Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -10



ನಾರಾಯಣರು ಭಾಷಣದಲ್ಲಿ ಹೇಳೀದ್ದೇನು ? 




ಇಲ್ಲಿ ವರೆಗಿನ ಕಥೆ: ಪ್ರಗತಿಪರ ಹಲಸು ಬೆಳೆಗಾರ ಉಳ್ಳಾಲಗುತ್ತು ನಾರಾಯಣರ ಹಲಸು ಬೆಳೆಯ ಸಾಧನೆ ಕುರಿತು ಅಧ್ಯಯನ ಮಾಡಲು ಬಂದ ಅಚಿನ್ ಸಲ್ಮೇಡಾ, ಅಲ್ಲೇ ಸಮೀಪದ ನಾರಾಯಣರ ಗೆಳೆಯ ಗುಣಶೀಲ ಕುಮಾರನ ಮನೆಯಲ್ಲಿ ವಾಸ್ತವ್ಯ ಹೂಡಿರುತ್ತಾನೆ. ತನ್ನ ಅಧ್ಯಯನ ಪ್ರಬಂಧ ಪೂರ್ತಿಯಾದ ಹಿನ್ನೆಲೆಯಲ್ಲಿ ನಾರಾಯಣರಿಗೆ ಗುಣಶೀಲನ ಮನೆಯಲ್ಲಿ ಒತ್ತಾಯಪೂರ್ವಕ ಸನ್ಮಾನ ಸಮಾರಂಭ ಏರ್ಪಡಿಸಿರುತ್ತಾನೆ. ಅದಕ್ಕೆ ನಾರಾಯಣರ ಬಂಧುಮಿತ್ರರೆಲ್ಲ ಬಂದಿರುತ್ತಾರೆ. ಈ ಸಂದರ್ಭ ಅಸ್ವಸ್ಥರಾದ ನಾರಾಯಣರು ಬಳಿಕ ಚೇತರಿಸಿಕೊಳ್ಳುತ್ತಾರೆ. ನಂತರ ಸಭಾ ಕಾರ್ಯಕ್ರಮ ಮುಂದುವರಿಯುತ್ತದೆ. ಸಮಾರಂಭದಲ್ಲಿ ನಾರಾಯಣರು ಹಾಗೂ ಶಿಕ್ಷಕಿ ವಿಭಾ ಪೂಂಜಾ ಅವರನ್ನು ಹಲಸಿನ ಸುವಸ್ತುಗಳಿಂದ ಸನ್ಮಾನಿಸಲಾಗುತ್ತದೆ. ಒತ್ತಾಯಪೂರ್ವಕವಾಗಿ ಹುಲಿ ವೇಷ ಕುಣಿತಕ್ಕೆ ಯತ್ನಿಸಿದ ಜಗನ್ನಾಥನ ಪ್ರಯತ್ನಕ್ಕೆ ಡಾ.ಹೆಬ್ಬಾರ್ ತಡೆ ಹಾಕುತ್ತಾರೆ. ನಂತರ ಅಭಿನಂದನಾ ಭಾಷಣ ಮಾಡಿದ ಅಚಿನ್ ಭಾವುಕನಾಗುತ್ತಾನೆ. ನಾರಾಯಣರ ಮನೆಯಲ್ಲಿ ತಾನು ಹಸಿವೆ ತಡೆಯದೆ ಹಲಸಿನ ಹಣ್ಣು ತಿಂದದ್ದನ್ನು ಒಪ್ಪಿಕೊಳ್ಳುತ್ತಾನೆ. ಆಗ, ಆತನ ಮಾತುಗಳನ್ನು ಅರ್ಧದಲ್ಲೇ ತುಂಡರಿಸಿದ ನಾರಾಯಣರು ಮೈಕ್ ಹಿಡಿದು ಮುಂದೆ ಬರುತ್ತಾರೆ..


🚶‍♂️🚶‍♂️🚶‍♂️🚶‍♂️🚶‍♂️

(ಮುಂದಿನ ಕಥೆ...)

🎤🎤🎤🎤🎤🎤

ಒಂದು ದೀರ್ಘ ನಿಟ್ಟುಸಿರು ಬಿಟ್ಟು ನಾರಾಯಣರು ಮಾತು ಶುರು ಮಾಡಿದರು...

ನನ್ನೆಲ್ಲಾ ಆತ್ಮೀಯರೇ, ಹಿತೈಷಿಗಳೆ ಹಾಗೂ ಅಭಿಮಾನಿಗಳೇ... ತುಂಬ ಭಾವುಕನಾಗಿದ್ದೇನೆ. ಯಾಕೆಂದರೆ ಅರ್ಜಿ ಹಾಕಿ, ವಶೀಲಿ ಮಾಡಿ, ಕೈಕಾಲು ಹಿಡಿದು ಪಡೆದುಕೊಳ್ಳುವ ಸನ್ಮಾನಕ್ಕಿಂತಲೂ ನಮ್ಮ ಮನಸ್ಸಿಗೆ ಹತ್ತಿರವಾದವರು ಗುರುತಿಸಿ ನೀಡುವ ಗೌರವ ತುಂಬ ತುಂಬ ತೃಪ್ತ ಭಾವವನ್ನು ನೀಡುತ್ತದೆ. ನನಗಿಂದೂ ಅದೇ ಆಗಿದೆ.



ನಾನು ಪ್ರಶಸ್ತಿ,ಸನ್ಮಾನ, ವೇದಿಕೆ, ಭಾಷಣ ಇತ್ಯಾದಿಗಳನ್ನು ಬಯಸಿದವನಲ್ಲ, ಅವುಗಳ ಹಿಂದೆ ಹೋದವನೂ ಅಲ್ಲ. ನನಗೆ ಭಾಷಣ ಮಾಡಿಯೂ ಗೊತ್ತಿಲ್ಲ. ಆದರೆ, ಈ ಹುಡುಗ ಅಚಿನ್ ಮಾತುಗಳನ್ನು ಕೇಳಿದ ಬಳಿಕ ನಾಲ್ಕು ಮಾತನಾಡಬೇಕು ಅನ್ನಿಸುತ...



ಹೌದಪ್ಪ ಅಚಿನ್, ನೀನೇ ಹಲಸಿನ ಹಣ್ಣು ತಿಂದದ್ದು ಅಂತ ನನಗೆ, ನಾಯಿ ನಿನ್ನನ್ನು ಹುಡುಕಿಕೊಂಡು ಹೋದಾಗಲೇ ಗೊತ್ತಿತ್ತು. ಯಾಕೆಂದರೆ ನೀನೇ ಪೊಲೀಸರಿಗೆ ನೀಡಿದ ನಾಯಿಯಾದರೂ ಅದು ಇಲಾಖೆ ಸೇರಿದ ಬಳಿಕ ತನ್ನ ಇಲಾಖೆಗೇ ನಿಷ್ಠವಾಗಿರುತ್ತದೆಯೇ ಹೊರತು ಆರೋಪಿಗಳನ್ನುಪತ್ತೆ ಹಚ್ಚುವುದಿಲ್ಲ ಎಂಬುದು ಸರ್ವಸತ್ಯವೇ ಹೌದು. ಆ ದಿನ ರಾತ್ರಿ ನನ್ನ ಸಿಟ್ಟು ಕಮ್ಮಿಯಾದ ಮೇಲೆ ಗುಣಶೀಲ ಕೂಡಾ ನಡೆದ ವಿಷಯವನ್ನೆಲ್ಲ ನನಗೆ ಹೇಳಿದ....



ಹೌದಪ್ಪ, ಒಂದು ಕ್ಷಣ ನನಗೆ ಸಿಟ್ಟು ಬಂದದ್ದು ಹೌದು. ಆದರೆ, ನಂತರ ತಾಳ್ಮೆಯಿಂದ ಯೋಚಿಸಿದಾಗ ನಾನು ದುಡುಕಿದೆ ಅಂತ ಅನಿಸಿತು. ನಾವು ಬದುಕಿನಲ್ಲಿ ಬೇಸರದಲ್ಲೂ, ಸಿಟ್ಟಿನಲ್ಲೂ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು. ತೆಗೆದುಕೊಂಡರೂ ಅದು ವಿವೇಚನೆಯಿಂದ ಕೂಡಿರುತ್ತದೆ ಅಂತ ಹೇಳಲಾಗದು. ಸಿಟ್ಟು ಮತ್ತು ಬೇಸರ ಆವರಿಸಿದಾಗ ನಮ್ಮ ಮನಸ್ಸು ತಾರ್ಕಿಕವಾಗಿ ಯೋಚಿಸುವ ಶಕ್ತಿ ಕಳೆದುಕೊಂಡಿರುತ್ತದೆ. ಆ ಸಿಟ್ಟು ನಮ್ಮನ್ನೂ, ನಮ್ಮ ಎದುರುಗಿರುವವರನ್ನೂ ಸುಟ್ಟು ಬಿಡಲೂಬಹುದು. ಹಾಗಾಗಿ, ಅಂತಹ ಸಂದರ್ಭ ನಮ್ಮಷ್ಟಕ್ಕೇ ಸುಮ್ಮನಿರುವುದು ವಾಸಿ....



ಹಸಿದ ನೀನು ನನ್ನ ತೋಟದಲ್ಲಿ ಬೆಳೆದ ಹಲಸು ತಿಂದಾಗ, ಆಯ್ತಪ್ಪ ತಿನ್ನು ಎನ್ನದೇ ಶಿಕ್ಷಿಸಲು ಹೊರಟದ್ದು ನನ್ನ ಸಂಕುಚಿತ ಮನೋಭಾವ ಆಗಬಹುದು ಅಂತ ಬಳಿಕ ಯೋಚಿಸಿದಾಗ ಅರಿವಾಯಿತು. ಹಾಗಾಗಿ, ತಿಂದವ ನೀನೇ ಅಂತ ಗೊತ್ತಿದ್ದರೂ ಏನೂ ಗೊತ್ತಿಲ್ಲದ ಹಾಗೆ ನಟಿಸಿದೆ. ಗುಣಶೀಲ ಕೂಡಾ ಹೇಳಿದ ನಿನ್ನ ಪ್ರಾಮಾಣಿಕತೆ ಬಗ್ಗೆ...



ಇವತ್ತು ನೀನಾಗಿ ವೇದಿಕೆಯಲ್ಲಿ ನೀನು ಮಾಡಿದ್ದನ್ನು ನೇರ ಹೇಳಿದಾಗ,ನಾನು ನಿನ್ನನ್ನು ಕ್ಷಮಿಸಿದ ನಿರ್ಧಾರ ಸರಿ ಅಂತ ನನಗೆ ಅನ್ನಿಸಿತು, ಹೆಮ್ಮೆಯಾಯಿತು. ಶಾಭಾಸ್... ಇಂತಹ ನೇರ ಮಾತು, ನೇರವಾದ ನಡೆ, ನೇರವಾದ ಬದುಕು ನಿನ್ನಲ್ಲಿ ಇನ್ನಷ್ಟು ಆತ್ಮವಿಶ್ವಾಸ ತುಂಬಲಿ ಅಂತ ತುಂಬು ಮನಸ್ಸಿನಿಂದ ಹಾರೈಸುತ್ತೇನೆ...


🍈🍈🍈🍈🍈🍈



ಇನ್ನು ಈ ಉದ್ಯಮದಲ್ಲಿ ನಾನು ಸಾಕಷ್ಟು ಏಳುಬೀಳು ಕಂಡಿದ್ದೇನೆ. ನನ್ನ ಆರಂಭದ ದಿನಗಳಲ್ಲಿ, ಈ ತೋಟವನ್ನು ಕಟ್ಟಿ ಬೆಳೆಸುವ ಸಂದರ್ಭದಲ್ಲಿ ಕೈಜೋಡಿಸದವರೂ ಕೂಡಾ ನಾನಿಂದು ಒಂದು ಹಂತಕ್ಕೆ ಬಂದು ಜನಪ್ರಿಯನಾಗಿರುವಾಗ ಹಿಂದಿನಿಂದ ಮಾತನಾಡಿಕೊಳ್ಳುತ್ತಿರುವುದು ನನಗೂ ತಿಳಿದಿದೆ.

ನಾವು ದೊಡ್ಡ ಮನುಷ್ಯರೆನಿಸಿಕೊಂಡಾಗ ನಮ್ಮ ದೊಡ್ಡತನ ಮಾತ್ರ ಎಲ್ಲರಿಗೂ ಕಾಣುತ್ತದೆ, ಅಲ್ಲಿ ವರೆಗೆ ತಲುಪುವಲ್ಲಿ ನಾವು ಹಾಕಿದ ಕಣ್ಣೀರು, ಎದುರಿಸಿದ ಕಷ್ಟ, ಅವಮಾನ, ಅಸಹಾಯಕತೆಗಳು ಎಲ್ಲಿಯೂ ಕಾಣಿಸುವುದಿಲ್ಲ. ಹಾಗಾಗಿ ಮೇಲೆ ಬಂದವನಿಗೆ ಮತ್ತು ಆತನ ಆಪ್ತರಿಗೆ ಮಾತ್ರ ಗೊತ್ತಿರುತ್ತದೆ, ಆತನೆಷ್ಟು ಕೆಳಗಿನಿಂದ ಮೇಲೆ ಬಂದಿದ್ದಾನೆ ಅಂತ...



🥦🥦🥦🥦🥦🥦🥦



ಹಲಸು ತುಂಬ ಮೌಲ್ಯ ಇರುವಂಥ ಬೆಳೆ. ಆದರೆ ಜನರಿಗೆ ಬೆಲೆ ಗೊತ್ತಿಲ್ಲ, ತೋಟದಲ್ಲಿ ಬಿದ್ದು ಕೊಳೆತರೂ ಅದಕ್ಕೆ ವಿಲೇವಾರಿ ಮಾಡುವುದಿಲ್ಲ. ಹಲಸಿನಿಂದ ಸಾಕಷ್ಟು ತಿಂಡಿ ತಿನಿಸು ತಯಾರಿಸಬಹುದು, ಹೊರದೇಶಗಳಿಗೆ ರಫ್ತು ಮಾಡಬಹುದು... ನಾವಿದನ್ನೆಲ್ಲ ಅನುಷ್ಠಾನ ಮಾಡಿದಾಗ, ಹಲಸಿನ ಉತ್ಪನ್ನಗಳ ತಯಾರಿಗೆ ಸಾಕಷ್ಟುವ್ಯವಸ್ಥೆ ಕಲ್ಪಿಸಿದಾಗ ಬೆಳೆಗೂ ಬೆಲೆ ಬರುತ್ತದೆ... ಅಂತಹ ಕಾರ್ಯ ಮುಂದೆ ನಿಮ್ಮಂತಹ ಯುವಕರಿಂದ ಆಗಲಿ ಅಂತ ಆಶಿಸುತ್ತೇನೆ. ದಯಕರ ನಾಯಕ್ ಹಳಸಿದ ಹಣ್ಣು ಅಂತ ಹೇಳಿದ್ದು ಹೌದು... ನನಗೂ ಆತಂಕ ಆದದ್ದು ಹೌದು, ಆದರೆ ನೀವೆಲ್ಲ ಅಷ್ಟು ಪ್ರೀತಿಯಿಂದ ಬಾಂಬೆಯಿಂದ ಈ ಕಾರ್ಯಕ್ರಮಕ್ಕೆ ಬಂದಿದ್ದೀರಿ, ನನ್ನ ಎಲ್ಲ ಚಟುವಟಿಕೆಗಳಿಗೆ ಕೈಜೋಡಿಸುತ್ತೀರಿ, ದಯಕರನ ಭಾಷೆ ತಪ್ಪಿರಬಹುದು, ಆದರೆ, ಭಾವ ತಪ್ಪಿಲ್ಲ, ಆತನ ಮನಸ್ಸಿನಲ್ಲಿರುವ ಪ್ರೀತಿಯನ್ನು ನಾನು ಕಾಣಬಲ್ಲೆ, ನೀವೆಲ್ಲ ನನ್ನ ಕುಟುಂಬದವರ ಹಾಗೆ. ಇವತ್ತು ನನ್ನ ಪಾಲಿಗೆ ತುಂಬ ಸಂತೋಷದ ದಿವಸ, ನಾನೆಂದಿಗೂ ಮರೆಯಲಾರೆ, ಓರ್ವ ಸಾಮಾನ್ಯ ಬೆಳೆಗಾರನಾಗಿದ್ದ ನನ್ನನ್ನು ಗುರುತಿಸಿ, ಸನ್ಮಾನಿಸಿದ್ದಕ್ಕೆ ಧನ್ಯವಾದಗಳು...ಇನ್ನೊಂದು ಪ್ರಮುಖ ಘೋಷಣೆ ಇದೆ, ನನ್ನ ಅಂಗಳದಲ್ಲಿದ್ದ ಮರದಿಂದ ಹಲಸು ತಿಂದು ಜನಪ್ರಿಯನಾದ ಅಚಿನ್ ಹೆಸರನ್ನೇ ನಾನು ಆ ತಳಿಯ ಹಲಸಿಗೆ ಇರಿಸಲು ನಿರ್ಧರಿಸಿದ್ದೇನೆ. ಇನ್ನು ಮುಂದೆ ಆ ತಳಿಯ ಹಲಸಿಗೆ ಅಚಿನ್ ಹಲಸು ಎಂದೇ ಹೆಸರಾಗಲಿ... ಧನ್ಯವಾದಗಳು, *ಜೈ ಕರ್ನಾಟಕ, ಜೈ ಉಳ್ಳಾಲ....



ನಾರಾಯಣರು ಮಾತು ಮುಗಿಸಿ ಮರಳಿದಾಗ ಎಲ್ಲರೂ ಎದ್ದು ನಿಂತು ಚಪ್ಪಾಳೆ ತಟ್ಟಿದರು...



 🧇🧇🧆🧆🍕🍜🍨🍧

ನಂತರ ಭೀಮಾವತಿ ಹಾಗೂ ಭವ್ಯಶ್ರೀ ನೇತೃತ್ವದಲ್ಲಿ ಹಲಸಿನ ವಿವಿಧ ಖಾದ್ಯಗಳ ಊಟವನ್ನು ಎಲ್ಲರಿಗೂ ಹಂಚಲಾಯಿತು. ಹಲಸಿನ ಎಲೆಯ ಪತ್ರಾವಳಿಯ ಬಟ್ಟಲಿನಲ್ಲಿ ಊಟ, ಹಲಸಿನ ಗಂಜಿ, ಹಲಸಿನ ಸಾರು, ಹಲಸಿನ ಕಾಯಿ ಸಾಂಬಾರು, ಹಲಸಿನ ಸಿಪ್ಪೆಯ ಚಟ್ನಿ, ಹಲಸಿನ ಕಾಯಿ ಹಬ್ಬಳ, ಎಳೆ ಹಲಸಿನ ಉಪ್ಪಿನಕಾಯಿ, ಹಲಸಿನ ಹಣ್ಣು ಹಾಕಿದ ಹಲಸು ಮಜ್ಜಿಗೆ, ಹಲಸಿನ ಜಾಮ್ ನಿಂದ ತಯಾರಿಸಿದ ಪಾಯಸ, ಹಲಸಿನ ಹಣ್ಣಿನ ಹೋಳಿಗೆ, ಹಲಸಿನ ಬೀಜದ ಚಿಪ್ಸ್, ಹಲಸಿನ ಪಿಜ್ಜಾ ಊಟಕ್ಕಿದ್ದರೆ, ಊಟದ ಬಳಿಕ ಹಲಸಿನ ಹಣ್ಣಿನ ನ್ಯಾಚುರಲ್ ಐಸ್ ಕ್ರೀಂ, ಹಾಗೂ ಹಲಸಿನ ಬೀಜದ ಹುಡಿಯ ಬೀಡಾದ ವ್ಯವಸ್ಥೆ ಮಾಡಲಾಗಿತ್ತು.... ಯಾರಿಗೂ ಡೌನ್ ಲೋಡ್ ಸಮಸ್ಯೆ ಆಗಬಾರದು ಎಂಬ ಕಾರಣಕ್ಕೆ, ಮುಂಜಾಗ್ರತಾ ಕ್ರಮವಾಗಿ ಮನೆಯ ಟ್ಯಾಂಕ್ ನಲ್ಲಿ ಅಗತ್ಯ ಪ್ರಮಾಣದ ನೀರು ಶೇಖರಿಸಿ ಇಡಲಾಗಿತ್ತು!!!!



........



ಬಳಿಕ ಹಲಸಿನ ಕುರಿತು ಸೇರಿದವರಿಗೆ ಸಣ್ಣ ಪುಟ್ಟ ಆಟಗಳನ್ನು ಅಚಿನ್ ನೇತೃತ್ವದಲ್ಲ ನಡೆಸಲಾಯಿತು. ತೋಟದಲ್ಲಿ ಅಡಗಿಸಿಟ್ಟ ಹಲಸಿನ ಬೀಜ ಹುಡುಕಿ ತರುವುದು, ಗ್ರೀಸ್ ಹಚ್ಚಿದ ಹಲಸಿನಮರಕ್ಕೆ ಹತ್ತುವ ಸ್ಪರ್ಧೆ, ಹಲಸಿನ ಹೋಳಿಗೆ ತಿನ್ನುವ ಸ್ಪರ್ಧೆ, ಹಲಸಿನ ಕುರಿತ ಗಾದೆಗಳನ್ನು ರಚಿಸುವ ಸ್ಪರ್ಧೆ, ಹಲಸಿನ ಬಗ್ಗೆ ಕವನ ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಗೆದ್ದವರಿಗೆ ಹಲಸಿನ ಮೇಣದ ಚ್ಯೂಯಿಂಗ್ ಗಂ ಬಹುಮಾನವಾಗಿ ಅಚಿನ್ ವತಿಯಿಂದ ನೀಡಲಾಯಿತು....



ಹೊಟ್ಟೆ ತುಂಬ ತಿಂದ ಬಳಿಕ ಮರ ಹತ್ತುವ ಸ್ಪರ್ಧೆಯಲ್ಲಿ ಪಾಲ್ಗೊಂಡ ಜಗನ್ನಾಥ ಮರ ಏರಿ ಇಳಿಯಲಾಗದೆ ಕಿರುಚಿದಾಗ ಏಣಿ ಇರಿಸಿ ಆತನನ್ನು ಇಳಿಸಿ ಪ್ರೋತ್ಸಾಕ ಬಹುಮಾನ ನೀಡಿ ಮನೆಗೆ ಕಳಹಿಸಲಾಯಿತು...!!!!

ಹಲಸಿನ ಬಗ್ಗೆ ಗಾದೆಗಳನ್ನು ರಚಿಸುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಫಮ್ಮರ್ ಉರೂಕ್ ರಚಿಸಿದ ಕೆಲವು ಸ್ಯಾಂಪಲ್ ಗಳು ಹೀಗಿದ್ದವು...



1)      ಪೆಲತ್ತರಿ ಚಿಕ್ಕದಾದರೂ ಹಲಸು ದೊಡ್ಡದು!

2)      ಕಣ್ಣಾರೆ ಕಂಡರೂ ತಿಂದು ನೋಡು

3)      ಕೊಳೆತ ಹಲಸು ಕಪ್ಪಾದರೂ, ಕೊಳೆಯದ ಹಲಸು ಹಳದಿಯೇ

4)      ಕೂತು ಹಲಸು ತಿನ್ನುವವನಿಗೆ ಒಂದು ಚಮಚ ಎಣ್ಣೆ ಸಾಲದು

5)    ಹಲಸು ತಿಂದವರು ಕೈ ತೊಳೆಯಲೇ ಬೇಕು!



.....

ಕವನ ಬರೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಭಗೀರಥ ಅವರ ಕವನ ಹೀಗಿತ್ತು:


ಹಲಸು-ಸೊಗಸು

....

ಅಂದು ನಾನು ಕಂಡ ಹಲಸು

ಹುಲುಸಾಗಿ,

ಸೊಗಸಾಗಿ ಬೆಳೆದು ನಿಂತಾಗ

ಬಳಿ ಬಂದು,

ಕೊಯ್ದು ಬಿಡಿಸಿ ತಿಂದಾಗ

ಮನತುಂಬಿ

ಮನೆಗೆ ತಂದು

ಅತಿಯಾಗಿ ತಿಂದಾಗ

ಹೊಟ್ಟೆಯೊಳಗೇನೋ ಗುಡುಗುಡು!



………………..



ಹೋಳಿಗೆ ತಿನ್ನುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿನುತಾ ಶೆಟ್ಟಿಗೆ ಸ್ವತಃ ಹೋಳಿಗೆ ತಯಾರಿಕೆಯಲ್ಲಿ ಪರಿಣತನಾದ ನವನವೀನ ಶೆಟ್ಟಿ ವತಿಯಿಂದ ಹೋಳಿಗೆಗಳ ಪ್ಯಾಕೆಟ್ ಪ್ರೋತ್ಸಾಹಕ ಬಹುಮಾನವಾಗಿ ನೀಡಲಾಯಿತು...



................

ಸಭೆ, ಗಮ್ಮತ್ತು ಮುಗಿದಾಗ ಕತ್ತಲಾಗಿತ್ತು... ಎಲ್ಲ ವ್ಯವಸ್ಥೆ ಮುಗಿದ ಬಳಿಕ ಅಚಿನ್ ಮತ್ತು ಗುಣಶೀಲ ಕಾಲು ದಾರಿಯಲ್ಲಿ ಮನೆಯತ್ತ ಹೊರಟರು... ರಾತ್ರಿ 7 ಆಗಿತ್ತು.. ಬದಿಯ ಹಲಸಿನ ಮರದ ಮರೆಯಿಂದ ಮುಖಕ್ಕೆ ಮುಸುಕು ಹಾಕಿದ ಓರ್ವ ವ್ಯಕ್ತಿ ಎದುರು ಬಂದು ನಿಂತ...

ಗಾಬರಿಯಿಂದ ಇಬ್ಬರೂ ಹಿಂದೆ ತಿರುಗಿದಾಗ ಕೈಯ್ಯಲ್ಲಿ ಸೈಕಲ್ ಚೈನ್ ಹಾಗೂ ದೊಣ್ಣೆ ಹಿಡಿದ ಇನ್ನಿಬ್ಬರು ದೊಡ್ಡ ಹಲಸಿನ ಮರದಿಂದ ಹಾರಿ ಇವರನ್ನೇ ನೋಡತೊಡಗಿದರು. ಸಿನಿಮಾದಲ್ಲಿ ಮಾತ್ರ ಫೈಟಿಂಗ್ ನೋಡಿ ಗೊತ್ತಿದ್ದ ಇಬ್ಬರದ್ದೂ ಕಾಲೂ ನಡುಗತೊಡಗಿತು...


ಪಕ್ಕದ ಮರದಿಂದ ಗೂಬೆಯೊಂದು ವಿಕಾರವಾಗಿ ಕೂಗುತ್ತಿತ್ತು... ಎದುರಿನ ಮುಸುಕುಧಾರಿ ವ್ಯಕ್ತಿ ಹೆಜ್ಜೆ ಮೇಲೆ ಹೆಜ್ಜೆ ಇಡುತ್ತಾ ಹತ್ತಿರ ಬರತೊಡಗಿದ....

 📝📝📝📝📝📝📝


(ಸಶೇಷ... 12ನೇ ಕಂತಿನಲ್ಲಿ ಕಥೆ ಮುಕ್ತಾಯ)


🔜🔜🔜🔜🔜🔜🔜

-ಕೆಎಂ.

🙏🙏🙏🙏

(ಸ್ಪಷ್ಟನೆ: ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶ ಕಾಲ್ಪನಿಕ. ವಾಸ್ತವಕ್ಕೆ ಹೋಲಿಕೆ ಇದ್ದರೆ ಅದು ಕಾಕತಾಳೀಯ ಮಾತ್ರ. ಲಘು ಧಾಟಿಯಲ್ಲಿ ಪ್ರಸ್ತುತ ಪಡಿಸಿದ ವಿಚಾರಗಳೆಲ್ಲ ತಮಾಷೆಗೋಸ್ಕರ ಅಷ್ಟೆ.)

Post a Comment

0 Comments