟ್ಟಿಗೆ ಬೈಯ್ಯುವವರು ತುಂಬ ಮಂದಿ ಇದ್ದಾರೆ. ಅದೇ ತಂತ್ರಜ್ನಾನ ಇಂದು ನಮ್ಮನ್ನು ಇಂತಹ ವೇದಿಕೆಯಲ್ಲಿ ಎಷ್ಟೋ ವರ್ಷಗಳ ಬಳಿಕ ಸೇರಿಸಿದ್ದು ಎಂಬುದನ್ನು ಒಪ್ಪಿಕೊಳ್ಳಲೇ ಬೇಕು...

ಒಂದೇ ವಯಸ್ಸು, ಒಂದೇ ವಿಷಯದ ಕಲಿಕೆ, ನಾಲ್ಕಾರು ವರ್ಷಗಳು ಒಂದೇ ಬೆಂಚಿನಲ್ಲಿ ಕುಳಿತು ಓದಿದ ಆ ಸಾಮಿಪ್ಯ ಇದೆಯಲ್ಲ ಅದು ಬಹಳಷ್ಟು ಸಮಾನ ಮನಸ್ಕ ಚಿಂತನೆಗಳ ಹಂಚುವಿಕೆಗೆ ನೆರವಾಗುತ್ತದೆ. ನಾವು ಬದುಕಿನಲ್ಲಿ ಎಷ್ಟೇ ದೂರ ಹೋಗಿರಲಿ, ಎಷ್ಟೇ  ಉನ್ನತ ಸ್ಥಾನಗಳನ್ನು, ಹುದ್ದೆಗಳನ್ನು ಗಳಿಸಿರಲಿ, ನಮ್ಮ ಚಿಂತನೆಗಳು, ಬದುಕಿನ ಕುರಿತ ದೃಷ್ಟಿಕೋನ ಎಷ್ಟೇ ಬದಲಾಗಲಿ... ಕ್ಲಾಸ್ ಮೇಟು, ಕ್ಲಾಸ್ ಮೇಟೇ ಆಗಿರುತ್ತಾನೆ. ಆ ಸಲುಗೆ, ಅಧಿಕಾರ, ಕಾಳಜಿ, ಪ್ರೀತಿ, ತುಂಟತನವನ್ನು ಮತ್ತೆಲ್ಲೋ ಹೊರಗಡೆ ದುಡ್ಡಿನಿಂದಲೋ, ಪ್ರಭಾವದಂದಲೇ ಖರೀದಿಸಲು ಸಾಧ್ಯವಿಲ್ಲ...


ಬದುಕೆಂದರೆ ದೊಡ್ಡ ದೊಡ್ಡ ಖುಷಿಗಳಿಗೋಸ್ಕರ ಕಾಯುವುದಲ್ಲ. ದೊಡ್ಡದೊಂದು ತಪಸ್ಸು ಮಾಡಿದಾಗ ಸಂತೋಷ ಎಂಬುದನ್ನು ಯಾರೋ ದೇವರು ಬೆಳ್ಳಿಯ ತಟ್ಟೆಯಲ್ಲಿ ತಂದಿಟ್ಟು ತೆಗೆದುಕೋ ಖುಷಿಯನ್ನು ಅಂತ ಕೊಟ್ಟು ಹೋಗುವುದಲ್ಲ. ಸಣ್ಣದೊಂದು ಕಿರುನಗು, ಪುಟ್ಟ ಪುಟ್ಟ ಸಂತಸಗಳು, ಸಣ್ಣ ಸಣ್ಣ ಸಂಭ್ರಮಗಳೇ ಬದುಕನ್ನು ಕಟ್ಟಿಕೊಡುವುದು... ಸಿಕ್ಕಿದರಲ್ಲೇ ಖುಷಿಯನ್ನು ಅರಸುವುದು, ಸಿಕ್ಕಿದ ಖುಷಿಯನ್ನು ಅರಗಿಸುವುದೇ ಜೀವನದ ವಾಸ್ತವದ ತತ್ವ...


ಹುಡುಕಿದಲ್ಲಿ ಸಿಕ್ಕದ್ದು ಕೆಲವೊಮ್ಮ ಪಡೆದಾಗ ದೊರಕುತ್ತದೆ.... ಅರಸಿದಲ್ಲಿ ಸಿಕ್ಕದ ಸಮಾಧಾನ ಅನಿರೀಕ್ಷಿತವಾಗಿಯೂ ಎದುರಾಗಬಹುದು... ಒಂದು ಅದೃಷ್ಟ, ಒಂದು ಸಂದರ್ಭ, ಒಂದು ಕಾರಣ, ಒಂದು ನೆಪಗಳು ಇಂತಹ ವೇದಿಕೆಗಳಲ್ಲಿ ನಮ್ಮನ್ನು ಸಂಧಿಸುವ ಹಾಗೆ ಮಾಡುತ್ತದೆ. ಯಾವುದೇ ವ್ಯವಹಾರ, ಕೊಡುಕೊಳ್ಳುವಿಕೆಗೆ ಮೀರಿದ್ದು ಸಹಪಾಠಿಗಳ ಗುಂಪು.... ಅದು ನಾವು ಬದುಕಿನಲ್ಲಿ ಗಳಿಸಿದ ಒಂದು ಆಸ್ತಿಯೂ ಹೌದು....

ಎಷ್ಟೇ ವಯಸ್ಸು ಸಂದರೂ ನಮ್ಮೇಲ್ಲರ ವಯಸ್ಸು ಒಂದೇ ಆಗಿರುತ್ತದೆ... ಎಷ್ಟೇ ವರ್ಷ ಕಳೆದರೂ ನಾವು ಕಲಿತ ಶಾಲೆ ಅದೇ ಆಗಿರುತ್ತದೆ...ಎಷ್ಟೇ ವರ್ಷ ಕಳೆದರೂ ನಮಗೆ ಕಲಿಸಿದ ಮೇಷ್ಟ್ರುಗಳೂ ಅವರೇ ಆಗಿರುತ್ತಾರೆ....
ಕೈಜಾರಿ ಹೋಗಿದೆ ಅಂದುಕೊಂಡದ್ದು ಮತ್ತೆ ಸಿಕ್ಕಿದಷ್ಟು ಆಹ್ಲಾದಕತೆಯನ್ನು ತಂದುಕೊಡಬಲ್ಲದ್ದು ಹಳೆ ಸಹಪಾಠಿಗಳ ಪುನರ್ ಮಿಲನ... ಅದು ಈ ಗ್ರೂಪಿನಲ್ಲಾಗಿದೆ....
ಕಳೆದ ದಿನಗಳಿಗಿಂತ ಕಳೆಯಲಿರುವ ದಿನಗಳ ಸಂಖ್ಯೆ ಹೆಚ್ಚೋ ಕಡಿಮೆಯೋ ನಮಗೆ ಗೊತ್ತಿಲ್ಲ. ಎದುರಿಗೆ ಇರುವುದು ಇಂದು ಮಾತ್ರ... ಅದನ್ನು ಹೆಚ್ಚು ಅರ್ಥಪೂರ್ಣವಾಗಿಸುವಲ್ಲಿಗೆ ಈ ಗ್ರೂಪು ನೆರವಾಗಲಿ...


ವಂದನೆಗಳು..

-ಕೃಷ್ಣಮೋಹನ (08.06.2020).

Post a Comment

0 Comments