Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -05

 ಪೊಲೀಸ್ ನಾಯಿ ಹೊರಟದ್ದು ಎಲ್ಲಿಗೆ ? ??



.................

(ಸ್ಪಷ್ಟನೆ: ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶ ಕಾಲ್ಪನಿಕ. ವಾಸ್ತವಕ್ಕೆ ಹೋಲಿಕೆ ಇದ್ದರೆ ಅದು ಕಾಕತಾಳೀಯ ಮಾತ್ರ. ಲಘು ಧಾಟಿಯಲ್ಲಿ ಪ್ರಸ್ತುತ ಪಡಿಸಿದ ವಿಚಾರಗಳೆಲ್ಲ ತಮಾಷೆಗೋಸ್ಕರ ಅಷ್ಟೆ)

 🍐🍐🍐🍐🍐



ಕಾರು ಕಂಪೌಂಡ್ ದಾಟಿ ಬಂದು ಅಂಗಳ ತಲಪುವಷ್ಟರಲ್ಲಿ ಅಚಿನ್ ಪೂರ್ತಿ ಹಣ್ಣನ್ನು ಹೊಟ್ಟೆಗಿಳಿಸಿ ಆಗಿತ್ತು. ನಿಧಾನವಾಗಿ ಬಾಗಿಲು ತೆರೆಯಿತು. ನಾರಾಯಣರ ಸಿಟ್ಟಿನ ಬಗ್ಗೆ ಅರಿವಿಲ್ಲದ ಅಚಿನ್, 'ನಾರಾಯಣ ಸರ್ ಈ ಎರಡು ಸೋಳೆಗಳು ಎಷ್ಟು ಸವಿಯಾಗಿದೆ ಗೊತ್ತಾ, ನೀವೂ ತಿನ್ನಿ' ಅಂತ ತೆಗೆದುಕೊಂಡು ಕಾರಿನ ಬಳಿ ಹೋದ...!



…..


ಆದರೆ, ಕಾರಿನಿಂದ ಇಳಿದದ್ದು, ನಾರಾಯಣರಲ್ಲ ಅವರ ಡ್ರೈವರ್, ಸಿಂಪತಿ ಆಳ್ವ ಮಾತ್ರ. ವಿಷಯ ಏನು ಅಂದ್ರೆ, ತನಗೆ ಸಂಜೆ ವರೆಗೂ ಮಂಗಳೂರಿನಲ್ಲಿ ಕೆಲಸ ಇದ್ದುದರಿಂದ ನಾರಾಯಣರ ಡ್ರೈವರ್ ಆಳ್ವನ ಹತ್ರ ನೀನು ಮನೆಗೆ ಹೋಗು, ಸಂಜೆ ಬಂದರೆ ಸಾಕು ಅಂತ ಕಳ್ಸಿದ್ದರು. ದೇವರ ದಯದಿಂದ ಕಾರಿನಲ್ಲಿ ನಾರಾಯಣರು ಬಾರದೇ ಇದ್ದುದರಿಂದ ಆ ಕ್ಷಣಕ್ಕೆ ಅಚಿನ್ ಬದುಕಿದ ಅಂಥ ಸಿಂಪತಿಗೆ ಅರ್ಥ ಆಯ್ತು...



ಅಚಿನ್ ನ ಬಾಯಲ್ಲಿ ಅಂಟಿಕೊಂಡಿದ್ದ ಹಲಸಿನ ಹಣ್ಣುಗಳ ತುಂಡು, ಅಲ್ಲಿ ಹರಡಿದ್ದ ಹಣ್ಣಿನ ಸುವಾಸನೆ, ಕೈಯ್ಯಲ್ಲಿದ ಮೇಣದಿಂದ ಸಿಂಪತಿಗೆ ಅರ್ಥ ಆಯ್ತು, ಅಚಿನ್ ಯಾರತ್ರವೂ ಕೇಳದೆ ಹಣ್ಣು ಕೊಯ್ದು ತಿಂದದ್ದು, ಗ್ರಹಚಾರಕ್ಕೆ ಆ ಹೊತ್ತಿಗೆ ನಾರಾಯಣರ ಮೂವರು ಮಕ್ಕಳೂ ಮನೆಯಲ್ಲಿ ಇರಲಿಲ್ಲ.

ಏನೇ ಆದರೂ, ಸಂಜೆ ನಾರಾಯಣರು ಮನೆಗೆ ಬಂದ ಬಳಿಕ ಅವರಿಗೆ ಅಂಗಳದಲ್ಲೇ ಇರುವ ಮರದಿಂದ ತನ್ನ ಪ್ರೀತಿಯ ಹಲಸು ಕಾಣೆಯಾಗಿರುವ ವಿಚಾರ ತಿಳಿದೇ ತಿಳಿಯುತ್ತದೆ, ವಿಚಾರಣೆ ಆರಂಭಿಸುತ್ತಾರೆ, ಆಗ, ಮನೆಯಲ್ಲಿ ಅಚಿನ್ ಇದ್ದದ್ದು ಗೊತ್ತಾದರೆ, ಆತನನ್ನು ಕೊಂದೇ ಬಿಟ್ಟಾರು ಎಂದು ಟೆನ್ಶನ್ ಆಯ್ತು ಸಿಂಪತಿಗೆ....



ತಕ್ಷಣ ಮನೆಯೊಳಗೆ ಹೋಗಿ ಗುಣಶೀಲ ಕುಮಾರನಿಗೆ ಕರೆ ಮಾಡಿದ. ಅಚಿನ್ ನ ಆತ್ಮೀಯ ಮಿತ್ರನೂ ಆಗಿದ್ದ ಗುಣಶೀಲ ಓಡೋಡಿ ಬಂದ. ಅಷ್ಟೊತ್ತಿಗಾಗಲೇ ಸಿಂಪತಿ ಆಳ್ವನಿಂದ ನಾರಾಯಣರ ಬಗ್ಗೆ ತಿಳಿದುಕೊಂಡಿದ್ದ ಅಚಿನ್ ಥರ ಥರ ನಡುಗುತ್ತಿದ್ದ. ಸಣ್ಣಗೆ ಜ್ವರ ಬಂದ ಹಾಗೆ ಭಾಸವಾಗುತ್ತಿತ್ತು ಅವನಿಗೆ, ತಾನು ಇಲ್ಲಿದ ಜೀವಂತವಾಗಿ ಊರಿಗೆ ಹೋದರೆ ಸಾಕಿತ್ತು ಅಂತ ಹರಕೆಯನನ್ನೂ ಹೇಳಿದ್ದ...

ಗುಣಶೀಲನ ಹಾಗೂ ಸಿಂಪತಿಗೆ ಏನು ಮಾಡಬೇಕು ಅಂತಲೇ ಗೊತ್ತಾಗಲಿಲ್ಲ. ಅವರು ಮಂಗಳೂರಿನಲ್ಲಿ ನಾರಾಯಣರ ಪೊಲೀಸ್ ಗೆಳೆಯ ದಿನೇಶ್ ಕಾಮತ್ ಗೆ ಕರೆ ಮಾಡಿದರು. ದಿನೇಶ್ ಹೇಳಿದ, ನಂಗೆ ಇವತ್ತು ಟ್ರಾಫಿಕ್ ಡ್ಯೂಟಿ ಇದೆ, ಬರ್ಲಿಕೆ ಆಗುವುದಿಲ್ಲ, ಉಳ್ಳಾಲದಲ್ಲಿ ನನ್ನ ಕಲೀಗ್ ನಂದಿಕೇಶ್ ಕುಮಾರ್ ಇದ್ದಾರೆ, ಅವರನ್ನು ಕಳುಹಿಸುತ್ತೇನೆ. ಅಂತ.



ಕೆಲಹೊತ್ತಿನಲ್ಲೇ ನಂದಿಕೇಶ್ ಕುಮಾರ್ ಬಂದರು. ಅವರಿಗೆ ಗುಣಶೀಲ ಮತ್ತು ಸಿಂಪತಿ ಆಳ್ವ ನಡೆದ ವಿಚಾರ ವಿವರಿಸಿದರು. ಆದಕ್ಕೆ, ನಂದಿಕೇಶ್ ಹೇಳಿದರು, 'ಆಯ್ತು ಈಗ ಆದದ್ದು ಆಯ್ತಲ್ಲ, ಇನ್ನೀಗ ಅವನ ಹೊಟ್ಟೆಯಿಂದ ಹಲಸನ್ನು ಹೊರ ತೆಗೆಯಲು ಅಸಾಧ್ಯ. ನೀವೊಂದು ಕೆಲಸ ಮಾಡಿ, ಹಲಸು ತಿಂದದ್ದಕ್ಕೆ ಸಾಕ್ಷಿ ಇಲ್ಲದ ಹಾಗೆ ಎಲ್ಲ ಅವಶೇಷಗಳನ್ನು ಇಲ್ಲಿಂದ ಮರೆ ಮಾಚಿ' ಅಂತ. ನಾನು ಇದಕ್ಕಿಂತ ಜಾಸ್ತಿ ಇನ್ನೇನೂ ಹೇಳಲಾರೆ ಅಂತ...



ನಂದಿಕೇಶ್ ಕುಮಾರ್ ಸಲಹೆಯಂತೆ ತೋಟದ ಮೂಲೆಗೆ ಹೋದ ಗುಣಶೀಲ ಹಾಗೂ ಅಚಿನ್, ಹಲಸಿನ ಹಣ್ಣಿನ ಸಿಪ್ಪೆ, ಗೂಂಜಿ, ಬೇಳೆ, ಮಯಣ ಉಜ್ಜಿದ ತೆಂಗಿನ ನಾರಿನ ಬ್ರಶ್ ಎಲ್ಲವನ್ನೂ ಗುಂಡಿ ತೆಗೆದು ಹೂತು ಹಾಕಿದರು. ಆ ಜಾಗದ ನೆನಪಿಗೆ ಹೂತು ಹಾಕಿದ ಜಾಗದಲ್ಲಿ ಒಂದು ಹಲಸಿನ ಗಿಡವನ್ನು ನೆಟ್ಟರು. ನಂತರ ಆತ ಸಿಟೌಟ್ ನಲ್ಲಿ ಕುಳಿತು ಹಲಸು ತಿಂದ ಜಾಗವನ್ನು ಫಿನಾಯಿಲ್ ಹಾಕಿ ತೊಳೆದರು...



ಅಷ್ಟು ಮಾತ್ರವಲ್ಲ, ನಾರಾಯಣರು ಸಿಟೌಟಿನಲ್ಲಿ ಕುಳಿತುಕೊಳ್ಳುವ ಈಸಿಚೇರಿನಲ್ಲಿ ಕುಳಿತು ನೋಡಿದರೆ ಅಂಗಳದ ತುದಿಯಲ್ಲಿರುವ ಹಲಸಿನ ಮರ ಸುಲಭದಲ್ಲಿ ಕಾಣದಂತೆ ಅಡ್ಡವಾಗಿ ಸಿಟೌಟಿನ ಬಲೆಯ ಗೋಡೆಗೆ ಹಲಸಿನ ಚಿತ್ರ ಇರುವ ಕ್ಯಾಲೆಂಡರ್ ತೂಗು ಹಾಕಿದರು....



ಇಷ್ಟೆಲ್ಲ ಆಗುವಾಗ, ಸಂಜೆಯಾಯಿತು. ಸಿಂಪತಿ ಆಳ್ವ ಹೋಗಿ ನಾರಾಯಣರನ್ನು ಕರೆ ತಂದ. ಎಲ್ಲರೂ ಊಹಿಸಿದಂತೆ ಆಯಿತು. ನಾರಾಯಣರಿಗೆ ಹಲಸು ಕಾಣೆಯಾಗಿದ್ದು ತಿಳಿಯಲೇ ಇಲ್ಲ... ಆದಾದ ನಂತರ ಅಚಿನ್ ನಾರಾಯಣರ ಮನೆಗೆ ಹೋಗುವುದನ್ನೇ ಕಡಿಮೆ ಮಾಡಿದ. ಎಲ್ಲಿ ತಾನು ಸಿಕ್ಕಿಬೀಳುತ್ತೇನೋ ಎಂಬ ಭಯ....

ರಾತ್ರಿ ಕನಸಿನಲ್ಲ, ತನ್ನ ಹೊಟ್ಟೆಯಲ್ಲಿ ಹಲಸಿನ ಗಿಡ ಹುಟ್ಟಿ ದ ಹಾಗೆ, ಅದನ್ನು ಗನ್ ಹಿಡಿದು ಬಂದ ನಾರಾಯಣರು ಶೂಟ್ ಮಾಡಿದ ಹಾಗೆ ಕನಸುಗಳು ಬೀಳುತ್ತಿದ್ದವು. ಉಳ್ಳಾಲ ಬಿಟ್ಟು ಊರಿಗೆ ಹೋಗೋಣ ಎಂದು ಒಮ್ಮೊಮ್ಮೆ ಅನ್ನಿಸಿದರೂ, ತನ್ನ ಡಾಕ್ಟರೇಟ್ ಥಿಸೀಸ್ ಮುಗಿಯದೆ ಹೇಗೆ ಹೋಗುವುದು ಅಂತ ಗೊತ್ತಾಗುತ್ತಿರಲಿಲ್ಲ...

.....



ಈ ನಡುವೆ ಗುಣಶೀಲ ಮಾತ್ರ ಎಂದಿನಂತೆ, ನಾರಾಯಣರ ಮನೆಗೆ ಹೋಗಿ ಬರುತ್ತಿದ್ದ, ನಾರಾಯಣರನ್ನೇ ಗಮನಿಸುತ್ತಿದ್ದ, ಹಲಸು ಕಳವಾಗಿದ್ದು ತಿಳಿದಿದೆಯೇ ಅಂತ...

ಇದಾಗಿ ನಾಲ್ಕೇ ದಿನದಲ್ಲಿ ಉಳ್ಳಾಲ ಪುರಸಭೆಯಲ್ಲಿ ನಾಡಹಬ್ಬ ಆಚರಣೆ ನಡೆಯುವುದರಲ್ಲಿತ್ತು, ಅಲ್ಲಿ ಊರವರು, ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಇತ್ತು. ಇದೇ ಸಂದರ್ಭವನ್ನು ನಾವು ಹಲಸಿನ ಪ್ರಚಾರಕ್ಕೆ ಬಳಸಿಕೊಳ್ಳೋಣ ಅಂತ ಸಲಹೆ ನೀಡಿದ ಗುಣಶೀಲ. ನಾವು ಹಲಸಿನ ಬಗ್ಗೆ ಒಂದು ಹಾಡು ಹಾಡಿ, ಅಲ್ಲಿ ಪ್ರಸ್ತುತ ಪಡಿಸೋಣ, ಜನರಿಗೂ ಖುಷಿ ಆಗ್ತದೆ, ಅಂತ ಗುಣಶೀಲ...

ಅದೆಲ್ಲ ಸರಿ, ಹಾಡು ಬರೆಯುವವರು ಯಾರಿದ್ದಾರೆ, ಎಂದು ಕೇಳಿದರು ನಾರಾಯಣ ರು. ಭಗೀರಥ ಇದ್ದಾರೆ, ಅವರು ತುಂಬ ಚಂದ ಬರೀತಾರೆ ಹಾಡು. ಸರಿ ಭಗೀರಥನಿಗೆ ಹೇಳಿ ಕಳುಹಿಸಿದರು ನಾರಾಯಣ ರು.

ಇವರ ನಿರೀಕ್ಷೆಯನ್ನು ಭಗೀರಥ ಹುಸಿಗೊಳಿಸಲಿಲ್ಲ..... ಡಾ.ರಾಜ್ ಕುಮಾರ್ ಹಾಡಿದ ಜೇನಿನ ಹೊಳಯೋ... ಹಾಲಿನ ಮಳೆಯೋ ರಾಗದಲ್ಲಿ ಒಂದು ಹಾಡು ಬರೆದು ಕೊಟ್ಟರು... ಅದರ ಕೆಲವು ಸಾಲುಗಳು ಹೀಗಿವೆ:

 🎙️🎙️🎙️🎙️🎙️🎙️


( ರಾಗ: ಜೇನಿನ ಹೊಳೆಯೋ... )



ಹಲಸಿನ ಸೊಳೆಯೋ, ಪೆಲತ್ತರಿ ಮಳೆಯೋ

ಇದೆಯೋ, ಅಲ್ಲಾ, ಮುಗಿದಿದೆಯೋ?!

….

ನಾಣಿಯ ತೋಟದ ಸವಿ ಮಾಧುರ್ಯವೋ,

ಸುಮಧುರ ಹಣ್ಣುಗಳ ಪ್ರಭೆಯೋ.. ಆಹಾ....

ಹಲಸಿನ ಸೊಳೆಯೋ, ಪೆಲತ್ತರಿ ಮಳೆಯೋ...

ಇದೆಯೋ, ಅಲ್ಲ ಮುಗಿದಿದೆಯೋ...

......

//ಚರಣ//

ಸುಮಾರು ತಳಿಗಳ ಹಲಸಿನ ಅಂದ

ಕವಿ ಭಗೀರಥನ ಸ್ಫೂರ್ತಿಯ ಚಂದ

ದಾಸರು, ಸಕಲರು ಹಾಡಿ ಹೊಗಳಿದ

ಹಲಸಿನ ಗೀತೆಯ ಸೊಬಗಿನಿಂದ....

(ಈ ಥರ ಮುಂದುವರಿಯುತ್ತದೆ)

📝📝📝📝📝📝📝

ಪಲ್ಲವಿ ಮತ್ತು ಚರಣ ನೋಡಿ ನಾರಾಯಣರಿಗೆ ಬಹಳ ಖುಷಿಯಾಯ್ತು. ಗುಣಶೀನಲತ್ರ ಹೇಳಿದರು. ನೀನಿದನ್ನು ಡಾ.ರಾಜ್ ಕುಮಾರ್ ಥರ ಹಾಡಬೇಕು. ನಾವದನ್ನ ಟೇಪ್ ರೆಕಾರ್ಡರಿನಲ್ಲಿ ರೆಕಾರ್ಡ್ ಮಾಡ್ಕೊಂಡು ನಾಡಹಬ್ಬದ ದಿವಸ ಅಲ್ಲಿ ಹಾಕುವ, ಮಾತ್ರವಲ್ಲ, ನಮ್ಮ ಅಂಗಳದಲ್ಲಿ ಹದವಾಗಿ ಹಣ್ಣಾದ ತುಳುವೆ ಹಲಸಿನ ಹಣ್ಣನ್ನೂ ಹಾಡಿನ ಜೊತೆಗೆ ಪ್ರದರ್ಶನ ಮಾಡುವ. ಜನರಿಗೆ ಭಯಂಕರ ಖುಷಿ ಆದೀತು... ನಾರಾಯಣರು  ಖುಷಿಯಿಂದಲೇ ಹೇಳುತ್ತಲೇ ಹೋದರೆ, ಪಕ್ಕದಲ್ಲಿದ್ದ ಗುಣಶೀನಲನಿಗೆ ಎದೆ ಧಸಕ್ಕೆಂದಿತು....



ಅಲ್ಲ ನಾರಾಯಣರೇ, ಹಣ್ಣಿನ ಪ್ರದರ್ಶನ ಎಲ್ಲ ಯಾಕೆ.... ಅಂತ ತಡವರಿಸುತ್ತಿರಬೇಕಾದರೆ, ನಾರಾಯಣರು  ಹಲಸಿನ ಮರದ ಹತ್ತಿ ಹೊರಟರು, ನಾಲ್ಕೈದು ದಿನ ಆಯ್ತು, ಕಾಯಿ ಹಣ್ಣಾಗಿದಾ ಅಂತ ನೋಡದೆ, ನೋಡುವ ಅಂತ ಹೋದವರೆ, ಮರದ ಬುಡಕ್ಕೆ ತಲುಪಿದವರು ಕಿಟಾರನೆ ಕಿರುಚಿದರು....



ಅವರ ಕೂಗಿಗೆ ಬೆಚ್ಚಿ ನಾರಾಯಣರ ಮಕ್ಕಳು, ಸಿಂಪತಿ ಆಳ್ವ, ಗುಣಶೀಲ ಮರದತ್ತ ಓಡಿದರು... 'ಗುಣಶೀಲ, ಗುಣಶೀಲ ಹಲಸು..ಹಲಸು ಕಾಣಿಸುತ್ತಿಲ್ಲ', ನಾರಾಯಣರ ಮೈ ಕಂಪಿಸುತ್ತಿತ್ತು, ರೋಮಗಳು ಸೆಟೆದಿದ್ದವು...

ಏನೂ ಆಗ್ಲಿಕಿಲ್ಲ ನಾರಾಯಣರೇ... ನಿಮಗೆ ಲೆಕ್ಕ ತಪ್ಪಿದಾ ಅಂತ. ಮೂರೇ ಹಲಸಲ್ವ ಮರದಲ್ಲಿ ಇದ್ದದ್ದು, ಗುಣಶೀಲ ಸಮಾಧನ ಮಾಡಲು ನೋಡಿದ...



ಮೂರಾ... ಏನಾಗಿದೆ ಗುಣಶೀಲ, ನಾಲ್ಕು ಹಣ್ಣು ಇದ್ದದ್ದಲ್ವ... ಏನೋ ಎಡವಟ್ಟಾಗಿದೆ. ಇದು ಯಾರಿಂದ ಆಗಿದ್ದು ಅಂತ ತಿಳಿಯದೆ ಬಿಡುವುದಿಲ್ಲ. ಫೋನ್ ಮಾಡು ದಿನೇಶ್ ಕಾಮತ್ ಗೆ ಅಬ್ಬರಿಸಿದರು....

 ☎️☎️☎️☎️☎️☎️

ಒಳಗೆ ಓಡಿದ ಗುಣಶೀಲ ಪೊಲೀಸ್ ದಿನೇಶ್ ಕಾಮತ್ ಗೆ ಫೋನ್ ಮಾಡಿ, ವಿಷಯ ವಿವರಿಸಿದ... ದಿನೇಶ್ ಬೈದ... ಅಲ್ಲ ಮಾರಾಯ, ಈಗ ಎಂತ ಮಾಡುವುದು, ಇಂಥದ್ದಕ್ಕೆಲ್ಲ ಪೊಲೀಸ್ ಕಂಪ್ಲೆಂಟ್ ಕೊಡುದಾ... ಅಷ್ಟೊತ್ತಿಗೆ ಗುಣಶೀಲನ ಕೈಯ್ಯಿಂದ ಫೋನ್ ಕಿತ್ತುಕೊಂಡ ನಾರಾಯಣರು  ಅಬ್ಬರಿಸಿದರು.... ದಿನೇಶಾ ಬಾ.... ಬರುವಾಗ ಪೊಲೀಸ್ ನಾಯಿ ಹಿಡ್ಕೊಂಡು ಬಾ... ನಾನು ಸುಮ್ಮನೆ ಬಿಡುವುದಿಲ್ಲ, ಕಳ್ಳನನ್ನು. ಪೊಲೀಸ್ ನಾಯಿಯಿಂದಲೇ ಕಚ್ಚಿಸುತ್ತೇನೆ.... ಅಷ್ಟು ಹೇಳಿ ಫೋನಿಟ್ಟರು...


🐕‍🦺🐕‍🦺🐕‍🦺🐕‍🦺🐕‍🦺🐕‍🦺



ಬೇರೆ ಉಪಾಯ ಇಲ್ಲದೆ ದಿನೇಶ್ ಪೊಲೀಸ್ ನಾಯಿ ಜೊತೆಗೆ ಬಂದ... ಎಲ್ಲರೂ ಭಯದಿಂದ ನಡುಗುತ್ತಿದ್ದರು. ನಾರಾಯಣರು  ಪೊಲೀಸರಿಗೆ ತುಳುವೆ ಮರವನ್ನು ತೋರಿಸಿದರು. ಮರವನ್ನು ಮೂಸಿದ ನಾಯಿಗೆ ಸ್ವಲ್ಪ ಡೌಟಾಯಿತು... ಮನೆಯ ಸಿಟೌಟಿನತ್ತ ಬಂತು.... ನಂತರ ಎಲ್ಲರೂ ನೋಡುತ್ತಿದ್ದ ಹಾಗೆ.... ಸೀದಾ ತೋಟದ ಮೂಲೆಯತ್ತ ಓಡತೊಡಗಿತು... ಪರಿಸ್ಥಿತಿ ಕೈಮೀರುತ್ತಿದೆ ಎಂದು ಸಿಂಪತಿ ಹಾಗೂ ಗುಣಶೀಲನಿಗೆ ಗೊತ್ತಿದ್ದರೂ ಈಗ ಏನೂ ಮಾಡುವಂತಿರಲ್ಲ.... ಹಲಸಿನ ಹಣ್ಣಿನ ಅವಶೇಷ ಹೂತಿದ್ದ ಜಾಗವನ್ನು ಕಾಲಿನಿಂದ ಕೆದಕಿ ತೋರಿಸಿತು ನಾಯಿ....



ಅಲ್ಲಿ ಪೊಲೀಸರು ಅಗೆದಾಗ, ಹಲಸಿನ ಬೀಜಗಳು ಸಿಕ್ಕಿದವು... ಅತೀವ ದುಃಖದಿಂದ ಅವನ್ನು ಕರ್ಚೀಫಿನಲ್ಲಿ ಎತ್ತಿ ಪೊಲೀಸರ ಕೈಗಿತ್ತ ನಾರಾಯಣರು  ಹೇಳಿದರು... ದಿನೇಶ, ಮಕ್ಕಳ ಹಾಗೆ ಸಾಕಿದ ಹಲಸಿನ ಗತಿ ನೋಡಪ್ಪ... ಎಷ್ಟು ಖರ್ಚಾದರೂ ಪರ್ವಾಗಿಲ್ಲ, ಕಳ್ಳನನ್ನು ಹಿಡಿಯಲೇ ಬೇಕು... ಅವನನ್ನು ನೇಣು ಗಂಬಕ್ಕೆ ಏರಿಸಬೇಕು....

😡😡😡😡



ಅಷ್ಟು ಹೇಳಿದ್ದೇ ತಡ... ಹಲಸಿನ ಬೀಜಗಳನ್ನು ಮೂಸಿದ ನಾಯಿ... ವೇಗವಾಗಿ ಗುಣಶೀಲನ ಮನೆಯತ್ತ ಓಡತೊಡಗಿತು.... ಅಲ್ಲಿ, ಒಂದು ವಾರ ಕಳೆಯಿತಲ್ಲ, ಇನ್ನು ನಾರಾಯಣರಿಗೆ ವಿಚಾರ ಗೊತ್ತಾಗಲಿಕ್ಕಿಲ್ಲ ಅಂತ ನೆಮ್ಮದಿಯಿಂದ ಮಲಗಿ ಅಚಿನ್ ಪಾಪ, ಆರಾಮದಿಂದ ನಿದ್ರಿಸುತ್ತಿದ್ದ....!

🐕‍🦺🐕‍🦺🐕‍🦺🐕‍🦺🐕‍🦺🐕‍🦺🐕‍🦺


(ಸಶೇಷ)

-ಕೆಎಂ.

Post a Comment

0 Comments