Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ-02

ನಾರಾಯಣರ ಸವಾಲು 



ವಿಶೇಷ ಸೂಚನೆ: ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು ಮತ್ತು ಹೆಸರುಗಳು ಕೇವಲ ಕಾಲ್ಪನಿಕ, ನೈದಜ ಸನ್ನಿವೇಶ ಯಾ ವ್ಯಕ್ತಿಗಳಿಗೆ ಹೋಲಿಕೆ ಕಂಡರೆ ಅದು ಕೇವಲ ಕಾಕತಾಳೀಯ. ಈ ಕುರಿತು ಲೇಖಕನ ತಲೆ ತಿನ್ನುವಂತಿಲ್ಲ!!!


🍠🍠🍠🍠🍠🍠


ಫೋನ್ ರಿಸೀವರ್ ಹಿಡಿದಿದ್ದ ನಾರಾಯಣರ ದೇಹ ನಖಶಿಖಾಂತ ಕಂಪಿಸುತ್ತಿತ್ತು...

ನಾರಾಯಣರನ್ನು ನೀವು ಯಾರು ? ಅಂತ ಈ ತನಕ ಕೇಳಿದವರಿರಲಿಲ್ಲ.

ಅಂಥದರಲ್ಲಿ ಈ ಯುವ ಉಪನ್ಯಾಸಕ ತನ್ನನ್ನು ಪ್ರಶ್ನಿಸಿದ್ದು ಅವರಿಗೆ ಭಯಂಕರ ಅಪಮಾನ ಅನ್ನಿಸಿತು. ಅವರು ಸವಾಲು ಹಾಕಿಯೇಬಿಟ್ಟರು.

ಮುಂದಿನ ಭಾನುವಾರ ತಾವು ನನ್ನ ಉಳ್ಳಾಲದ ಬೆಂಗ್ರೆಯಲ್ಲಿರುವ ಮೈದಾನಕ್ಕೆ ಬನ್ನಿ. ಅಲ್ಲಿ ನನ್ನ ಸತ್ವ ಪರೀಕ್ಷೆಯಾಗಲಿ. ಈ ನಾರಾಯಣರು ಯಾರೆಂದು ಊರವರು ಗುರುತಿಸುವಲ್ಲಿ ವಿಫಲರಾದರೆ ನಾನು ನಿಮಗೆ ಒಂದು ಆನೆಯ ಮೇಲೆ ಒಬ್ಬ ವ್ಯಕ್ತಿ ನಿಂತು ಒಂದು ಪೆಲತ್ತರಿಯನ್ನು ಮೇಲೆ ಚಿಮ್ಮಿದಾಗ ಎಷ್ಟು ಎತ್ತರವಾಗುತ್ತದೋ ಅಷ್ಟು ಎತ್ತರದ ಹಲಸಿನ ಹಣ್ಣಿನ ರಾಶಿಯನ್ನು ನೀಮಗೆ ಧಾರೆ ಎರೆದು ಕೊಡುತ್ತೇನೆ. ಅದೇ ನೀವು ನಾನೊಬ್ಬ ಅನಾಮಿಕ ವ್ಯಕ್ತಿಯೆಂದು ನಿರೂಪಿಸಿದರೆ ನಾನು ನಿಮ್ಮ ಸೇವಕನಾಗಿ ಬರುತ್ತೇನೆ...

ನಾರಾಯಣರ ಅಬ್ಬರ ಕೇಳಿ ಭಗೀರಥನಿಗೆ ಒಮ್ಮೆ ದಂಗಾಯಿತು. ತಾನು ಯಾಕಾದರೂ ಈ ದೊಡ್ಡ ಮನುಷ್ಯನ ಸುದ್ದಿಗೆ ಹೋದೆನೋ ಅಂತ ಆತಂಕ ಆರಂಭವಾಯಿತು. ಆದರೂ ಚಾಲೆಂಜ್ ಅಂದ ಮೇಲೆ ಚಾಲೆಂಜ್ ಅಲ್ವೇ... ಅದಕ್ಕಾಗಿ ಆಯ್ತು ಸರ್. ನಾನು ಮುಂದಿನ ಭಾನುವಾರ ಬೆಂಗ್ರೆಗೆ ಬರುತ್ತೇನೆ ಅಂತ ಫೋನ್ ಇರಿಸಿದ ಭಗೀರಥ...

.....


ನಂತರ ಭಗೀರಥ ತನ್ನ ಸಹಪಾಠಿ ಉಳ್ಳಾಲದ ಗುಣಶೀಲ ಕುಮಾರನಿಗೆ ಕರೆ ಮಾಡಿದ.


ಗುಣಶೀಲ ಕುಮಾರ ಹಾಗೂ ನಾರಾಯಣರು ಗಳಸ್ಯ ಕಂಠಸ್ಯ ಸ್ನೇಹಿತರು. ಗುಣಶೀಲ ಉತ್ತಮ ಹಾಡುಗಾರನೂ ಹೌದು. ನೃತ್ಯವನ್ನೂ ಮಾಡುತ್ತಿದ್ದ. ತನ್ನದೇ ಆದ ವ್ಯವಹಾರ ಉದ್ದಿಮೆ ನಡೆಸುತ್ತಿದ್ದ.... ನಾರಾಯಣರ ಬಗ್ಗೆ ಆತನಿಗೆ ಚೆನ್ನಾಗಿ ತಿಳಿದಿತ್ತು.... ಗುಣಶೀಲನ ರೇಶ್ಮೆಯಂಥಹ ನಯವಾದ ಕೂದಲನ್ನು ನಾರಾಯಣರು ಯಾವಾಗಲೂ ಹೊಗಳುತ್ತಿದ್ದರು...

ಗುಣಶೀಲನಿಗೆ ಕರೆ ಮಾಡಿದ ಭಗೀರಥ ಅಲವತ್ತುಕೊಂಡ.

ಅವು ಏರ್ ಮಾರಾಯ ಜನ ನಾರಾಯಣರ್. ಏರೆಡ ಕೇಂಡಲ ಪನ್ಪುಜ್ಜೆರ್. ಆ ಜನ ಏರ್... ದಾದ ವಿಷಯ? ಒರ ಪಣ್ ಮಾರಾಯ. ಆ ಜನ ಎನಡ ಇತ್ತೆ ಚಾಲೆಂಜ್ ಪಾಡ್ದ್ಂಡ್....

ಭಗೀರಥನ ಆತಂಕ ಕಂಡು ನಸುನಕ್ಕ ಗಣಶೀಲ ಹೇಳಲು ಶುರು ಮಾಡಿದ....

🚶‍♂️🚶‍♂️🚶‍♂️🚶‍♂️🚶‍♂️🚶‍♂️🚶‍♂️🚶‍♂️

ನಾರಾಯಣರು ಉಳ್ಳಾಲಗುತ್ತಿನ ಪ್ರಗತಿಪರ ಹಲಸು ಬೆಳೆಗಾರ. ಆಜಾನುಬಾಹು, ಬನ್ನಂಗಾಯಿ ಹಾಗೂ ಅವಲಕ್ಕಿ ತಿಂದು ಕಟ್ಟುಮಸ್ತಾದ ದೇಹ ಬೆಳೆಸಿಕೊಂಡಿದ್ದರು. ಅವರ 20 ಎಕ್ರೆ ಜಮೀನನಲ್ಲಿ 255 ತಳಿಯ ಹಲಸಿನ ಮರಗಳಿದ್ದವು. ಸ್ವತಹ ಅವರು ವಿವಿಧ ದೇಶಗಳಿಗೆ ಹೋಗಿ ತಂದು ನೆಟ್ಟ ಗಿಡಗಳವು. ಕಷ್ಟಪಟ್ಟು ಹಲಸಿನ ಬೆಳೆ ಹಾಗೂ ಉತ್ಪನ್ನಗಳ ತಯಾರಿಯಲ್ಲಿ ಹೆಸರು ಮಾಡಿದ್ದ ಅವರು ಕೋಟ್ಯಾಧೀಶ್ವರರೂ ಆಗಿದ್ದರು...ಆದರೆ ಸರಳ, ಸಜ್ಜನಿಕೆಯ ಮನುಷ್ಯ.


ಅವರಿಗೆ ಮುಂಬೈ ಹಾಗೂ ಅರಬ್ ದೇಶದಲ್ಲೂ ವ್ಯವಹಾರವಿತ್ತು. ಅವರ ಪ್ರತಿನಿಧಿಗಳು ಅಲ್ಲಿ ನಾರಾಯಣರ ಹಲಸಿನ ಕಾಯಿಯನ್ನು ಅವರ ಸ್ನೇಹಿತ ಪಾಲುದಾರರು ಮಾರಾಟ ಮಾಡುತ್ತಿದ್ದರು. ಮುಂಬೈಯಲ್ಲಿ ದಯಾನಂದ ನಾಯಕ್, ಪವಮಾನ ಶೆಟ್ಟಿ, ವಿನುತಾ, ಭವ್ಯಶ್ರೀ ಅವರು ಪಾಲುದಾರರು, ಗಲ್ಫಿನಲ್ಲಿ ಫಮ್ಮರ್ ಉರೂಕ್ ಹಾಗೂ ರಬ್ದುಲ್ ಅಶೀದ್ ಅವರ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಇವರ ಹಲಸಿನ ಕಾಯಿಯನ್ನು ಉದ್ಯಮಿ ನವನವೀನ ಶೆಟ್ಟಿ ಅವರು ತಮ್ಮ ಟ್ರಕ್ಕುಗಳಲ್ಲಿ ಮುಂಬೈಗೆ ಕೊಂಡು ಹೋಗುತ್ತಿದ್ದರು.

ಮುಂಬೈಯಲ್ಲಿ ಗ್ರಾಹಕರ ಜೊತೆ ಮಾತನಾಡಲು ನಾರಾಯಣರು ಮರಾಠಿ ಕಲಿತಿದ್ದರು. ಮೀಯಪದವಿನ ಆಳ್ವರಸರ ಮನೆತನದ ಮೀನಾಕ್ಷಿ ಆಳ್ವ ಅವರು ಸಫಲ್ಯರಿಗೆ ಮರಾಠಿ ಕಲಿಸಿದ್ದರು....

ಹೀಗೆ ಅವರ ವಹಿವಾಟು ಸರಾಗವಾಗಿ ನಡೆಯುತ್ತಿದ್ದಾಗ, ಒಮ್ಮೆ ದುಷ್ಟಮೋಹನ ಎಂಬ ಪತ್ರಕರ್ತನೆಂದು ಹೇಳಿಕೊಂಡು ಓಡಾಡುತ್ತಿದ್ದ ವ್ಯಕ್ತಿ ನಾರಾಯಣರ ಹಲಸಿನ ಉದ್ಯಮದ ಬಗ್ಗೆ ಅವರತ್ರ ಕೇಳದೆ ಸ್ಥಳೀಯ ಪತ್ರಿಕೆಯೊಂದರಲ್ಲಿ ಚಿತ್ರಸಹಿತ ಲೇಖನ ಬರೆದು ಹಾಕಿದ. ಅಲ್ಲಿಂದ ನಾರಾಯಣರಿಗೆ ಉಪದ್ರ ಆರಂಭವಾಯಿತು...

ಜನರಿಗೆ ಅವರ ತೋಟದ ಬಗ್ಗೆ ಮಾಹಿತಿ ತಿಳಿದು ಕಳ್ಳರ ಕಾಟ ಜಾಸ್ತಿಯಾಯಿತು. ಆಗಾಗ ಇಡೀ ಹಲಸಿನ ಕಾಯಿಗಳೇ ತೋಟದಿಂದ ಮಾಯವಾಗಲು ತೊಡಗಿತು. ಇದರಿಂದ ನಾರಾಯಣರು ಕಂಗೆಟ್ಟರು. ಕಾವಲುಗಾರನನ್ನು ಇಟ್ಟರೂ ಪ್ರಯೋಜನವಾಗಲಿಲ್ಲ. ತನ್ನ ಸ್ನೇಹಿತ ಆರಕ್ಷಕ ದಿನೇಶ್ ಕಾಮತ್ ಗೆ ತಮ್ಮ ಗೋಳು ತೋಡಿಕೊಂಡಾಗ ಕಾಮತ್ ಹೇಳಿದರು, ಸ್ವಾಮಿ ನಿಮ್ಮ ಹಲಸಿನ ತೋಟ ಕಾಯಲು ಪೊಲೀಸರಿಗೆ ಪುರುಸೊತ್ತಿಲ್ಲ, ನೀವೇ ವ್ಯವಸ್ಥೆ ಮಾಡಿಕೊಳ್ಳಿ ಅಂತ.

ನಂತರ ಅವರೊಂದು ಉಪಾಯ ಮಾಡಿದರು. ತಮ್ಮ ಮೂವರು ಮಕ್ಕಳಾದ ಶಂಕರನಾರಾಯಣ, ಸತ್ಯನಾರಾಯಣ, ಹರಿನಾರಾಯಣರ ಹೆಸರಿಗೆ ಆಸ್ತಿಯನ್ನು ಸಮವಾಗಿ ಪಾಲು ಮಾಡಿದರು. ಅವರ ಹೆಸರಿಗೆ ಮರಗಳನ್ನು ವಿಂಗಿಡಿಸಿದರು. ನಂತರ ಹಲಸಿನ ಮರದಲ್ಲಿ ಫಲಕ ಬರೆದು ಹಾಕಿದರು. ಈ ಹಲಸಿನ ಕಾಯಿಗಳು ನಾರಾಯಣರ ಮಕ್ಕಳಿಗೆ ಮಾತ್ರ ಮೀಸಲು, ಉಳಿದವರು ಮುಟ್ಟುವಂತಿಲ್ಲ ಅಂತ....

 ಅಂದಿನಿಂದ ಕಳವು ನಿಂತಿತು!!!

ಆದರೆ ನಾರಾಯಣರು ಬೋರ್ಡ್ ಹಾಕಿದ ವಿಷಯ ದುಷ್ಟಮೋಹನನ ಮೂಲಕ ಪುನಃ ಪೇಪರಿನಲ್ಲಿ ಸುದ್ದಿಯಾಗಿ ಬಂತು. ನಾರಾಯಣರಿಗೆ ಕೆಂಡಾಮಂಡಲ ಸಿಟ್ಟು ಬಂತು. ತಮ್ಮ ಡಬಲ್ ಬ್ಯಾರಲ್ ಗನ್ ಹಿಡಿದುಕೊಂಡು ದುಷ್ಟಮೋಹನನ್ನು ಸುಟ್ಟುಹಾಕುತ್ತೇನೆ ಅಂತ ಹೊರಟರು. ಸಕಾಲಕ್ಕೆ ಮಧ್ಯಪ್ರವೇಶಿಸಿದ ಗುಣಶೀಲ ಕುಮಾರ್ ಅವರನ್ನು ಸಮಾಧಾನ ಪಡಿಸಿದ ಕಾರಣ ದುಷ್ಟಮೋಹನನ ಪ್ರಾಣ ಉಳಿಯಿತು. ನಂತರ ದುಷ್ಟಮೋಹನ ನಾರಾಯಣರ ಸುದ್ದಿಗೇ ಹೋಗಲಿಲ್ಲ.


ನಾರಾಯಣರ ಹಲಸಿನ ಹಣ್ಣಿನ ಶ್ಯಾಂಪೂ ಬಳಸಿಯೇ ಗುಣಶೀಲ ಮಿರಮಿರನೆ ಮಿಂಚುವ ಕೂದಲು ಹೊಂದಿದ್ದಾನೆ ಅಂತ ಊರವರು ಮಾತನಾಡಿಕೊಳ್ಳುತ್ತಿದ್ದರು. ಅಷ್ಟು ಆತ್ಮೀಯತೆ ಅವರ ನಡುವೆ ಇತ್ತು....
.....

ಅಂತೂ ಇಂತೂ... ಭಾನುವಾರ ಬಂತು. ಭಗೀರಥ ಹಾಗೂ ನಾರಾಯಣರ ನಡುವಿನ ಪಂಥಾಹ್ವಾನ ಸಾಬೀತಾಗುವ ದಿನ. ನಿರೀಕ್ಷೆಯಂತೆ ನಾರಾಯಣರ ಕಡೆಯಿಂದ 500 ಜನ ಉಳ್ಳಾಲ ಮೈದಾನದಲ್ಲಿ ಸೇರಿದ್ದರು. ಭಗೀರಥ ಏಕಾಂಗಿ. ನನ್ನನ್ನು ಗೊತ್ತಿಲ್ಲದವರು ಯಾರಿದ್ದೀರಿ... ಕೈ ಎತ್ತಿ ನಾರಾಯಣರು ಅಬ್ಬರಿಸಿದರು... ಯಾರೂ ಕೈ ಎತ್ತಲಿಲ್ಲ....

ನಿರೀಕ್ಷೆಯಂತೆ ಭಗೀರಥ ಪಂಥದಲ್ಲಿ ಸೋತು ಹೋದ. ಉಪನ್ಯಾಸಕನಾದ ತಾನು ನಾರಾಯಣರ ಸೇವಕನಾಗಿರಬೇಕಾದ್ದು ನೆನಸಿ ಆತನಿಕೆ ಅಳು ಬಂತು. ವಿಷಾದದ ಕವನವೊಂದು ಹುಟ್ಟಿಕೊಂಡಿತು. ಸೋಲನ್ನು ನಿರೀಕ್ಷಿಸಿದ್ದ ಭಗೀರಥ ಬರುವಾಗಲೇ ಸರ್ಕಾರದ ಮೂಲಕ ಬರುವ ಕಾಳಸಂತೆಯಲ್ಲಿ ಸಿಗುವ ನೀಲಿ ಬಣ್ಣದ ಚಿಮಿಣಿ ಎಣ್ಣೆಯನ್ನು ಕ್ಯಾನಿನಲ್ಲಿ ತಂದಿದ್ದ... ಅದನ್ನು ಸುರಿದು ಪ್ರಾಣತ್ಯಾಗ ಮಾಡುತ್ತೇನೆ. ಈ ಅವಮಾನ ತಾಳಲಾರೆ ಅಂತ.... ಬಹಿರಂಗವಾಗಿ ಹೇಳಿದ...

.......

ನಾರಾಯಣರು ಮಾತನಾಡಲಿಲ್ಲ... ಭಗೀರಥ ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡ.... ಫುಲ್ ನಿಶ್ಯಬ್ಧ ವಾತಾವರಣ.... ಜೇಬಿನಿಂದ ಬೆಂಕಿಪೊಟ್ಟಣ ತೆಗೆದು ಕಡ್ಡಿಯನ್ನು ಕೈಗೆತ್ತಿಕೊಂಡ.......

ಇನ್ನೇನು ಗೀರಬೇಕು....
ಅಷ್ಟರಲ್ಲಿ

ನಿಲ್ಲಿಸಿ....


ಎಂಬ ಕೂಗು ಕೇಳಿತು...!!!!

ಎಲ್ಲರೂ ಗೇಟಿನತ್ತ ನೋಡಿದರು.

ಅಲ್ಲಿ...

ನಾರಾಯಣರ ಪಟ್ಟ ಶಿಷ್ಯ, ಖ್ಯಾತ ಹುಲಿವೇಷಗಾರ ಜಗನ್ನಾಥ ಕೈರಂಗಳ ನಿಂತಿದ್ದ...

ನಿಲ್ಲಿಸಿ...

ಎಂದು ಮತ್ತೊಮ್ಮೆ ಕಿರುಚಿದ ಆತ ನಿಧಾನವಾಗಿ ಭಗೀರಥನತ್ತ ನಡೆದು ಬರಲು ಆರಂಭಿಸಿದ....!

🚶‍♂️🚶‍♂️🚶‍♂️🚶‍♂️🚶‍♂️


(ಸಶೇಷ)

Post a Comment

0 Comments