Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -07

 ಗುಣಶೀಲನ ಕೈಯ್ಯಿಂದ  ನಾರಾಯಣರು ಮೈಕ್ ಕಿತ್ತುಕೊಳ್ಳಲು ಕಾರಣವೇನು ?



(ಸ್ಪಷ್ಟನೆ: ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶ ಕಾಲ್ಪನಿಕ. ವಾಸ್ತವಕ್ಕೆ ಹೋಲಿಕೆ ಇದ್ದರೆ ಅದು ಕಾಕತಾಳೀಯ ಮಾತ್ರ. ಲಘು ಧಾಟಿಯಲ್ಲಿ ಪ್ರಸ್ತುತ ಪಡಿಸಿದ ವಿಚಾರಗಳೆಲ್ಲ ತಮಾಷೆಗೋಸ್ಕರ ಅಷ್ಟೆ)


🍐🍐🍐🍐🍐


ತೋಟದಲ್ಲಿ ನಡೆಯುತ್ತಿದ್ದಾಗ ನಿಧಾನಕ್ಕೆ ಕುಸಿದ ನಾರಾಯಣರು ಅಲ್ಲಿಯೇ ಕುಳಿತಾಗ ಅಚಿನ್ ಗಾಬರಿಯಿಂದ ಅವರ ಕೈ ಹಿಡಿದುಕೊಂಡ....ಅವನಿಗೆ ಆತಂಕವಾಯಿತು. ಹಾಗೇನು ಇಲ್ಲಪ್ಪ, ತುಸು ಸುಸ್ತು ಅಷ್ಟೆ, ಇನ್ನು ನಡೆಯುವುದು ಬೇಡ, ಮನೆಗೆ ಹೋಗುವ ಎಂದು ವಾಪಸ್ ಅಚಿನ್ ಜೊತೆ ಮನೆಗೆ ಬಂದರು ನಾರಾಯಣರು.

ನಾರಾಯಣರಿಗೆ ಹುಶಾರಿಲ್ವಂತೆ ಅತ ಗುಣಶೀಲನಿಗೆ ಕರೆ ಹೋಯಿತು. ಆತಂಕದಿಂದಲೇ ಬಂದ ಗುಣಶೀಲ, ನಾರಾಯಣರೇ, ನೀವೇನು ಗಾಬರಿ ಆಗಬೇಡಿ. ಸ್ವಲ್ಪ ರೆಸ್ಟ್ ತಗೊಳ್ಳಿ ಅಂದವನೇ ಅವರ ಫ್ಯಾಮಿಲಿ ಡಾಕ್ಟ್ರು, ಡಾ.ಕರುಣಾಕರ ಹೆಬ್ಬಾರ್ ಅವರಿಗೆ ಕರೆ ಮಾಡಿದ. ಡಾ.ಹೆಬ್ಬಾರ್ ಬಂದವರೇ ನಾರಾಯಣರ ಕೂಲಂಕಷ ತಪಾಸಣೆ ಮಾಡಿದರು...



ಜೋರಾಗಿ ನಕ್ಕು ಹೇಳಿದರು, "ನೀವೇನು ಹೆದರಬೇಡಿ ಅಣ್ಣ. ನೀಮಗೆ ಶುಗರ್, ಬಿ.ಪಿ. ಎಂತದೂ ಇಲ್ಲ, ಸ್ವಲ್ಪ ವೀಕ್ನೇಸ್ ಬಂದಿದೆ. ಅಷ್ಟೇ. ಸಕ್ಕರೆ ಅಂಶ ಕಡಿಮೆಯಾಗಿದೆ. ಯಾಕೆ ನೀವು ಸಿಹಿ ಅಂಶ ತಿನ್ನುವುದು ಕಡಿಮೆ ಮಾಡಿದ್ದೀರ ಹೇಗೆ...?



ಪುನಃ ಮಂಡೆ ಶರಬತ್ತಾಯಿತು, ನಾರಾಯಣರಿಗೆ. ಮಂಚದ ಮೇಲೆ ನಿಂತಿದ್ದ ಗುಣಶೀಲನನ್ನು ದುರುಗುಟ್ಟಿ ನೋಡಿದರು. ಗುಣಶೀಲನಿಗೆ ಇದು ಅನಿರೀಕ್ಷಿತ. ಅವತ್ತು ಅಚಿನ್ ನ್ನು ರಕ್ಷಿಸಲು ಸಮಯಕ್ಕಾಗುವಾಗ ಒಂದು ಬಾಯಿಗೆ ಬಂದ ಸುಳ್ಳು ಹೇಳಿದ್ದ. ಈಗ ಅದನ್ನು ಮುಂದುವರಿಸದಿದ್ದರೆ, ಮತ್ತೆ ಸಮಸ್ಯೆ ಆಗುತ್ತದೆ ಅಂತ ಅವನಿಗೆ ಅರ್ಥ ಆಯಿತು...



ಹೆಹೆಹೆ... ಹಿಹಿ, ಡಾಕ್ಟ್ರೇ ಅದೆಂಥದ್ದು ಇಲ್ಲ, ಎರಡು ವಾರಗಳ ಹಿಂದೆ ರಕ್ತದಾನ ಶಿಬಿರದಲ್ಲಿ ನಾರಾಯಣರು ರಕ್ತದಾನ ಮಾಡಿದ್ದರು. ಅದರ ಆಯೋಜಕರು ನನ್ನನ್ನು ಕರೆದು ಅವರಿಗೆ ಸ್ವಲ್ಪ ಶುಗರ್ ಇದೆ ಅಂತ ಹೇಳಿದ್ದರು. ನಾರಾಯಣಣ್ಣನಿಗೆ ಬೇಜರಾದೀತು ಅಂತ ಆರಂಭದಲ್ಲಿ ನಾನು ಅವರಿಗೆ ಹೇಳಲಿಲ್ಲ, ನಂತರ ಹೇಳಲೇಬೇಕಾದ ಸಂದರ್ಭ ಒದಗಿತು. ಹೇಳಿದೆ. ಇದರಿಂದ ಗಾಬರಿಯಾದ ನಾರಾಯಣಣ್ಣ ಕಂಪ್ಲೀಟ್ ಸಿಹಿ ತಿನ್ನೋದೆ ಬಿಟ್ಟಿದ್ದಾರೆ... ಎಂತ ಮಾಡುವುದು ಈ ಈಗ ಸಮಸ್ಯೆ ಆಗ್ತದ... ನನಗೆ ಡೌಟು ಶಿಬಿರದಲ್ಲಿ ಅವರು ನನಗೆ ಕಳಿಸಿದ ಬ್ಲಡ್ ರಿಪೋರ್ಟ್ ನಾರಾಯಣರದ್ದು ಆಗಿರ್ಲಿಕಿಲ್ಲ, ಶಿಬಿರದ ಆಯೋಜಕ ಕರಣ್ ಕುಮಾರ್ ಸಿಕ್ಕಲಿ, ಮಾಡ್ತೇನೆ ಅವನಿಗೆ ಅಂತ... ಹೇಳಿದ..

ನಾರಾಯಣರಿಗೆ ಯಾವುದು ಸತ್ಯವೋ, ಯಾವುದು ಸುಳ್ಳೋ ಒಂದೂ ಅರ್ಥ ಆಗಲಿಲ್ಲ.... ಇದನ್ನು ನಂಬಿದ ಡಾ.ಹೆಬ್ಬಾರ್ ಮಾತ್ರ. ಇಟ್ಸ್ ಓಕೆ... ಗಾಬರಿ ಏನಿಲ್ಲ. ಸಾಕಷ್ಟು ಹಲಸಿನ ಹಣ್ಣು ತಿನ್ನಿ, ಶುಗರ್ ಒಂದು ಲೆವೆಲಿಗೆ ಬರಲಿ. ಎಲ್ಲ ಸರಿ ಆಗ್ತದೆ. ಮತ್ತೆ ಹೋಗುವಾಗ ನನ್ನ ಕಾರಿಗೆ ನಾಲ್ಕು ಹಲಸಿನ ಹಣ್ಣು ತುಂಬಿಸಲು ಮರೆಯಬೇಡಿ...ಹೆಹ್ಹೆಹ್ಹೆ ಅಂತ ಹೇಳಿದರು.



ಹಾಗಾದರೆ ಪಥ್ಯ ಏನೂ ಬೇಡವೇ...? ಅಚಿನ್ ಕೇಳಿದ.

'ಹಾಹಾ ಹೇಳಲು ಬಾಕಿ ಆಯ್ತು ನೋಡಿ.. ಒಂದು ವಾರ ಗೋಳಿಬಜೆ ಮತ್ತು ಮಸಾಲೆದೋಸೆ ಎರಡನ್ನೂ ತಿನ್ನಬೇಡಿ..." ಅಂತ ಹೇಳಿದರು ಡಾ.ಹೆಬ್ಬಾರ್...



🍬🍬🍬🍬🍬



ಇದಾಗಿ ಒಂದು ವಾರದಲ್ಲಿ ನಾರಾಯಣರು ಚೇತರಿಸಿದರು. ಈ ನಡುವೆ ಅಚಿನ್ ತನ್ನ ಡಾಕ್ಟರೇಟಿ ಥಿಸೀಸ್ ಮುಗಿಸಿ ಡಾ.ವಿಭಾ ಪೂಜಾಂಗೆ ಸಲ್ಲಿಸಿ, ಅವಳು ಅದನ್ನು ವಿಲೇವಾರಿ ಮಾಡಿ, ಆತನಿಗೆ ಡಾಕ್ಟರೇಟ್ ಪದವಿ ಕೂಡಾ ಘೋಷಣೆ ಆಗಿತ್ತು. ಈ ಹಿನ್ನೆಲೆಯಲ್ಲಿ ಉಳ್ಳಾಲದ ಗುಣಶೀಲನ ಮನೆಯಲ್ಲಿ ಸಣ್ಣದೊಂದು ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. ಇದಕ್ಕೆ ನಾರಾಯಣರ ಆಪ್ತರನ್ನು ಕರೆಯಲಾಗಿತ್ತು... ನಾರಾಯಣರಿಗೆ ಹಾಗೂ ವಿಭಾ ಪೂಂಜಾಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು....

ಸರಳ ಸಜ್ಜನರಾದ ನಾರಾಯಣರು, ಯಾವುದೇ ಕಾರಣಕ್ಕೂ ತನಗೆ ಸನ್ಮಾನ ಬೇಡ ಎಂದು ಹಠ ಹಿಡಿದರು. ಆದರೆ ಅವರು ಆತ್ಮೀಯರು ಕೇಳಲೇ ಇಲ್ಲ. ಸಮಾರಂಭಕ್ಕೆ ಅರಬ್ ದೇಶ, ಮುಂಬೈ ಹಾಗೂ ಕೇರಳದಿಂದಲೂ ಅವರ ಮಿತ್ರರು ಬಂದಿದ್ದರು..



🧓🧓🧓🧓🧓🧓

ಗುಣಶೀಲನ ಮನೆ ಅಂಗಳದಲ್ಲಿ ಶಾಮೀಯಾನ ಹಾಕಿ ಸಮಾರಂಭ ಏರ್ಪಡಿಸಲಾಗಿತ್ತು. ಬಂದವರಿಗೆ ಹಲಸಿನ ಹಣ್ಣಿನ ಜ್ಯೂಸ್, ಹಲಸಿನ ಹಣ್ಣಿನ ಚಾಕಲೇಟ್ ಹಾಗೂ ಹಲಸಿನ ಮೇಣದ ಚ್ಯೂಯಿಂಗ್ ಗಂ ನೀಡಲಾಗಿತ್ತು.

ನಂತರ ರಾತ್ರಿ ಭೋಜನಕ್ಕೂ ಹಲಸಿನ ಕಾಯಿ ಪಲ್ಯ, ಸಾಂಬಾರ್, ಹಲಸಿ ಹಣ್ಣಿನ ಪಾಯಸ, ಹಲಸಿನ ಸಿಪ್ಪೆಯ ಚಟ್ನಿ, ಹಲಸಿನ ಬೀಜದ ಉಪ್ಪಿನಕಾಯಿ... ಸಹಿತ ವಿವಿಧ ಖಾದ್ಯಗಳನ್ನು ಗಡಿನಾಡಿನ ಕನ್ನಡತಿ ಭೀಮಾವತಿ ನೇತೃತ್ವದಲ್ಲಿ ಸಿದ್ದಪಡಿಸಲಾಗಿತ್ತು....!

……..


ಜೀವನದಲ್ಲಿ ಸನ್ಮಾನವನ್ನೇ ಕಾಣದಿದ್ದ ಹಾಗೂ ವೇದಿಕೆ ಸಮಾರಂಭಗಳನ್ನು ಇಷ್ಟಪಡದ ಮುಜುಗುರದ ಮನುಷ್ಯ ನಾರಾಯಣರಿಗೆ ಇದೆಲ್ಲ ಇರುಸು ಮುರುಸು ಮಾಡುತ್ತಿತ್ತು. ಚಡಪಡಿಸುತ್ತಾ ವೇದಿಕೆಯಲ್ಲಿ ಕುಳಿತರು...

ಆರಂಭದಲ್ಲಿ ಬೇಡ ಬೇಡ ಎಂದರೂ ಕೇಳದೆ ಜಗನ್ನಾಥ ಪ್ರಾರ್ಥನೆ ಹಾಡು ಹಾಡಲು ಹೊರಟ. ಕಾರ್ಯಕ್ರಮ ನಿರೂಪಿಸುತ್ತಿದ್ದ ಗುಣಶೀಲನಿಗೆ ಗಾಬರಿಯಾಯಿತು. "ದಾಯೆಂಬೇ ಅಧಿಕಪ್ರಸಂಗ ಮಲ್ಪುವ. ದುಂಬೇ ನಾರಾಯಣೆರ್ ಬೆಚ್ಚೊಡುಲ್ಲೇರ್. ನಿಕ್ಕ್ ನಯಾ ಪೈಸೆ ಪದ್ಯ ಪಣಿಯೆರೆ ಬರ್ಪುಜಿ, ದಾಯೆ ನಾಚಿಕೆ ಕೆಟ್ಟುವ ಸ್ಟೇಜಿಡ್, ನಿನ್ನ ರಾಗ ಕೇಣಿಯೆರೆ ಆವಂದೆ ಜನಕುಲು ಪೋಂಡ ಯಾನ್ ಜವಾಬ್ದಾರಿ ಅತ್ತ್..." ಅಂತ ಮೊದಲೇ ಎಚ್ಚರಿಕೆ ನೀಡಿದ್ದ ಗುಣಶೀಲ....

ಅತ್ಯುತ್ಸಾಹಿ ಜಗನ್ನಾಥ ತಾನೇ ಪ್ರಾರ್ಥನೆ ಮಾಡುವುದಾಗಿ ಹಠ ಹಿಡಿದ.. ಗುಣಶೀಲ ಅದನ್ನು ಅನೌನ್ಸ್ ಮಾಡಿದ..

 “ಏನ್ಸಾರ್... ಈಗ ಜಗನ್ನಾಥ ಪ್ರಾರ್ಥನೆ ಮಾಡ್ತಾನೆ.. ಓಕೆಯ ಸಾರ್... ಹೇಳಿ ಸಾರ್...”

ಜಗನ್ನಾಥನ ಹಾಡುಗಾರಿಕೆ ಸಾಮರ್ಥ್ಯ ತಿಳಿಯದ ಸಭಾಸದರು ಓಕೇ.. ಅಂತ ಕಿರುಚಿದರು.

ಜಗನ್ನಾಥ ಹೋಗಿ ನಾರಾಯಣರ ಕಾಲು ಮುಟ್ಟಿ ಆಶೀರ್ವಾದ ಪಡೆದು, ಗಂಟಲು ಸರಿ ಮಾಡಿ ಶುರು ಮಾಡಿದ...



(ರಾಗ-ಬಿಸಿಲಾದರೇನು... ಮಳೆಯಾದರೇನು, ಚಿತ್ರ-ಬೆಂಕಿಯ ಬಲೆ)



ಎಳತಾದರೇನು, ಹಣ್ಣಾದರೇನು...

ಬಿಡಲಾರೇ ಇನ್ನು, ನಾನಿಲ್ಲವೇನೂ...

ಹಲಸು ನನ್ನ ಜೀವಾ... ಎಂದಿಗೂ...!

!! ರಿಪೀಟ್!!



ತುಳುವೇ, ಬರಿಕ್ಕೆಯಾದರೇನು

ಸೈಜು ಸಣ್ಣದಾದರೇನು...

ಮೇಣ ಇಲ್ಲದಿದ್ದರೇನು,

ತೊಟ್ಟು ತುಂಡಾದರೇನು...

ಸಿಹಿಯಾದ ರುಚಿಯು,

ಬಾಯೊಳಗೆ ಬರಲು

ತಿನ್ನಲು ನಾನಿಲ್ಲವೇನು...?

ಅಂಜದೇ... ಅಳುಕದೇ...

ಹಲಸನು ಬಿಡಲಾರೆ ನಾನು...!



ಜಗನ್ನಾಥ ಇನ್ನೂ ಮುಂದುವರಿಸುವವನಿದ್ದ. ಅಷ್ಟರಲ್ಲಿ ಇಂತಹ ವಿಚಿತ್ರ ಹಾಡಿನಿಂದ ವಿಚಲಿತರಾದ ನಾರಾಯಣರು, ಕೈಸನ್ನೆ ಮಾಡಿದರು.. ಸಾಕು ನಿಲ್ಲಿಸಲಿ ಅಂತ. ಅದನ್ನು ಅರ್ಥ ಮಾಡಿಕೊಂಡು ನಿರೂಪಕ ಗುಣಶೀಲ.. ಮಧ್ಯದಲ್ಲೇ ಅನೌನ್ಸ್ ಮಾಡಿದ.. ಓಕೆ ಸ್ನೇಹಿತರೇ.. ಅದ್ಭುತವಾಗಿ ಹಾಡಿದ ಜಗನ್ನಾಥನಿಗೆ “ದೊಡ್ಡ ಚಪ್ಪಾಳೇ.....”

ಹಾಡು ನಿಂತ ಖುಷಿಯಲ್ಲಿ ಚಪ್ಪಾಳೆಯ ಜೊತೆಗೆ ಶಿಳ್ಳೆಯೂ ಸಿಕ್ಕಿತು...

....

ನಂತರ ಪ್ರಾಸ್ತಾವಿಕ ಭಾಷಣ ಮತ್ತು ಸ್ವಾಗತ ಒಬ್ಬರಿಗೇ ವಹಿಸಲಾಗಿತ್ತು... ಹಿಂದೊಮ್ಮೆ ನಾರಾಯಣರ ಬಗ್ಗೆ ಲೇಖನ ಬರೆದು ಅದರಿಂದ ಅವರಿಗೆ ಇರುಸು ಮುರಿಸು ಉಂಟಾಗಿದ್ದ ಪತ್ರಕರ್ತ ದುಷ್ಟಮೋಹನ ಅದನ್ನು ನಿರ್ವಹಿಸಬೇಕಾಗಿತ್ತು. ಆದರೆ... ಆದರೆ, ಕಾರ್ಯಕ್ರಮ ಮುಗಿದ ಬಳಿಕ ಅತನನ್ನು ತೋಟಕ್ಕೆ ಕರೆದುಕೊಂಡು ಹೋಗಿ ನಾರಾಯಣರ ಅಭಿಮಾನಿಗಳು ಹೊಡೆಯಲಿದ್ದಾರೆ ಎಂಬ ಅನಧಿಕೃತ ಮಾಹಿತಿ ಆತನಿಗೆ ಸಿಕ್ಕಿದ ಕಾರಣ ಹೆದರಿ, ಬರುತ್ತೇನೆ ಅಂತ ಹೇಳಿದವನೂ ಕೊನೆ ಕ್ಷಣದಲ್ಲಿ ಕೈಕೊಟ್ಟಿದ್ದ. ಸ್ವಾಗತ ಭಾಷಣಕ್ಕೆ ಯಾರೂ ತಯಾರಾಗಿರಲಿಲ್ಲ....

ಎಂತ ಮಾಡುವುದು ಅಂದ ಗುಣಶೀಲನಿಗೆ ಮಂಡೆಬಿಸಿಯಾಯಿತು. ಆಗ ಆತನ ಸಹಾಯಕ್ಕೆ ಬಂದವರು. ಮುಂಬೈಯಿಂದ ಬಂದ ನಾರಾಯಣರ ಸ್ನೇಹಿತ ದಯಕರ ನಾಯಕ್. ಆದರೆ ಈ ದಯಕರ ನಾಯಕ್ ಸಮಸ್ಯೆ ಎಂದರೆ ಅವರಿಗೆ ಸರಿಯಾಗಿ ಕನ್ನಡ ಬರುತ್ತಿರಲಿಲ್ಲ. ತುಳುವೂ ಅಷ್ಟಕ್ಕಷ್ಟೇ... ಇಂಗ್ಲಿಷ್ ಸರಿಯಾಗಿ ಬರುತ್ತಿತ್ತು. ಆದರೆ ನಾರಾಯಣರಿಗೆ ಇಂಗ್ಲಿಷ್ ನಯಾಪೈಸೆ ಅರ್ಥ ಆಗುತ್ತಿರಲಿಲ್ಲ. ಇತರರಿಗೂ ಅಷ್ಟೇ ಅರೆಬರೆ ಇಂಗ್ಲಿಷ್ ಬರ್ತಾ ಇತ್ತು ಅಷ್ಟೇ... ಆದರೂ ಅತ್ಯುತ್ಸಾಹದಿಂದ ಬಂದ ದಯಕರ್ ಅವರನ್ನು ನಿರಾಸೆಪಡಿಸಲು ಗುಣಶೀಲನಿಗೆ ಇಷ್ಟವಾಗಲಿಲ್ಲ... ದಯಕರ್ ಸ್ವಾಗತ ಭಾಷಣ ಮಾಡುತ್ತಾರೆ ಎಂದಾಗ ಅವರ ಭಾಷಾ ಜ್ಞಾನದ ಬಗ್ಗೆ ಆತಂಕವಿದ್ದ ನಾರಾಯಣರು ಅರೆ ಮನಸ್ಸಿನಿಂದಲೇ ಒಪ್ಪಿದ್ದರು....



ಸ್ನೇಹಿತರೇ.. ಈಗ ನಮ್ಮ ನಿಮ್ಮೆಲ್ಲರನ್ನೂ ಸ್ವಾಗತಿಸಲಿದ್ದಾರೆ. ಮುಂಬೈಯ ಖ್ಯಾತ ಉದ್ಯಮಿ, ನಮ್ಮ ಮಾಜಿ ಸಹಪಾಠಿ ದಯಕರ ನಾಯಕ್, ಅವರು, ದೊಡ್ಡ ಚಪ್ಪಾಳೆ ನೀಡಿ ಸಾರ್....... ಗುಣಶೀಲ ಅನೌನ್ಸ್ ಮಾಡಿದ...

ದಯಕರನ ಭಾಷಣ ಆರಂಭವಾಯಿತು..



“ಪೂರೆರೆಗ್ಲ ಸೊಲ್ಮಲು... ಬೊಕ್ಕ ಎಂಕ್ ಅಂಚ ವಂತೆ ವಂತೆ ತುಳು ಬರ್ಪುಡು... ಲೇಕಿನ್ ಪಾತೆರ್ರೆ ಬಂಗ ಆಪುಂಡು, ತೋಡಾ ತೋಡಾ ಪಾತೆರ್ಡ ನಿಕ್ಲೆಲೆಗ್ಲ ಬಂಗ ಆಪುಡಂತೆ ಅವೆನ್ ಧಿಮಾಕ್ ಗ್ ದೆತ್ತೊನ್ರ. ಅಂಚ ಅಮ್ಚಿ ಮರಾಠಿನ್ ಲಾ, ತುಳುನುಲಾ ಛೋಡ್ಕೇ ಕನ್ನಡೊಡೇ ಪಾತೇರ್ವೆ...  ನಿಮ್ಮಗೆಲ್ಲ ನನ್ನ ಅಭಿವಾದನ್... ಇವತ್ತು ನಾವು ತುಂಬ ಸಂತೋಷದ ಸಂದ್ರಭದಲ್ಲಿ ಇದ್ದೇವೆ.... ನಮ್ಮ ಊರಿನ ಎಮ್ಮೆ... ನಮ್ಮ ಊರಿನ ಎಮ್ಮೆಯ ಬೆಳೆಗಾರ ನಾರಾಯಣ ಭಾಯ್ ಅವರು ತಮ್ಮ ತೋಟದಲ್ಲಿ ಹೊಲಸಾಗಿ ಬೆಳೆದ ಹಳಸಿದ ಹಣ್ಣನ್ನು....”

ದಯಕರರ ಮಾತು ಮುಂದುವರಿಯುತ್ತಿದ್ದಂತೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ನಾಲ್ಕೈದು ಮಂದಿ ಹೋ... ಅಂತ ಕಿರುಚಿದರು... "ಎಂಚಿ ಸಾವುಯಾ...." ಅಂತ ರಾಗವಾಗಿ ಟೀಕೆ ಬಂತು...

ಇದು ತನ್ನನ್ನುಹೊಗಳಿದ್ದು ಅಂತ ಭಾವಿಸಿ ದಯಕರನ ಸ್ವಾಗತ ಭಾಷಣ ಮುಂದುವರಿಯಿತು..

“ಹೊಲಸಾಗಿ ಹಳಸಿದ ಹಣ್ಣನ್ನು ಬೆಳೆದ ಅಮ್ಚಿ ಪ್ರೈಡ್, ಅಮ್ಚಿ ಊರುದ, ಅಮ್ಚಿ ನೀರ್ ದ ನಾರಾಯಣ ಭಾಯ್ ಅವರನ್ನು ವೇದಿಕೆಗೆ ತಂದು ಹಾಕಿ ಅವರನ್ನು ಕೂತು ಕೊಲ್ಲಿಸಿದ್ದು ನಮಗೆ ಎಮ್ಮೆಯ ಸಂಗತಿ, ಇಂತಹ ಹಳಸಿದ ಹಣ್ಣನ್ನು ತಿನ್ನುದೇ ಅಮ್ಚೀ ಖೂಬ್ ಖೂಬ್.....”

ಕುರ್ಚಿಯಲ್ಲಿ ಚಡಪಡಿಸುತ್ತಿದ್ದ ನಾರಾಯಣರಿಗೆ ಸಿಟ್ಟು ಏರುತ್ತಿತ್ತು.. ಈ ಹುಚ್ಚರೆಲ್ಲ ಸೇರಿ ತನಗೆ ಸನ್ಮಾನ ಮಾಡುತ್ತಿದ್ದಾರ, ಅಥವಾ ತನ್ನ ಮರ್ಯಾದೆ ತೆಗೆಯುತ್ತಿದ್ದಾರ ಅಂತ ಅವರಿಗೆ ಅರ್ಥ ಆಗಲಿಲ್ಲ... ಅವರು ಗುಣಶೀಲನನ್ನುಕರೆದು ಸ್ವಾಗತ ಮಾಡಿದ್ದು ಸಾಕು ಅಂತ ಹೇಳಲು ಹೇಳಿದರು...

ಗುಣಶೀಲ ದಯಕರ್ ಎದುರು ಚೀಟಿ ಬರೆದಿಟ್ಟ ಸ್ವಾಗತ ಸಾಕು ನಿಲ್ಲಿಸಿ... ಅಂತ...

ದುರಂತ ಅಂದರೆ ಗುಣಶೀಲ ಬರೆದ ಕನ್ನಡದ ಚೀಟಿ ದಯಕರ್ ಗೆ ಸರಿಯಾಗಿ ಓದಲು ಬರುತ್ತಿರಲಿಲ್ಲ! ಸಮಯ ಆಗಿದೆ, ನಿಲ್ಲಿಸಿ ಅಂತ ಬರೆದ ಚೀಟಿಯನ್ನು, ಸಮಯ ಇದೆ ಮುಂದುವರಿಸಿ ಅಂತ ಓದಿದ ದಯಕರ ಮತ್ತು ಉಚ್ಛ ಸ್ಥಾಯಿಯಲ್ಲಿ ಹೇಳಲು ಆರಂಭಿಸಿದರು....

“ನಾರಾಯಣರು ಕಷ್ಟಪಟ್ಟು ಬೆಳೆಸಿದ ಹಳಸಿದ ಹಣ್ಣುಗಳನ್ನು ತಿಂದು ನಾವುಗಟ್ಟಮುಟ್ಟಾಗಿದ್ದೇವೆ. ಉನ್ಕೋ, ಔರ್ ಉನ್ಕೇ ಗಾಂವ್ ವಾಲೋಂಕೋ, ಹಾಗೂ ಇಷ್ಟೊಂದು ಎಮ್ಮೆಯ ಸಂಗತಿಯಿಂದ ಕುಳಿತ ಆಪ್ ಸಬೀಕೋ... ಔರ್... ”

ಇನ್ನುತಡೆಯಲಾಗದ ನಿಷ್ಠುರವಾದಿ ನಾರಾಯಣರು ಗುಣಶೀಲನ ಕೈಯ್ಯಿಂದ ಮೈಕ್ ಕಿತ್ತುಕೊಂಡು ಮುಂದೆ ದಯಕರನ ಹತ್ತಿರ ಬರತೊಡಗಿದರು....


👺👺👺👺👺👺



(ಸಶೇಷ)

🔜🔜🔜🔜🔜🔜

-ಕೆಎಂ.

Post a Comment

0 Comments