Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -04


ಅಚಿನ್ ಸಲ್ಮೇಡಾ  ಫಜೀತಿಗೆ ಸಿಲುಕಿದ್ದು ಹೇಗೆ ? 







(ಇದರಲ್ಲಿ ಬರುವ ಎಲ್ಲ ಪಾತ್ರ ಹಾಗೂ ಸನ್ನಿವೇಶಗಳು ಸಂಪೂರ್ಣ ಕಾಲ್ಪನಿಕ. ನಿಜ ಬದುಕಿನ ಹೆಸರು ಅಥವಾ ಸನ್ನಿವೇಶಗಳಿಗೆ ಯಾವುದೇ ಹೋಲಿಕೆ ಇದ್ದರೆ ಅದು ಕೇವಲ ಕಾಕತಾಳೀಯ. ಹಾಗೂ ಇಲ್ಲಿ ಉಲ್ಲೇಖಿಸಿದ ಎಲ್ಲ ಸ್ವಾರಸ್ಯಕರ ಸನ್ನಿವೇಶಗಳು ಕೇವಲ ತಮಾಷೆಯ ಉದ್ದೇಶಕ್ಕೆ ಬರೆದದ್ದು-ಲೇಖಕ)

.................

ನಾರಾಯಣರ ಅಂಬಸಿಡರ್ ಕಾರು ಫಿಶರೀಸ್ ಕಾಲೇಜು ದಾಟಿ ಶರವೇಗದಿಂದ ಧಾವಿಸುತ್ತಿತ್ತು. ತನಗೆ ನೋಟಿಸ್ ನೀಡಿದ ಲೆಕ್ಕ ಪರಿಶೋಧಕಿ ವಿದ್ಯಾರಶ್ಮಿಯನ್ನು ಸುಟ್ಟು ಹಾಕುವುದು ಅವರ ಆವೇಶದ ಸಿಟ್ಟಿಗೆ ಕಾರಣ.



ಇತ್ತ ಕಡೆ ಕುದುರೆ ಸಾರೋಟಿನಲ್ಲಿ ಮಹಾಕಾಳಿಪಡ್ಪು ಮೂಲಕ ಹಂಪನಕಟ್ಟೆ ತಲುಪಲೆಂದು ಜಗನ್ನಾಥ ಹಾಗೂ ಗುಣಶೀಲ ಧಾವಿಸುತ್ತಿದ್ದರು. ಆದರೆ ಅವರ  ದುರದೃಷ್ಟಕ್ಕೆ ರೈಲ್ವೇ ಕ್ರಾಸಿಂಗ್ ನಲ್ಲಿ ಗೇಟ್ ಹಾಕಿತ್ತು!!!!



ಎಂತ ಮಾಡುವುದೆಂದು ಅವರಿಗೆ ಗೊತ್ತಾಗಲಿಲ್ಲ. ನೇರವಾಗಿ ಹೋಗಿ ನಾರಾಯಣರನ್ನು ತಡೆಯದಿದ್ದರೆ ಖಂಡಿತಾ ವಿದ್ಯಾರಶ್ಮಿಯ ಹತ್ಯೆಯಾಗುತ್ತದೆ. ರೈಲು ಕ್ರಾಸ್ ಆಗುವ ತನಕ ಕಾಯುವಂತಿರಲಿಲ್ಲ.

ತಕ್ಷಣ ಗುಣಶೀಲನಿಗೆ ಒಂದು ಉಪಾಯ ಹೊಳೆಯಿತು. ಅಲ್ಲಿಯೇ ಇದ್ದ ಟೆಲಿಫೋನ್ ಬೂತಿಗೆ ತೆರಳಿದ. ಮಿಲಾಗ್ರಿಸಿನಲ್ಲಿ ಕಚೇರಿ ಹೊಂದಿದ್ದ ಜತಿನ್ ಗೆ ಕರೆ ಮಾಡಿ ಹೇಳಿದ, ಹೀಗಿಗೇ ವಿಷಯ. ಸಫಲ್ಯರನ್ನು ತಡೆಯದಿದ್ದರೆ ವಿಷಯ ಗುಂಡಾಂತರ ಆಗುವುದು ಎಂದು.


....


ಒಂದು ಕ್ಷಣವೂ ತಡ ಮಾಡದ ಜತಿನ್ ತನ್ನ ಕಚೇರಿಯಿಂದ ಹೊರ ಬಂದ. ಪಕ್ಕದ ಬ್ಯಾಂಕಿನ ಕೆಲ ಸಿಬ್ಬಂದಿಯನ್ನೂ ಸೇರಿಸಿ ಮಿಲಾಗ್ರಿಸಿನಲ್ಲಿ ನಾರಾಯಣರ ಕಾರನ್ನು ತಡೆಯಲು ಕಾಯುತ್ತಾ ನಿಂತ.

.....

ಆದರೆ ವಿಧಿ ನಿರ್ಣಯ ಬೇರೆಯೇ ಇತ್ತು. ಹಿಂದಿನ ದಿನ ರಾತ್ರಿ ಹಲಸಿನ ಹಣ್ಣಿನ ಪಾಯಸವನ್ನು ತುಸು ಹೆಚ್ಚೇ ಸೇವಿಸಿದ್ದ ನಾರಾಯಣರಿಗೆ ಪಂಪ್ ವೇಲ್ ಮಹಾವೀರ ವೃತ್ತ ತಲುಪಿದಾಗ ಹೊಟ್ಟೆ ಗುಡುಗುಡು ಅನ್ನಲು ಶುರುವಾಯಿತು. ಹೊಟ್ಟೆ ನೋವು ಆರಂಭವಾಯಿತು. ತಕ್ಷಣ ಡೌನ್ ಲೋಡ್ ಮಾಡುವುದು ಬೆಟರ್ ಎಂಬ ಅರ್ಜೆಂಟ್ ಹುಟ್ಟಿಕೊಂಡಿತು. ಮತ್ತೇನು ಮಾಡುವುದು?



ಅಲ್ಲಿಯೇ ಸಮೀಪ ಇದ್ದ ಪೆಂಟಗಾನ್ ಹೊಟೇಲಿಗೆ ಹೋಗಿ ಅದಕ್ಕೋಸ್ಕರ ಒಂದು ಸ್ಪೆಷಲ್ ರೂಂ ಬುಕ್ ಮಾಡಿ. ಪ್ರಕೃತಿಯ ಕರೆಗೆ ಓಗೊಟ್ಟರು. ಹೊಟ್ಟೆ ನೋವು ಕಡಿಮೆಯಾಗುತ್ತಿರಲಿಲ್ಲ. ಅದಕ್ಕಾಗಿ ವೈದ್ಯಕೀಯ ಕ್ಷೇತ್ರದಲ್ಲಿದ್ದ ತನ್ನ ಹಳೆಯ ಸಹಪಾಠಿ ಊರ್ಮಿಳಾ ಅವರಿಗೆ ಕರೆ ಮಾಡಿ, ಬೇಕಾದ ಮಾತ್ರೆಯ ವಿವರ ತಿಳಿದುಕೊಂಡರು. ಚಾಲಕನನ್ನು ಕಳುಹಿಸಿ, ಸ್ವಲ್ಪ ಸುಧಾರಿಸಿದ ಬಳಿಕ ಮರಳಿ ಉಳ್ಳಾಲದ ಮನೆಗೆ ಮರಳಿದರು. ಅಷ್ಟು ಹೊತ್ತಿಗೆ ಅವರಿಗೆ ತಾನು ಹೊರಟ ಕಾರ್ಯ ಮರೆತುಹೋಗಿತ್ತು.


ಜತಿನ್, ಹಾಗೂ ನಂತರ ಮಿಲಾಗ್ರಿಸ್ ತಲುಪಿದ ಗುಣಶೀಲ ಹಾಗೂ ಜಗನ್ನಾಥನಿಗೂ ನಾರಾಯಣರು ಎಲ್ಲಿಗೆ ಹೋದರೆಂದೇ ಗೊತ್ತಾಗಲಿಲ್ಲ. ನಂತರ ಅವರೆಲ್ಲ ವಿದ್ಯಾರಶ್ಮಿಯ ಕಚೇರಿಗೆ ಹೋಗಿ, ಆಕೆಗೆ ನಾರಾಯಣರ ವ್ಯಕ್ತಿತ್ವದ ಬಗ್ಗೆ ಪರಿಚಯ ಮಾಡಿಕೊಟ್ಟರು. ಪತ್ರಕರ್ತ ದುಷ್ಟ ಬರೆದಿದ್ದ ನಾರಾಯಣರ ಆತ್ಮಚರಿತ್ರೆ “ಹುಲುಸಾಗಿ ಬೆಳೆದ ಹಲಸು” ಕೃತಿಯನ್ನು ಕೊಟ್ಟು ಅದನ್ನು ಓದಲು ಹೇಳಿದರು.

ಸುಮ್ಮ ಸುಮ್ಮನೇ ನಾರಾಯಣರ ಕುರಿತು ಟೀಕೆ ಮಾಡದಂತೆ ಸಲಹೆ ನೀಡಿದರು. ನಾರಾಯಣರು ಮುಂಗೋಪಿಯಾದರೂ ನೇರ ನಡೆ ನುಡಿಯ, ಸರಳ ಸಜ್ಜನ ಎಂದು ಮನದಟ್ಟು ಮಾಡಿಸಿದರು. ಅವಳಿಗೂ ಇದು ಅಂದಾಜಾಗಿ. ತಾನಿನ್ನು ನಾರಾಯಣರ ಸುದ್ದಿಗೆ ಬರುವುದಿಲ್ಲ ಎಂದು ತಿಳಿಸಿದಳು.

ಆದರೆ ಸದಾ ಕೆಲಸದಲ್ಲಿ ಬಿಝಿ ಆಗಿರುವ ಆಕೆ ಆ ಪುಸ್ತಕವನ್ನು ತೆಗೆದು ಅಟ್ಟಕ್ಕೆ ಎಸೆದವಳು, ನಂತರ ಓದಲೇ ಇಲ್ಲ!!!


………..

ಇದಾದ ನಂತರ ಸಾಹಿತ್ಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದ ಓರ್ವ ನೃತ್ಯಗಾರ ಅಚಿನ್ ಸಲ್ಮೇಡಾ ಎಂಬಾತ ನಾರಾಯಣರ ಬದುಕಿನ ಕುರಿತು ಸಂಶೋಧನೆಗೆ ಆರಂಭಿಸಿದ. ಆತ, ನಾರಾಯಣರ ಮನೆ ಪಕ್ಕದಲ್ಲಿರುವ ಗುಣಶೀಲನ ಮನೆಯಲ್ಲೇ ವಾಸ್ತವ್ಯ ಹೂಡಿ ನಾರಾಯಣರ ಕುರಿತು ಮಾಹಿತಿ ಸಂಗ್ರಹ ಆರಂಭಿಸಿದ. ಆತನ ಪುಣ್ಯಕ್ಕೆ ನಾರಾಯಣರೂ  ಯಾವುದೇ ಆಕ್ಷೇಪ ಹೇಳಲಿಲ್ಲ.



ಆತನ ಅಧ್ಯಯನದ ವಿಷಯ “ಹಲಸಿನ ಕಾಯಿ ಸಂರಕ್ಷಣೆಯಲ್ಲಿ ನಾರಾಯಣರ ಕಾಳಜಿ-ಉಳ್ಳಾಲದಲ್ಲಿ ಒಂದು ಅಧ್ಯಯನ”

ಆತನಿಗೆ ಹಿರಿಯ ಉಪನ್ಯಾಸಕಿ ವಿಭಾ ಪೂಂಜ ಡಾಕ್ಟರೇಟ್ ಗೈಡ್ ಆಗಿದ್ದರು.

ಈ ಅಧ್ಯಯನದಲ್ಲಿ ಸಲ್ಮೇಡಾನಿಗೆ ನಾರಾಯಣರ ಕುರಿತು ಅನೇಕ ವಿಚಾರಗಳು ತಿಳಿದುಬಂತು.

..............



ನಾರಾಯಣರು ತುಂಬ ಅಚ್ಚುಕಟ್ಟು ಮನುಷ್ಯ. ದಿನಾ ಗರಡಿಗೆ ಹೋಗಿ ದೇಹದಂಡನೆ ಮಾಡುತ್ತಿದ್ದರು. ಬಿಳಿ ಶರ್ಟು, ಬೆಳ್ಳನೆ ಶಾಲು, ಪಂಚೆ, ಚರ ಪರ ಸದ್ದು ಮಾಡುತ್ತಿದ್ದ ಚರ್ಮದ ಚಪ್ಪಲಿಗಳು, ತಪ್ಪ ಮುಂಡಾಸು, ಹುರಿಮೀಸೆ, ಆಜಾನುಬಾಹು ನಾರಾಯಣರ ಉಡುಪಿನ ಹಾಗೆ ಅವರ ಮನಸ್ಸೂ ಶುಭ್ರ.

ಅವರು ಹಲಸನ್ನು ಎಷ್ಟು ಪ್ರೀತಿಸುತ್ತಿದ್ದರು ಎಂದರೆ ಪ್ರತಿ ಹಲಸಿನ ಕಾಯಿಯನ್ನೂ ಸ್ವಂತ ಮಕ್ಕಳ ಹಾಗೆ ಕಾಣುತ್ತಿದ್ದರು. ಹಲಸಿನ ಕಾಯಿಗೆ ಮಳೆ ನೀರು ಬೀಳದಂತೆ ಟೋಪಿ ಇಡುತ್ತಿದ್ದರು. ಇದನ್ನು ಈಗಲೂ ಅವರ ಶಿಷ್ಯ ಜಗನ್ನಾಥ ಪಾಲಿಸುತ್ತಿದ್ದು, ಅವನ ಮನೆಯಲ್ಲಿ ಈಗಲೂ ನೀವು ಹಲಸಿನ ಕಾಯಿಗೆ ಟೊಪ್ಪಿ ಇಡುವುದನ್ನು ಕಾಣಬಹುದು!

.....

ಅವರಿಗೆ ಹಲಸಿನ ಬಗ್ಗೆ ತಿಳಿದಿರದ ವಿಚಾರಗಳೇ ಇರಲಿಲ್ಲ ಅನ್ನಬಹುದು. ಹಲಸಿನ ತಳಿಗಳು, ಕಸಿ ಕಟ್ಟುವುದು, ರೋಗಬಾಧೆ, ಹಲಸಿನ ಕಟಾವು, ಸಂರಕ್ಷಣೆ, ಮಾರುಕಟ್ಟೆ, ಹಲಸಿನ ಖಾದ್ಯಗಳು ಎಲ್ಲದರ ಬಗ್ಗೆ ತಿಳಿದುಕೊಂಡಿದ್ದರು.

ಅವರ ಮನೆ ಅಂಗಳದಲ್ಲೇ ಒಂದು ತುಳುವೆ ಹಲಸಿನ ಮರದ ಮರ ಇತ್ತು. ಅದು ಅವರ ಜೀವಕ್ಕೆ ಸಮಾನಾದ ಗಿಡ. ಆ ಮರದಲ್ಲಿ ಹಣ್ಣಾದರೆ ಯಾರಿಗೂ ಮುಟ್ಟಲು ಬಿಡುತ್ತಿರಲಿಲ್ಲ. ಶೂಟ್ ಮಾಡ್ತೇನೆ ಅಂತಾ ಇದ್ರು. ಸ್ವತಃ ಅವರೇ ಕೊಯ್ದು ಅದನ್ನು ಕೈಯ್ಯಿಂದಲೇ ಬಿಚ್ಚಿ ಎಲ್ಲರಿಗೂ ತಿನ್ನಲು ಕೊಡುತ್ತಿದ್ದರು. ಅದರ ಹಣ್ಣು ಅಷ್ಟೊಂದು ರುಚಿ.

ಆ ಮರದಲ್ಲಿ ವರ್ಷಕ್ಕೆ ನಾಲ್ಕೇ ಹಣ್ಣು ಆಗುತ್ತಿತ್ತು. ಅದನ್ನು ಇನ್ಯಾರಾದರೂ ಮುಟ್ಟಿದರೆ ಅವರಿಗೆ ಕೆಂಡದಂಥ ಸಿಟ್ಟು ಬರುತ್ತಿತ್ತು. ಇದು ಆ ಎಸ್ಟೇಟಿನ ಎಲ್ಲರಿಗೂ ಗೊತ್ತಿತ್ತು. ಗುಣಶೀಲ ಹಾಗೂ ಜಗನ್ನಾಥನಿಗೂ ಗೊತ್ತಿತ್ತು.



ಆದರೆ ಹೊಸದಾಗಿ ಬಂದಿದ್ದ ಅಚಿನ್ ಸಲ್ಮೇಡಾನಿಗೆ ತಿಳಿದಿರಲಿಲ್ಲ. ಒಂದು ದಿನ ನಾರಾಯಣರು ಮಂಗಳೂರಿನ ಬಂಡಸಾಲೆಗೆ ಹೋಗಿದ್ದ ದಿವಸ, ಅಚಿನ್ ಗೆ ತುಂಬ ಹಸಿವಾಗುತ್ತಿತ್ತು. ತಿನ್ನಲು ಏನಿದೆ ಎಂದು ಹುಡುಕಿದರೆ ಮನಯಲ್ಲಿ ಇನ್ನೂ ಅಡುಗೆ ಆಗಿರಲಿಲ್ಲ. ಅವ ಗುಣಶೀಲನ ಮನೆಯಿಂದ ಸೀದಾ ನಾರಾಯಣರ ಮನೆಗೆ ಹೋದ (ಅಷ್ಟು ಸಲುಗೆ ಅವನಿಗಿತ್ತು).

ಆದರೆ ನಾರಾಯಣರು ಮಂಗಳೂರಿಗೆ ಹೋಗಿದ್ದರು. ಅವನಿಗೆ ಅಂಗಳದ ಮರದ ಬುಡದಲ್ಲಿ ನೇತಾಡುತ್ತಿದ್ದ ತುಳುವೆ ಹಲಸಿನ ಹಣ್ಣು ಕಾಣಿಸಿತು. ಸಾವಿರಗಟ್ಟಲೆ ಹಲಸು ಬೆಳೆಯುವ ತೋಟದಲ್ಲಿ ಇದನ್ನೊಂದು ಕೊಯ್ದರೆ ನಾರಾಯಣರು ಏನೂ ಹೇಳಲಿಕ್ಕಿಲ್ಲ ಅಂದುಕೊಂಡು ಆ ಹಲಸನ್ನುಕೊಯ್ದ. ಆತನಿಗೆ ತಿಳಿ ಹೇಳಲು ಅಷ್ಟೊತ್ತಿಗೆ ಕೆಲಸದವರು ಯಾರೂ ಇರಲಿಲ್ಲ....


............

ಅಂಗಳದ ಮೂಲೆಯ ಕಟ್ಟೆಯಲ್ಲಿ ಕುಳಿತು ಹದವಾಗಿ ಹಣ್ಣಾದ ಹಲಸಿನ ಕಾಯಿಯನ್ನು ಬಿಚ್ಚಿ ಇನ್ನೇನು ಸೋಳೆಯನ್ನು ಬಾಯಿಗೆ ಇಡಬೇಕು ಎಂಬಷ್ಟರಲ್ಲಿ ನಾರಾಯಣರ ಕಾರು ನಿಧಾನವಾಗಿ ಗೇಟಿನೊಳಗೆ ಪ್ರವೇಶಿಸಿತು.....!!!


🚘🚘🚘🚘🚘

(ಸಶೇಷ.....)

-ಕೆಎಂ.

Post a Comment

0 Comments