Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -09


ಜಗನ್ನಾಥನು ನವನವೀನರ  ಕಿವಿಯಲ್ಲಿ ಉಸುರಿದ ವಿಷಯವೇನು ?


ಇಲ್ಲಿಯ ವರೆಗಿನ ಕಥೆ:

ಪ್ರಗತಿಪರ ಹಲಸು ಬೆಳೆಗಾರ ಉಳ್ಳಾಲಗುತ್ತು ನಾರಾಯಣರ ಹಲಸು ಬೆಳೆಯ ಸಾಧನೆ ಕುರಿತು ಅಧ್ಯಯನ ಮಾಡಲು ಬಂದ ಅಚಿನ್ ಸಲ್ಮೇಡಾ, ಅಲ್ಲೇ ಸಮೀಪದ ನಾರಾಯಣರ ಗೆಳೆಯ ಗುಣಶೀಲ ಕುಮಾರನ ಮನೆಯಲ್ಲಿ ವಾಸ್ತವ್ಯ ಹೂಡಿರುತ್ತಾನೆ. ತನ್ನ ಅಧ್ಯಯನ ಪ್ರಬಂಧ ಪೂರ್ತಿಯಾದ ಹಿನ್ನೆಲೆಯಲ್ಲಿ ನಾರಾಯಣರಿಗೆ ಗುಣಶೀಲನ ಮನೆಯಲ್ಲಿ ಒತ್ತಾಯಪೂರ್ವಕ ಸನ್ಮಾನ ಸಮಾರಂಭ ಏರ್ಪಡಿಸಿರುತ್ತಾನೆ. ಅದಕ್ಕೆ ನಾರಾಯಣರ ಬಂಧುಮಿತ್ರರೆಲ್ಲ ಬಂದಿರುತ್ತಾರೆ. ಈ ಸಂದರ್ಭ ಮುಂಬೈಯಿಂದ ಬಂದ ದಯಕರ ನಾಯಕ್ ಮಾಡಿದ ಕರ್ಣಕಠೋರ ಸ್ವಾಗತ ಭಾಷಣ ಕೇಳಿ ಅಸ್ವಸ್ಥರಾದ ನಾರಾಯಣರು ಮೂರ್ಚಾಗತರಾಗುತ್ತಾರೆ. ಅವರ ಉಪಚಾರಕ್ಕೆ ಬಂದ ಡಾ.ಹೆಬ್ಬಾರ್ ಅವರು ವಜ್ರಕಾಯಾ ಎಲೆ ಚಿಕಿತ್ಸೆಗೆ ಬೇಕು ಅಂತ ಹೇಳುತ್ತಾರೆ. ಅದನ್ನು ತರಲು ಗುಣಶೀಲ ಹೋದಾಗ ಮನೆಯಲ್ಲಿ ಸೀನಿಮೀಯ ಘಟನೆಗಳು ನಡೆದು, ನಾರಾಯಣರು ತೀರಿ ಹೋದರು ಎಂದು ಕೆಲವರು ಅಪಾರ್ಥ ಮಾಡಿಕೊಳ್ಳುತ್ತಾರೆ. ಇದಾದ ಬಳಿಕ, ಜೀವಂತವಾಗಿ ಹೊರಬಂದ ನಾರಾಯಣರನ್ನು ಕಂಡು ಅಚಿನ್ ಮೂರ್ಛಾಗತನಾದರೆ, ನಾರಾಯಣರ ಪತ್ನಿ, ದಯಕರ ನಾಯಕ್ ಇವರ ಅವಸ್ಥೆ ಕಂಡು ಕಂಗಾಲಾಗಿ ಗುಣಶೀಲ ಕೂಡಾ ಮೂರ್ಛಾಗತನಾಗುತ್ತಾನೆ..... ನಾರಾಯಣರು ಇದರ ಅರಿವಿಲ್ಲದೆ ತೋಟದಿಂದ ಎರಡು ಹಲಸಿನ ಹಣ್ಣು ತೆಗೆದುಕೊಂಡು ಬರುತ್ತಾರೆ....

(ಮುಂದಿನ ಕಥೆ...)

🍐🍐🍐🍐🍐

ನಂತರ ಅಲ್ಲಿ ಪರಿಸ್ಥಿತಿ ತಿಳಿಯಾಯಿತು. ತಮಾಷೆ ಅಂದರೆ ಯಾವ ವಜ್ರಕಾಯ ಎಲೆಯನ್ನು ನಾರಾಯಣರ ಚಿಕಿತ್ಸೆಗೆ ಗುಣಶೀಲನ ತಂದಿದ್ದನೋ, ಅದೇ ವಜ್ರಕಾಯ ಎಲೆಯನ್ನು ತಂದು ನಾರಾಯಣರು ಗುಣಶೀಲನ ಮೂಗಿನ ಬಳಿ ಹಿಡಿದಾಗ ಆತ ಮೂರ್ಛೆ ತಿಳಿದು ಏಳುತ್ತಾನೆ. ನಾರಾಯಣರ ಹೆಂಡತಿ, ದಯಕರ ನಾಯಕ್ ಕೂಡಾ ಚೇತರಿಸುತ್ತಾರೆ. ಡಾ.ಹೆಬ್ಬಾರ್ ಅವರು ಪರೀಕ್ಷೆ ಮಾಡಿ ನಾರಾಯಣರು ಈಗ ಚೇತರಿಸಿದ್ದಾರೆ, ಆ ಲೆಕ್ಕದಲ್ಲಿ ನನಗೊಂದು ಚಾ ತರಿಸಿ ಎಂದು ಪ್ರಾಸಬದ್ಧವಾಗಿ ಹೇಳಿ ಘೋಷಿಸುತ್ತಾರೆ... ಅಷ್ಟಾಗುವಾಗ ನಾರಾಯಣರು ಸತ್ತೇ ಹೋದರು ಎಂದು ಅತ್ಯುತ್ಸಾಹದಿಂದ ಪ್ರಚಾರ ಮಾಡಿದವರು ಕಂಗಾಲಾಗುತ್ತಾರೆ...



ಈ ನಡುವೆ ಭೀಮಾವತಿ ಅವರು ಏಲಕ್ಕಿ ಹಾಕಿದ ರುಚಿಕಟ್ಟಾದ ಹಲಸಿನ ಹಣ್ಣಿನ ಜ್ಯೂಸ್ ಮಾಡಿ ಎಲ್ಲರಿಗೂ ಕೊಡುತ್ತಾಳೆ. ಜೊತೆಗೆ ನಂಜಿಕೊಳ್ಳಲು ಪೆಲತ್ತರಿ (ಹಲಸಿನ ಬೀಜ)ಯ ಫ್ರೈ ಕೂಡಾ ಇರುತ್ತದೆ...

ಅಲ್ಲಿಗೆ ಎಲ್ಲರೂ ಮಾಮೂಲಿ ಮನಃಸ್ಥಿತಿಗೆ ಬಂದಾದ ಮೇಲೆ ನಾರಾಯಣರು ಸಭಾ ಕಾರ್ಯಕ್ರಮ ಮುಂದುವರಿಯಲಿ, ಆದರೆ ದಯಕರನ ಕೈಗೆ ಮೈಕ್ ನೀಡಬಾರದು ಎಂದು ಕಟ್ಟಪ್ಪಣೆ ಕೊಡುತ್ತಾರೆ... ಮತ್ತೆ ಎಲ್ಲರೂ ಗುಣಶೀಲನ ಮನೆಗೆ ಹೋಗಿ ಅಲ್ಲಿ ಸಭಾ ಕಾರ್ಯಕ್ರಮ ಮುಂದುವರಿಯುತ್ತದೆ...



🎤🎤🎤🎤



ಪುನಃ ನಾರಾಯಣ ಕಾಲು ಹಿಡಿದು ಆಶೀರ್ವಾದ ಪಡೆದ ದಯಕರ ಹಠಕಟ್ಟಿ ಮೈಕ್ ಹಿಡಿದು ಎರಡು ಸಾಲು ಹೇಳುತ್ತಾರೆ... “ಆತ್ಮೀಯರೇ ಇವತ್ತು ನನ್ನ ಒಂದು ವಿಚಿತ್ರವಾದ ಸ್ವಾಗತ ಭಾಷಣದಿಂದಾಗಿ ಇಡೀ ಕಾರ್ಯಕ್ರಮವೇ ಲಗಾಡಿ ಹೋಗುವುದು ಸ್ವಲ್ಪದರಲ್ಲಿ ತಪ್ಪಿತು... ನಾರಾಯಣರು ರಕ್ತದೊತ್ತಡ ಸಮಸ್ಯೆಯಿಂದ ಅಸ್ವಸ್ಥರಾಗಿದ್ದರೇ ಹೊರತು ಅವರು ಸತ್ತು ಹೋಗಿಲ್ಲ ಎಂದು ತಿಳಿಸಲು ವಿಷಾದಿಸುತ್ತೇನೆ!!!!!!!!”



ಇನ್ನು ಈ ಜನರ ಕೈಯ್ಯಿಂದ ಮೈಕ್ ತಗೊಳ್ಳದಿದ್ದರೆ, ಇವರ ವಚನಾಮೃತ ಕೇಳಿ ನಾರಾಯಣರು ಸತ್ತೇ ಹೋಗುತ್ತಾರೆ ಎಂದು ಹೆದರಿದ ಗುಣಶೀಲ ದಯಕರ ಕೈಯ್ಯಿಂದ ಮೈಕ್ ಕಿತ್ತು... ನಿರೂಪಮೆ ಮುಂದುವರಿಸಿದ... “ಮತ್ತೆ ಹೇಗಿದ್ದೀರಿ ಸಾರ್... ಎಲ್ರೂ ಅರಾಮ ಅಲ್ವ, ಡೋಂಟ್ ವರಿ, ಈಗ ಸಭಾ ಕಾರ್ಯಕ್ರಮ ಮುಂದುವರಿಯುತ್ತದೆ, ಈಗ ಅಚಿನ್ ಹಾಗು ಹತ್ತು ಸಮಸ್ತರಿಂದ ನಾರಾಯಣರು ಹಾಗೂ ಅಚಿನ್ ಗುರು, ಖ್ಯಾತ ಓಟಗಾರ್ತಿ ವಿಭಾ ಪೂಂಜಾ ಅವರಿಗೆ ಸಾರ್ವಜನಿಕ ಸನ್ಮಾನ....”

 👨‍🦳👨‍🦳👨‍🦳👨‍🦳👨‍🦳👨‍🦳


ವೇದಿಕೆಯಲ್ಲಿ ಎರಡು ಪರಾ ಮರತ ಕುರ್ಚಿ ಹಾಕಿ ಅಲ್ಲಿ ನಾರಾಯಣರು ಹಾಗೂ ಪೂಂಜರನ್ನು ಕೂರಿಸಿ ಸನ್ಮಾನಿಸಲಾಯಿತು. ವಿಶೇಷವಾಗಿ ಅಂದಿನ ಸನ್ಮಾನದ ವಸ್ತುಗಳೆಲ್ಲ ಹಲಸಿನ ಉತ್ಪನ್ನಗಳಿಂದಲೇ ತಯಾರಾಗಿದ್ದು ಮಾತ್ರ ವಿಶೇಷ. ಅಚಿನ್ ಮಾತ್ರ ತನ್ನ ಕೃತಜ್ಞತೆಯ ದ್ಯೋತಕವಾಗಿ ನಾರಾಯಣರು ಹಾಗೂ ಪೂಂಜರಿಗೆ ಬೆಳ್ಳಿಯ ಹಲಸಿನ ಹಣ್ಣಿನ ಸ್ಮರಣೆಕೆ ನೀಡಿಕಾಲು ಹಿಡಿದು ನಮಸ್ಕರಿಸಿದ. ನಂತರ ಹಲಸಿನ ಬೀಜದ ಮಾಲೆ ಹಾಕಿ, ಹಲಸಿನ ಎಲೆಗಳ ಶಾಲು ಹೊದೆಸಿ, ಹಲಸಿನ ಸಿಪ್ಪೆಯಿಂದ ತಯಾರಿಸಿದ ವಿಶೇಷ ಹಸಿರು ಪೇಟಾವನ್ನು ಇಬ್ಬರಿಗೂ ತೊಡಿಸಲಾಯಿತು..... ಎಲ್ಲರಿಗೂ ಬಹಳ ಸಂತೋಷವಾಯಿತು... ತಮ್ಮದೇ ಊರಿನ ಸಂಸ್ಕೃತಿಯಂತೆ ಸನ್ಮಾನ ನಡೆದದ್ದರಿಂದ....



ಇದೇ ಖುಷಿಯಲ್ಲಿ ವೇದಿಕೆಗೆ ಬಂದ ಜಗನ್ನಾಥ ಹೇಳಿದ... "ನಮ್ಮೆಲ್ಲರ ಆತ್ಮೀಯರಾದ ನಾರಾಯಣರ ಸನ್ಮಾನದ ಈ ಖುಷಿಯಲ್ಲಿ ನಾನು ಅವರಿಂದಲೇ ಕಲಿತ ಹುಲಿವೇಷದ ಎರಡು ಸ್ಟೆಪ್ ಹಾಕಿ ನಿಮ್ಮನ್ನು ರಂಜಿಸಲಿದ್ದೇನೆ. ಹುಲಿಯೊಂದು ತನ್ನ ಹಲ್ಲಿನಿಂದ ಪೆಲಕಾಯಿಯನ್ನು ಕಚ್ಚಿ ಎಸೆಯುವ ರೋಚಕ ದೃಶ್ಯವನ್ನು ನೀವೀಗ ವೇದಿಕೆಯಲ್ಲಿ ಕಾಣಬಹುದು..." ಎನ್ನುತ್ತಾ ಸ್ಟೆಪ್ ಹಾಕಲು ಸಿದ್ಧನಾದ...



ತಕ್ಷಣ ಮಧ್ಯಪ್ರವೇಶಿಸಿದ ಡಾ.ಹೆಬ್ಬಾರ್ ಮೈಕಿನಲ್ಲಿ ಹೇಳಿದರು. “ಅಣ್ಣಾ, ನಿಮಗ್ಯಾರಿಗೂ ನಾರಾಯಣರ ಆರೋಗ್ಯದ ಕಾಳಜಿ ಇಲ್ವ.... ಬೆಚ್ಚಿ ಬೀಳಿಸುವ ದೃಶ್ಯಗಳನ್ನು ನೋಡಿದರೆ ಅವರು ಮತ್ತೆ ಅಸ್ವಸ್ಥರಾಗುತ್ತಾರೆ. ನೀವೆಲ್ಲ ಸೇರಿ ಅವರಿಗೆ ಸನ್ಮಾನ ಮಾಡುವುದೋ, ಉಪದ್ರ ಮಾಡುವುದೋ.... ದಯವಿಟ್ಟು ನಿಮ್ಮ ನೃತ್ಯವನ್ನು ಎಲ್ಲರೂ ಹೋದ ಬಳಿಕ ಮಾಡಿ....”



ಡಾ.ಹೆಬ್ಬಾರ್ ಮಾತಿನಿಂದ ತೀವ್ರ ಬೇಸರಗೊಂಡು ಜಗನ್ನಾಥ ಸಭೆಗೆ ಹೋಗಿ ಕುಳಿತ....


🍐🍐🍐🍐🍐🍐🍐🍐



ಮತ್ತೆ ಸಭೆಗೆ ಟ್ರ್ಯಾಕಿಗೆ ಬಂತು. “ಸಾರ್..... ಈಗ ಅಚಿನ್ ಸಲ್ಮೇಡಾ ಅವರಿಂದ ಅಭಿನಂದನಾ ಭಾಷಣ…” ಗುಣಶೀಲ ನಿರೂಪಿಸಿದ....



ಯಾವತ್ತೂ ನಗು ನಗುತ್ತಾ ತಮಾಷೆಯಿಂದಲೇ ಮಾತನಡುವ ಅಚಿನ್ ಇಂದು ಸ್ವಲ್ಪ ಭಾವುಕನಾಗಿದ್ದ... ಆತನ ಮಾತುಗಳು ಗಂಭೀರವಾಗಿದ್ದವು. “ಆತ್ಮೀಯರೇ... ನಾನು ನನ್ನ ಅಧ್ಯಯನಕ್ಕೋಸ್ಕರ ಈ ಉಳ್ಳಾಲಗುತ್ತಿನ ಎಸ್ಟೇಟಿನಲ್ಲಿ ಕಳೆದ ಆರು ತಿಂಗಳು ಅತ್ಯಂತ ಅಮೂಲ್ಯವಾದದ್ದು. ನಾನು ಹಲಸಿನ ಬಗ್ಗೆ ಮಾತ್ರವಲ್ಲ, ಜೀವನದ ಕುರಿತೂ ಬಹಳಷ್ಟು ತಿಳಿದುಕೊಂಡೆವು. ನಾನು ಅತ್ಯಂತ ಕಷ್ಟಪಟ್ಟು ಬೆಳೆದವನು. ಬಡತನದ ಕುಟುಂಬದಿಂದ ಬಂದವನು. ಬದುಕಿನಲ್ಲಿ ಮೇಲೆ ಬರಲು ಎಷ್ಟು ಕಷ್ಟ ಇದೆ ಎಂಬುದು ಸ್ವತಃ ನನಗೆ ಗೊತ್ತು, ಹೀಗಿರುವಾಗ ಈ ಬಂಜರು ಭೂಮಿಯನ್ನು ಹಲಸಿನ ಕಲ್ಪವೃಕ್ಷವಾಗಿಸುವಲ್ಲಿ ಸುಮಾರು 30 ವರ್ಷಗಳ ಕಾಲ ನಾರಾಯಣರು ಪಟ್ಟ ಕಷ್ಟದ ಅರಿವು ನನಗಿದೆ. ಅವರ ಜೊತೆ ಓಡಾಡುತ್ತಾ, ಅವರ ಕೃಷಿಯ ಬಗ್ಗೆ ತಿಳಿಯುತ್ತಾ ತಿಳಿಯುತ್ತಾ, ಅವರ ಮೇರು ವ್ಯಕ್ತಿತ್ವದ ಕುರಿತು ಸಾಕಷ್ಟು ತಿಳಿದುಕೊಂಡೆ. ಅವರ ಕಟ್ಟುನಿಟ್ಟಿನ ಮನುಷ್ಯ ಹೌದು, ಹಾಗಂತ ಕಠೋರ ಹೃದಯಿ ಅಲ್ಲ, ನೇರ ನಡೆ ನುಡಿಯ ಅವರಲ್ಲಿ ವಂಚನೆ ಇಲ್ಲ, ಎಲ್ಲರೂ ತನ್ನ ಹಾಗೆ ನೇರ ನಡೆ ನುಡಿಯಲ್ಲೇ ಇರಬೇಕೆಂದು ಅವರು ಬಯಸುತ್ತಾರೆ, ಸ್ವಾಭಿಮಾನಿಯೂ ಹೌದು. ಯಾರನ್ನೂ ಮನಸ್ಸಿನಲ್ಲಿ ದ್ವೇಷಿಸುವುದಿಲ್ಲ, ಅನಿಸಿದ್ದನ್ನು ಮುಚ್ಚುಮರೆಯಿಲ್ಲದೆ ಹೇಳುತ್ತಾರೆ. ಹಲಸಿನ ಕುರಿತ ಅವರ ಅನುಭವ, ಕೃಷಿಯ ಸೂಕ್ಷ್ಮ ವಿಚಾರಗಳ ಕುರಿತ ಅವರ ಅಧ್ಯಯನ ಜ್ಞಾನ, ಹಲಸಿನ ಉತ್ಪನ್ನಗಳ ಕುರಿತು ಅವರು ಊರಿನವರಿಗೆ ನೀಡುವ ಉಚಿತ ತರಬೇತಿ, ಸುಮಾರು ಎರಡು ಸಾವಿರ ಮಂದಿಗೆ ಅವರು ವಿವಿಧ ಫ್ಯಾಕ್ಟರಿಗಳಲ್ಲಿ ಉದ್ಯೋಗ ನೀಡಿರುವುದು, ಹಲಸಿನ ಉತ್ಪನ್ನಕ್ಕೆ ಅವರು ಕಟ್ಟಿಕೊಟ್ಟ ಮಾರುಕಟ್ಟೆ ಇವೆಲ್ಲ ಈಗಿನ ಯುವಕರಿಗೆ ಮಾದರಿಯೂ ಹೌದು... ”



ನಿರಂತರ ಮಾತಿನಿಂದ ಬಳಲಿದ ಅಚಿನ್, ಭೀಮಾವತಿ ಮಾಡಿದ ಹಲಸಿನ ಹಣ್ಣಿನ ಮಿಲ್ಕ್ ಶೇಕ್ ಕುಡಿದು ಸುಧಾರಿಸಿಕೊಂಡು! ಮಾತು ಮುಂದುವರಿಸಿದ....



“ಸ್ನೇಹಿತರೇ... ಆರು ತಿಂಗಳಿನಿಂದ ಅಧ್ಯಯನಕ್ಕೋಸ್ಕರ ಇಲ್ಲಿದ್ದೇನೆ, ಇಲ್ಲಿ ನಾರಾಯಣ ಮನೆಯ ಅನ್ನದ ಋಣ ನನಗಿದೆ, ಅವರ ಮನೆಯವರಂತೆಯೇ ನಾರಾಯಣರು ಹಾಗೂ ಅವರ ಮತ್ತು ನನ್ನ ಆಪ್ತಸ್ನೇಹಿತ ಗುಣಶೀಲ ನನ್ನನ್ನು ನೋಡಿಕೊಂಡಿದ್ದಾರೆ. ನಾನು ಮತ್ತು ಗುಣಶೀಲ ತುಂಬ ತಮಾಷೆಯಿಂದ ವರ್ತಿಸುತ್ತಿದ್ದೇವೆ ನಿಜ. ಹಾಗಂತ ನಮಗಿಬ್ಬರಿಗೂ ನಾರಾಯಣರ ಮೌಲ್ಯ, ಮಹತ್ವ ಗೊತ್ತು... ಒಂದು ತಿಂಗಳ ಹಿಂದೆ ನನ್ನಿಂದ ಒಂದು ತಪ್ಪಾಗಿ ಹೋಯಿತು.. ನಾನದನ್ನು ಈಗ ನಿಮ್ಮೆಲ್ಲರ ಎದುರು ಹೇಳಲೇಬೇಕು. ಯಾಕಂದರೆ ಆ ತಪ್ಪು ನನ್ನನ್ನು ಚುಚ್ಚುತ್ತಲೇ ಇದೆ. ಹೇಳದೆ ಇಲ್ಲಿಂದ ಹೋದರೆ ನನ್ನ ಮನಸ್ಸಿಗೆ ಸಮಾಧಾನ ಇರುವುದಿಲ್ಲ, ಏನೆಂದರೆ... ಏನೆಂದರೆ....ನಾನೊಂದು ದಿವಸ, ಮನೆಯಲ್ಲಿ ಯಾರೂ ಇಲ್ಲದಾಗ, ಹಸಿವು ತಡೆಯಲಾಗದೆ, ಅಂಗಳದಲ್ಲಿದ್ದ ನಾರಾಯಣರ ನೆಚ್ಚಿನ ಹಲಸಿನ ಹಣ್ಣನ್ನು ಅವರ ಅನುಮತಿ ಇಲ್ಲದೆ ಕೊಯ್ದು, ಬಿಡಿಸಿ ತಿಂದಿದ್ದೇನೆ. ಅದು ತಪ್ಪೆಂದು ಆಗ ನನಗೆ ಅರಿವಾಗಲಿಲ್ಲ, ನಂತರ ನನ್ನ ಮಿತ್ರರು ವಿವರಿಸಿದಾಗ ಗೊತ್ತಾಯ್ತು. ಆದರೆ, ಕೋಪದಿಂದ ನಾರಾಯಣರು ಏನೂ ಮಾಡಿಯಾರೋ ಅಂತ ಆತಂಕದಿಂದ ಗುಣಶೀಲ ಸಹಿತ ನನ್ನ ಸ್ನೇಹಿತರೆಲ್ಲ ಸುಳ್ಳು ಹೇಳಿ ಆ ಸಂದರ್ಭ ನನಗೆ ಶಿಕ್ಷೆಯಾಗುವುದನ್ನು ತಪ್ಪಿಸಿದರು. ಆದರೆ, ನಾರಾಯಣ ಅಂಕಲ್, ಈಗ ನಾನು ನಿಜ ಹೇಳುತ್ತಿದ್ದೇನೆ. ಆ ಹಲಸಿನ ಹಣ್ಣನ್ನು ತಿಂದದ್ದು ನಾನೇ... ನೀವು ನನಗೆ ಯಾವ ಶಿಕ್ಷೆ ನೀಡಿದರೂ ನಾನು ಅನುಭವಿಸಲು ಸಿದ್ಧನಿದ್ದೇನೆ.... ”



ಇದನ್ನೆಲ್ಲ ಸಭೆಯಲ್ಲಿ ನೋಡುತ್ತಿದ್ದ ಜಗನ್ನಾಥ ಪಕ್ಕದಲ್ಲಿದ್ದ ನವನವೀನ ಶೆಟ್ಟಿಯ ಕಿವಿಯಲ್ಲಿ ಉಸುರಿದ “ತೂಲ ಇತ್ತೆ ಧಾರಾವಾಹಿ ಬರೆಪುನಾಯೆ... ಈಡೆಗ್ ಉಂತಾವೆ, ನಾರಾಯಣೆರ್ ಲಕ್ಕ್ ದ್ ಉಂತುದು ತುಂಬು ಬರ್ಪೆರ್, ಆಡೆಗ್ ಇನಿತ ಕಂತ್ ಮುಗಿವುಂಡು, ಮಲ್ಲ ಸಸ್ಪೆನ್ಸ್ ದ ಲೆಕ್ಕ ಸಶೇಷಾಂದ್ ಬರೆಪೆ, ಎಲ್ಲೆ ಓದಿಯೆರೆ ಪೋನಗ ಅಯಿಟ್ ವಾ ಸಸ್ಪೆನ್ಸ್ ಲ ಇಜ್ಜಿ, ಮೂಜಿ ಕಾಸ್ದಾಯೆ... ಪೊಕ್ಕಡೆ ಕುತೂಹಲ ಪುಟ್ಟಾವ್ನು. ಮನದಾನಿ ಅಯಿಟ್ ಎಂಚಿನಲ ಉಪ್ಪುಜ್ಜಿ!!!!!!!”

🤭🤭🤭🤭

“ಈ ಮನಿಪಾಂದೆ ಕುಲ್ಲುವನ, ಅಧಿಕ ಪ್ರಸಂಗ ಪಾತೆರೊಡ್ಚಿ...” ನವನವೀನ ಶೆಟ್ಟಿ ಮಾತು ಮುಗಿಸಲಿಲ್ಲ, ಜಗನ್ನಾಥನ ಊಹೆ ನಿಜವಾಗಿತ್ತು...!!

 🤫🤫🤫🤫🤫

“ಸಾಕು ನಿಲ್ಲಿಸು.....!!!!”


ಎಂದು ಗಂಭೀರ ಧ್ವನಿಯಲ್ಲಿ ಅಪ್ಪಣೆ ಕೊಡಿಸಿದ ನಾರಾಯಣರು ಅಚಿನ್ ಕೈಯ್ಯಿಂದ ಮೈಕ್ ಕಸಿದು, ತಾವು ವೇದಿಕೆಯ ಮಧ್ಯಕ್ಕೆ ಬಂದು ನಿಂತು ಸುತ್ತಲೂ ನೋಡಿದರೂ, ಮುಖ್ಯವಾಗಿ ಗುಣಶೀಲನ ಮುಖವನ್ನೇ ನೋಡುತ್ತಾ ಏನೋ ಹೇಳಲು ಬಾಯಿ ತೆರೆದರು.....!!!




🎤🎤🎤🎤🎤🎤🎤


(ಸಶೇಷ)

-ಕೆಎಂ.

🙏🙏🙏🙏

(ಸ್ಪಷ್ಟನೆ: ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶ ಕಾಲ್ಪನಿಕ. ವಾಸ್ತವಕ್ಕೆ ಹೋಲಿಕೆ ಇದ್ದರೆ  ಕಾಕತಾಳೀಯ ಮಾತ್ರ. ಲಘು ಧಾಟಿಯಲ್ಲಿ ಪ್ರಸ್ತುತ ಪಡಿಸಿದ ವಿಚಾರಗಳೆಲ್ಲ ತಮಾಷೆಗೋಸ್ಕರ ಅಷ್ಟೆ.)

Post a Comment

0 Comments