Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -12


ಜಗನ್ನಾಥನ ಕಿವಿಯಲ್ಲಿ ಅನುರಣಿಸಿದ ಧ್ವನಿ ಏನು 





🍐🍐🍐

ಇಲ್ಲಿ ವರೆಗಿನ ಕಥೆ: ಪ್ರಗತಿಪರ ಹಲಸು ಬೆಳೆಗಾರ ಉಳ್ಳಾಲಗುತ್ತು ನಾರಾಯಣರ ಹಲಸು ಬೆಳೆಯ ಸಾಧನೆ ಕುರಿತು ಅಧ್ಯಯನ ಮಾಡಲು ಬಂದ ಅಚಿನ್ ಸಲ್ಮೇಡಾ, ಅಲ್ಲೇ ಸಮೀಪದ ನಾರಾಯಣರ ಗೆಳೆಯ ಗುಣಶೀಲ ಕುಮಾರನ ಮನೆಯಲ್ಲಿ ವಾಸ್ತವ್ಯ ಹೂಡಿರುತ್ತಾನೆ. ತನ್ನ ಅಧ್ಯಯನ ಪ್ರಬಂಧ ಪೂರ್ತಿಯಾದ ಹಿನ್ನೆಲೆಯಲ್ಲಿ ನಾರಾಯಣರಿಗೆ ಗುಣಶೀಲನ ಮನೆಯಲ್ಲಿ ಒತ್ತಾಯಪೂರ್ವಕ ಸನ್ಮಾನ ಸಮಾರಂಭ ಏರ್ಪಡಿಸಿರುತ್ತಾನೆ. ಸನ್ಮಾನ ಸಮಾರಂಭ ಯಶಸ್ವಿಯಾಗಿ ನಡೆಯುತ್ತದೆ. ಸಮಾರಂಭದಲ್ಲಿ, ತಾನು ನಾರಾಯಣರ ಅನುಪಸ್ಥಿತಿಯಲ್ಲಿ ಹಲಸು ತಿಂದದ್ದನ್ನು ಅಚಿನ್ ಬಹಿರಂಗವಾಗಿ ಒಪ್ಪುತ್ತಾನೆ, ಅದನ್ನು ಉದಾರ ಮನಸ್ಸಿನಿಂದ ನಾರಾಯಣರು ಮನ್ನಿಸುತ್ತಾರೆ. ಎಲ್ಲರೂ ಹಲಸಿನ ಖಾದ್ಯಗಳ ಊಟ ಸವಿಯುತ್ತಾರೆ. ಸಮಾರಂಭ ಮುಗಿಸಿ ಕಾಲ್ನಡಿಗೆಯಲ್ಲಿ ಮುಸ್ಸಂಜೆ ಮನೆಗೆ ಮರಳುತ್ತಿದ್ದ ಗುಣಶೀಲ ಹಾಗೂ ಅಚಿನ್ ಅನ್ನು ಮೂವರು ಮುಸುಕುಧಾರಿ ಅಪರಿಚಿತರು ತಡೆಯುತ್ತಾರೆ. ಆಗ ಹೊಡೆದಾಟದ ವೇಳೆ ದಾಳಿ ನಡೆಸಿದವರು ನಾರಾಯಣರ ಮೂವರು ಮಕ್ಕಳು ಎಂಬುದು ತಿಳಿಯುತ್ತದೆ. ಹೊಡೆದಾಟದಲ್ಲಿ ಅಚಿನ್ ಮತ್ತು ಗುಣಶೀಲ ಗಾಯಗೊಂಡಿರುತ್ತಾರೆ. ಇನ್ನೇನು ಅವರನ್ನು ಕೊಲ್ಲಬೇಕು ಅನ್ನುವಷ್ಟರಲ್ಲಿ ನಾರಾಯಣರು ಕೋವಿಯೊಂದಿಗೆ ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಕೃತ್ಯವನ್ನು ತಡೆಯುತ್ತಾರೆ. ತನ್ನ ಮಕ್ಕಳ ಕೃತ್ಯದಿಂದ ತೀವ್ರವಾಗಿ ನೊಂದ ಅವರು ನೇರ ಸೋಮೇಶ್ವರ ರುದ್ರಪಾದೆಗೆ ಹೋಗಿ ಅಲ್ಲಿಂದ ಸಮುದ್ರಕ್ಕೆ ಹಾರುತ್ತಾರೆ, ವಿಷಯ ತಿಳಿದು ಅವರನ್ನು ಹಿಂಬಾಲಿಸಿದ ಜಗನ್ನಾಥ ತಾನೂ ಸಮುದ್ರಕ್ಕೆ ಹಾರುತ್ತಾನೆ, ಆಗ ಅದೃಶ್ಯ ಶಕ್ತಿಯೊಂದು ಆತನನ್ನು ಕೆಳಗೆ ಎಳೆಯುತ್ತದೆ...) 

🧩🧩🧩🧩


(ಮುಂದುವರಿದು, ಕೊನೆಯ ಕಂತು....) 


🏊‍♀️🏊‍♀️🏊‍♀️🏊‍♀️🏊‍♀️🏊‍♀️🏊‍♀️🏊‍♀️

ನೀರಿನಾಳಕ್ಕೆ ರಭಸವಾಗಿ ಸೆಳೆಯಲ್ಪಟ್ಟ ಜಗನ್ನಾಥನಿಗೆ ತಾನೀಗ ಸತ್ತೇ ಹೋಗುತ್ತೇನೆ ಅಂತ ಅನ್ನಿಸತೊಡಗಿತು. ಕೊನೆಯ ಪ್ರಯತ್ನವಾಗಿ ಜೋರಾಗಿ...

"ಅಮ್ಮಾ... ಕಾಪಾಡಿ..." ಅಂತ ಕೂಗಿಕೊಂಡ....

ಅಷ್ಟೊತ್ತಿಗೆ ಧಡಕ್ಕನೆ ಎಚ್ಚರವಾಯಿತು ಜಗ್ಗನಿಗೆ ... ಮೈತುಂಬ ಬೆವರು...ಸುತ್ತ ನೋಡಿದರೆ ತಾನು ಮಂಚದ ಕೆಳಗಿದ್ದೇನೆ, ಮೇಲೆ ಫ್ಯಾನ್ ತಿರುಗುತ್ತಿದೆ... ನೀರು ಇಲ್ಲ, ಸಮುದ್ರವೂ ಇಲ್ಲ, ಪಕ್ಕದಲ್ಲಿ ನಾರಾಯಣರ ದೇಹವೂ ಇಲ್ಲ...!!!!!


ಏನೆಂದೇ ಅರ್ಥವಾಗಲಿಲ್ಲ, ಮೈ ಇಡೀ ನಡುಗುತ್ತಿತ್ತು... ಇಲ್ಲೇ ಪಕ್ಕದಲ್ಲೇ ನಾರಾಯಣರ ದೇಹ ತೇಲಿ ಹೋದಂತೆ ಭಾಸವಾಗುತ್ತಿತ್ತು... ಅಂದರೆ... ಅಂದರೆ... ತಾನು ಇಷ್ಟೊತ್ತು ಕಂಡದ್ದು ಕನಸಾ...!!!

ನಂಬಲೇ ಆಗಲಿಲ್ಲ ಜಗ್ಗನಿಗೆ. ಗಡಿಯಾರ ನೋಡಿದ, ಮಧ್ಯರಾತ್ರಿ 12 ಗಂಟೆ...

ಕಣ್ಣೆದುರೇ ಸಿನಿಮಾ ಥರ ಕಂಡ ಇಷ್ಟೆಲ್ಲ ದೃಶ್ಯಗಳು, ನಾರಾಯಣರ ತೋಟ, ಅವರ ಹಳೆ ಗುತ್ತಿನ ಮನೆ, ಮಕ್ಕಳು, ಹುಲಿ ವೇಷ ಕುಣಿತ, ಅಧ್ಯಯನ ವಿದ್ಯಾರ್ಥಿ ಅಚಿನ್, ಸ್ನೇಹಿತ ಗುಣಶೀಲ, ಡ್ರೈವರ್ ಸಿಂಪತಿ ಆಳ್ವ... ಎಲ್ಲ ಪಾತ್ರಗಳು ಸುಳ್ಳ ಹಾಗಾದ್ರೆ. ಅವರ ಮನಸ್ಸು ಒಪ್ಪಲು ತಯಾರಿರಲಿಲ್ಲ...


ಸಮಯ, ಸಂದರ್ಭ ನೋಡದೆ, ಆ ಮಧ್ಯರಾತ್ರಿ ಕೂಡಲೇ ಗೆಳೆಯ ಸಚಿನ್ ಗೆ ಕರೆ ಮಾಡಿದ... 

"ದೇಶದಲ್ಲಿ ಅನ್ ಲಾಕ್ ಪ್ರಕ್ರಿಯೆ ಆರಂಭವಾಗಿದ್ದು... ಆಗಾಗ ಕೈ ತೊಳೆಯಿರಿ.. ಕೊರೋನಾದಿಂದ ಪಾರಾಗಲು ಮನೆಯಲ್ಲೇ ತಯಾರಿಸಿದ ಮಾಸ್ಕ ಧರಿಸಿ..." ಎರಡೆರಡು ಬಾರಿ ಸಂದೇಶ ಬಂದ ಬಳಿಕ ಕಾಲ್ ಕಟ್ ಆಯ್ತು. ಪುನಃ ಕರೆ ಮಾಡಿದಾಗ ಸಂದೇಶ ಬಂತು..

"ನೀವು ಕರೆ ಮಾಡಿದ ಚಂದಾದಾರರು ಕೇಕ್ ತರಲು ಹೋಗಿದ್ದಾರೆ, ದಯವಿಟ್ಟು ಅವರಿಗೆ ಕೇಕ್ ಸಿಕ್ಕಿದ ಬಳಿಕ ಪುನಹ ಪ್ರಯತ್ನಿಸಿ...!!!" ಕೋಪದಿಂದ ಫೋನ್ ಕಟ್ ಮಾಡಿದ ಜಗ್ಗ...

ಕಷ್ಟ ಕಾಲದಲ್ಲಿ ಸುಶೀಲ್ ಸಿಕ್ಕಿಯೇ ಸಿಕ್ಕುತ್ತಾನೆ ಅಂದ್ಕೊಂಡು ಸಹಪಾಠಿ ಸುಶೀಲ್ ಕುಮಾರ್ ಗೆ ಕರೆ ಮಾಡಿದ.

ಮೊದಲ ಪ್ರಯತ್ನಕ್ಕೇ ಕರೆ ಸ್ವೀಕರಿಸಿದ ಸುಶೀಲ್, "ಹೇಳಿ ಜಗ್ಗ, ಹೇಗಿದ್ದೀರಿ,? ನಾನ್ ಕಾನ್ ಕಾಲ್ನಲ್ಲಿ ಬಿಝಿ ಇದೆ, ಕ್ಲೈಂಟ್ಸ್ ಜೊತೆ ಬಿಝಿ ಇದ್ದೆ.. ಏನು ಇಷ್ಟೊತ್ತಲ್ಲಿ ಕರೆ ಮಾಡಿದ್ರಿ....?"

ಏದುಸಿರು ಬಿಡ್ತಾ ಜಗ್ಗ ಕೇಳಿದ,

"ಸುಶೀಲ್....ಸುಶೀಲ್, ನೀವು ಆರಾಮ ಇದ್ದೀರಿ ತಾನೆ? ನಿಮಗೇನೂ ಆಗಿಲ್ಲ ತಾನೆ? ನಾರಾಯಣ ಮಕ್ಕಳು ನಿಮ್ಮ ಮೇಲೆ ಆಕ್ರಮಣ ಮಾಡಿದಾಗ ನನಗೆ ಭಯ ಆಗಿತ್ತು... ಈಗ ಹೇಗಿದ್ದೀರಿ...?!

ಅವನ ಮಾತು ತುಂಡರಿಸಿ ಸುಶೀಲ್ ಜೋರಾಗಿ ನಕ್ಕು ಹೇಳಿದ.

"ನೀವು ಏನು ಹೇಳ್ತಾ ಇದ್ದೀರಿ ಗೋತ್ತಾಗ್ತಿಲ್ಲ ಜಗ್ಗ! ನಾನು ಲಾಕ್ ಡೌನ್ ಆದ ಬಳಿಕ ನಾಲ್ಕು ತಿಂಗಳಿನಿಂದ ಎಲ್ಲಿಗೂ ಹೋಗಿಲ್ಲ, ಇನ್ಯಾರು ಅದು ನನ್ನ ಮೇಲೆ ಆಕ್ರಮಣ ಮಾಡುವುದು? ನಾರಾಯಣ ಯಾರು? ನಿಮ್ಮ ಸೆಕ್ಷನಿನವ ಅಲ್ವ? ಕಾಸರಗೋಡಿನಿಂದ ಬರ್ತಾ ಇದ್ದ, ಅವನನ್ನು ನಾನು ನೋಡದೆ ಭರ್ತಿ 20 ವರ್ಷ ಆಯ್ತು... ನಿನಗೇನಾಗಿದೆ...? ತೀರ್ಥ ಗೀರ್ಥ ಏನು ತಗೊಂಡಿಲ್ಲ ತಾನೆ....? ಕಮಾನ್ ಯಾರ್, ಜೋಕ್ ಮಾಡ್ಬೇಡಿ... 

ಜಗ್ಗನಿಗೆ ಸ್ವಲ್ಪ ಸ್ವಲ್ಪ ಇಹಲೋಕಕ್ಕೆ ಬಂದ ಹಾಗಾಯಿತು... 

"ಹೆಹೆಹೆ ಏನಿಲ್ಲ, ಏನೋ ಕನಸು ಬಿದ್ದಿರ್ಬೇಕು... ಸಾರಿ ಡಿಸ್ಟರ್ಬ್ ಮಾಡಿದೆ ಅಂತ ಕಾಣ್ತದೆ...." ಫೋನ್ ಇಟ್ಟು ಬೆವರೊರೆಸಿಕೊಂಡ.... 

ಪುನಃ ಮಲಗಿದವನಿಗೆ ನಿದ್ರೆ ಆವರಿಸಲೇ  ಇಲ್ಲ. ತಾನು ನಾರಾಯಣರ ಬಗ್ಗೆ ಕಂಡದ್ದೆಲ್ಲ ಸಿನಿಮಾ ದೃಶ್ಯಗಳ ಥರ ಕಣ್ಣಿನೆದುರು ಹಾದು ಹೋಗ್ತಾ ಇತ್ತು.... ಆ ಹಲಸಿನ ಸಾಲು ಸಾಲು ಮರಗಳು, ನೆರಳು, ಹಳೆ ಮನೆ, ನಾರಾಯಣರ ಭವ್ಯ ಕಾಯ, ಅವರ ಅಂಬಾಸಿಡರ್ ಕಾರು, ಅವರು ತನ್ನನ್ನು ವ್ಯಾಯಾಮ ಶಾಲೆಯಲ್ಲಿ ಕರೆದು ಹುಲಿ ವೇಷ ಕುಣಿಯುವ ಬಗ್ಗೆ ತರಬೇತಿ ನೀಡಿದ್ದು, ಅವರ ಕಾರಿನಲ್ಲಿ ಪ್ರವಾಸ ಹೋಗಿದ್ದು, ಅಚಿನ್ ಹಲಸಿನ ಹಣ್ಣು ತಿಂದಾಗ ಅವರಿಗೆ ಸಿಟ್ಟು ಬಂದಿದ್ದು, ಭಗೀರಥ ಚಾಲೆಂಜ್  ಹಾಕಿದ್ದು, ವಿದ್ಯಾರಶ್ಮಿಯನ್ನು ಕೊಲ್ಲಲು ನಾರಾಯಣರು ಹೋದದ್ದು.... ಕೊನೆಗೆ ನಡೆದ ನಾರಾಯಣರ ಸನ್ಮಾನ ಸಮಾರಂಭ, ಅಲ್ಲಿ ದಯಕರ ನಾಯಕ್ ವಿಚಿತ್ರ ಭಾಷಣ ಮಾಡಿದ್ದು... ತಾನು ಹಲಸಿನ ಹೋಳಿಗೆ ತಿಂದದ್ದು.... ಎಲ್ಲ ಕನಸ, ಎಲ್ಲ ಭ್ರಮೆಯ, ಎಲ್ಲ ಸುಳ್ಳ ಹಾಗಾದ್ರೆ... ಜಗ್ಗ ಯಾನೆ ಜಗನ್ನಾಥನ ಮಂಡೆ ಶರಬತ್ತು ಆಗುತ್ತಾ ಹೋಯಿತು... ಯಾವುದು ನಿಜ, ಯಾವುದು ಸುಳ್ಳು ಅಂತ ಅಂದಾಜಾಗಲಿಲ್ಲ.

ತಾನು ಮಾತ್ರ ಕೈರಂಗಳದ ಮನೆಯೊಳಗೆ ಬೆಡ್ ರೂಮಿನಲ್ಲಿ ಇದ್ದೇನೆ, ಸಮುದ್ರದಲ್ಲಿ ಇಲ್ಲ ಅಂತ ಅರಿವಾಗಲು ಅರ್ಧ ಗಂಟೆ ಬೇಕಾಯಿತು... ನೀರು ಕುಡಿದ ಬಳಿಕ ನಿಧಾನಕ್ಕೆ ನಿದ್ರೆ ಆವರಿಸಿತು... .......

ಬೆಳಗ್ಗೆದ್ದು ಜಗ್ಗ ಮಾಡಿದ ಮೊದಲ ಕೆಲಸ ತನ್ನ ಕಸಿನಲ್ಲಿ ಕಂಡ ಪಾತ್ರಗಳಿಗೆಲ್ಲ (ತನ್ನಕ್ಲಾಸ್ಮೇಟುಗಳಿಗೆ) ಸಾಲಾಗಿ ಕರೆ ಮಾಡುತ್ತಾ ಬಂದ...

ಸಚಿನ್ಅ ಲ್ಮೇಡಾನಿಗೆ ಕರೆ ಮಾಡಿ ಕೇಳಿದ, "ನಿನ್ನ ಅಧ್ಯಯನ ಮುಗೀತಾ ಮಾರಾಯ?, ಪಿಎಚ್ಡಿ ಸಿಕ್ತಾ ಹೇಗೆ...?* ಸಚಿನ್ ಹೇಳಿದ, *"ಮರ್ಲು ಉಂಡ ಮಾರಾಯ, ಲಾಕ್ಡೌನ್ ಆದ್, ಬಿಸಿನೆಸ್ ಡಲ್ ಪಂಡ್ದ್ ಬೆಚ್ಚೊಡುಲ್ಲೆ, ಬಿ.ಕಾಂ. ಮಲ್ತ್ ದ್ ಎಂಚಿನ ಪಿಎಚ್ಡಿ ಮಲ್ಪುನು.... ಮಕ್ಕರ್ ಮಲ್ಪರ ದಾನೆ...?*

....

ನಂತರ ಜ್ಯೋತಿಲಕ್ಷ್ಮಿಗೆ....

"ನಿನ್ನ ಸ್ಕೂಟಿಯಲ್ಲಿ ನೀನು ಹಲಸಿನಕಾಯಿ ಸಪ್ಲೈ ಮಾಡ್ತಾ ಇದ್ದಿಯ ಯಾವಾಗಲಾದ್ರು....?"

 ಜ್ಯೋತಿಗೆ ಸಿಟ್ಟು ಬಂತು... "ಎಂತವ ನಿಂಗೆ ಮರ್ಲ....? ನನ್ನ ಸ್ಕೂಟಿ ನಿನಗೆ ಪಿಕಪ್ ಥರ ಕಾಣ್ತಿದೆಯ?. ಇಡಾ ಫೋನ್ ಹುಚ್ಚರ ಹಾಗೆ ಮಾಡ್ಬೇಡವ ಆಯ್ತ... ನನ್ನ ಸ್ಕೂಟಿಗೆ ಇನ್ಸಲ್ಟ್ ಮಾಡ್ತಿಯಾ...?" 

ದುಷ್ಟ ಮೋಹನನಿಗೆ ಮಾಡಿದ...

"ನೀವೊಮ್ಮೆ ನಿಮ್ಮ ಪೇಪರಿನಲ್ಲಿ ನಾರಾಯಣರ ಹಲಸಿನ ಕಾಯಿ ಬೋರ್ಡಿನ ಬಗ್ಗೆ ಬರೆದಿದ್ದಿರ? ನಿಮ್ಮನ್ನು ಅವರು ಕೊಲ್ಲಲು ಬಂದಿದ್ರಾ, ಪ್ಲೀಸ್ ಹೇಳಿ.... ?"


ಉತ್ತರ ಬಂತು.... "ನಿನಗೆಂತ ಹುಚ್ಚು ಹಿಡಿದಿದ್ಯಾ...? ಸೋಶಿಯಲ್  ಮೀಡಿಯಾದಲ್ಲಿ ದಿನಕ್ಕೆ 150 ವಿಚಾರ ಟ್ರೋಲ್ ಆಗ್ತಾ ಇರ್ತದೆ, ಅದನ್ನೆಲ್ಲ ಬರೀತಾ ಹೋದ್ರೆ, ಪೇಪರಿನಲ್ಲಿ ಜಾಗ ಸಾಕಾಗ್ಲಿಕಿಲ್ಲ, ನೀನು ಹೇಳಿದ ಹಲಸಿನ ಹಣ್ಣಿನ ಮರಕ್ಕೆ ಬೋರ್ಡ್ ಹಾಕಿದ ಪೋಸ್ಟು ನೋಡಿದ್ದೇನೆ, ವೈರಲ್ ಆಗಿತ್ತು, ನೋಡಿ ನೆಗಾಡಿದ್ದೇನೆ ಹೊರತು ಅದನ್ನು ಪೇಪರಿನಲ್ಲಿ ಬರಿಲಿಕ್ಕೆಂತ ಉಂಟು, ಎಂತ, ನನ್ನ ಕೆಲಸ ತೆಗೆಸುವ ಪ್ಲಾನ್ ಹೇಗೆ...?" 

ನಂತರದ ಸರದಿ ಭೀಮಾವತಿಯದ್ದು... "ಎಂಚ ಉಲ್ಲರ್,? ಈರ್ ಪೆಲಕ್ಕಾಯಿದ  ಅಟ್ಟಿಲ್ ಮಲ್ಪೆರೆ ಗೊತ್ತುಂಡ....?

 ಅವಳು ಸಿಟ್ಟಲ್ಲಿ ಉತ್ತರವೇ ಕೊಡಲಿಲ್ಲ, ಗುಡ್ ಮಾರ್ನಿಂಗ್  ಅಂತ ಹೇಳಿ ಫೋನ್ ಕಟ್ ಮಾಡಿದ್ಳು.... !!!!

ನಂತರ ತನ್ನ ಕ್ಲಾಸ್ ಮೇಟ್ಸ್ ಎಲ್ಲರಿಗೂ ಕರೆ  ಮಾಡಿದ್ರೂ ಇದೇ ಥರ ಉತ್ತರ ಬಂತು...

"ನಿನಗೇನು ಹುಚ್ಚ? ಅಂತಲೇ ಕೇಳತೊಡಗಿದರು...

ಜಗ್ಗನಿಗೆ  ಖಚಿತವಾಯಿತು.. ನಾರಾಯಣರ ಬಗ್ಗೆ ತಾನು ಕಂಡದ್ದೆಲ್ಲ ಕನಸು ಅಂತ....!!!

.......

ಆ ದಿವಸ ಕೆಲಸಕ್ಕೆ ಹೋಗಲಿಲ್ಲ ಜಗ್ಗ... ಆತನ ಮನಸ್ಸಿನಲ್ಲಿ ನಾರಾಯಣರ ಕಥೆಯೇ ಕೊರೆಯುತ್ತಾ ಇತ್ತು, ನೇರ ಎದ್ದು ಬೈಕ್ನಲ್ಲಿ ಉಳ್ಳಾಲಕ್ಕೆ ಹೋದ... ಆತನ ಮನಸ್ಸಿನಲ್ಲಿ ಒಂದು ಸಂಶಯ, ತನಗೇನಾದರೂ  ಪೂರ್ವಜನ್ಮದ ವಾಸನೆ ಶುರುವಾಗಿರಬಹುದೇ ಅಂತ... ಕನಸಿನಲ್ಲಿ ಕಂಡದ್ದು ಸಾಧಾರಣ ಮುಕ್ಕಾಲು ಭಾಗ   ಬೆಳಗ್ಗೆ ಏಳುವಾಗ ಮರೆತು ಹೋಗಿರುತ್ತದೆ, ಆದರೆ, ತನಗೆ ಎಲ್ಲವೂ
ನೆನಪಿದೆ ಸ್ಪಷ್ಟವಾಗಿ... ಅಲ್ಲಿನ ಪಾತ್ರಗಳು, ಸಂಭಾಷಣೆಗಳು, ದೃಶ್ಯಗಳು, ಕೆಂಪು, ಹಳದಿ ಬಣ್ಣದ
ಹಲಸಿನ ಹಣ್ಣುಗಳು ಎಲ್ಲವೂ ನೆನಪಿದೆ... ಇದು ಹೇಗೆ ಸಾಧ್ಯ ಅಂತ ಆಶ್ಚರ್ಯ ಆಯ್ತು... ಅಥವಾ ತನ್ನ  ಕ್ಲಾಸ್ ಮೇಟುಗಳು ಹೇಳಿದ ಹಾಗೆ ತನಗೆ ಹುಚ್ಚು ಶುರುವಾಗಿರಬಹುದಾ ಅಂತ ಲೈಟಾಗಿ ಸಂಶಯ  ಆರಂಭವಾಯಿತು.... ಸಂಶಯ ಪರಿಹಾರಕ್ಕೆ ಉಳ್ಳಾಲಕ್ಕೆ ಹೋದ.... 


ಅಲ್ಲಿ ಒಬ್ಬರು ಹಿರಿಯರತ್ರ  ಹೋಗಿ ಕೇಳಿದ, "ಅಣ್ಣ ಮೂಲು ಪೆಲಕ್ಕಾಯಿದ ಮಲ್ಲ ಎಸ್ಟೇಟ್ ಉಂಡತ್ತೆ ಅವು ಓಲು...? ಅಂತ.

ಕನ್ನಡಕವನ್ನು ಮೇಲೆ ಮಾಡಿದ ಅಜ್ಜ ಜಗ್ಗನನ್ನು ವಿಚಿತ್ರವಾಗಿ ಆಪಾದಮಸ್ತಕ ನೋಡಿ ಕೇಳಿದರು. "ಈರ್  ಒಲ್ತ್ ಬತ್ತರಣ್ಣ?" ಅಂತ...

"ಯಾನ್ ಮೂಲು ಮುಡಿಪು ಕೈರಂಗೊಳ್ಡ್ ಬತ್ತಿನ... ಪೆಲಕ್ಕಾಯಿದ ತೋಟ ಮಿನಿ ಉಂಡೆ ಮೂಲು...?"* ಪುನಃ ಕೇಳಿದ... "ಪೆಲಕ್ಕಾಯಿದ ತೋಟ ಬುಡಿ, ಮರಕ್ಕುಲೆ ಭಾರಿ ವಿರಳ ಮೂಲು, ಗೇರು ಸಂಶೋಧನಾ  ಕೇಂದ್ರ ಉಂಡು, ಗೋಂಕುದಯೆ, ಗೋಂಕು ಗೋಂಕು, ಬೋಡ ತೂಪರ...?"*

ಅಜ್ಜ ಹೇಳುತ್ತಲೇ ಇದ್ದರು.... ನಿರಾಸೆಯಿಂದ ಬೈಕ್  ಸ್ಟಾರ್ಟ್ ಮಾಡಿ ಸೀದಾ ಸುಶೀಲನ ಮನೆಗೆ ಹೋದ ಜಗ್ಗ....

.......

ಸುಶೀಲ್ ಆಗಷ್ಟೇ ಎದ್ದು ತಮ್ಮ ಕ್ಲಾಸ್ ಮೇಟ್  ಗ್ರೂಪಿನಲ್ಲಿ ಬಂದ ಮೆಸೇಜುಗಳಿಗೆಲ್ಲ ಉತ್ತರಿಸಿ ಚಹಾ ಕುಡಿಯುತ್ತಾ ಕೂತಿದ್ದ. ಅಪರೂಪಕ್ಕೆ ಬಂದ  ಜಗ್ಗನನ್ನು ಕಂಡು ಖುಷಿಯಾಗಿ ಚಹಾ ಕೊಟ್ಟು ಮಾತನಾಡಿಸಿದ... *"ಎಂತ ಮಾರಾಯ ನೀವು  ಮಧ್ಯರಾತ್ರಿ ಫೋನ್ ಮಾಡಿ ನನ್ನನ್ನು ಹೆದರಿಸಿದ್ರಿ... ಆಕ್ರಮಣ ಅಂತ ಹೇಳಿದ್ರೀ, ಏನೇನೋ ಹೇಳಿದ್ರಪ್ಪ... ನಂಗೆ ಗಾಬರಿ ಆಗೋಯ್ತು... ಎಂತ ಸಂಗತಿ ಅಂತ... ಅಕ್ಚುವಲಿ ನಾನು ಲಾಕ್ ಡೌನ್ ಆದ  ಮೇಲೆ ನಾಲ್ಕು ತಿಂಗಳಿನಿಂದ ಎಲ್ಲಿಗೂ ಹೋಗಿಲ್ಲ...."*

ಸುಶೀಲ್ ನಿಗೆ  ಎಲ್ಲ ವಿಚಾರ ವಿವರಿಸಿ ಹೇಳಿದ ಜಗ್ಗ... ತನ್ನ ಕನಸು, ತಾನು ಅದರಲ್ಲಿ ಕಂಡ ಎಲ್ಲ ಪಾತ್ರಧಾರಿಗಳು... ಎಲ್ಲವನ್ನೂ ವಿವರಿಸಿ ಹೇಳಿದ....

ಎಲ್ಲವನ್ನು ತಾಳ್ಮೆಯಿಂದ ಕೇಳಿದ ಸುಶೀಲ್ ಜಗ್ಗನಲ್ಲಿ ಹೇಳಿದ...

"ನೋಡಿ ಜಗ್ಗ, ನನ್ನ ಪ್ರಕಾರ ಏನಾಗಿದೆ ಗೊತ್ತ. ನೀವು ಯಾವುದೋ ವಾಟ್ಸಪ್ ಗ್ರೂಪು ಅಥವಾ ಫೇಸ್ ಬುಕ್ಕಿನಲ್ಲಿ ಈ ಹಲಸಿನ ಹಣ್ಣಿನ ಮರಕ್ಕೆ ಬೋರ್ಡ್ ಅಳವಡಿಸಿದ ಜೋಕ್ ನೋಡಿದ್ದೀರಿ. ಅದು ನಿಮ್ಮ ಮನಸ್ಸನ್ನು ಆಳವಾಗಿ ಹೊಕ್ಕಿದೆ. ಇದೇ ಸಂದರ್ಭ, ನೀವು ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿಗಳ ಗ್ರೂಪಿನಲ್ಲಿ ಯಾವಾಗಲೂ ತಮಾಷೆ ಮಾತನಾಡುತ್ತಾ, ಕಥೆಗಳನ್ನು ಹೇಳುತ್ತಾ ಇರ್ತೀರಲ್ವ. ಆ ಕಾರಣದಿಂದ ನೀವು ಆ ಜೋಕಿನ ಸಂದರ್ಭವನ್ನು ವಿಸ್ತರಿಸಿ, ನಿಮ್ಮದೇ ಆಯಾಮದಲ್ಲಿ ಯೋಚಿಸಿದ್ದೀರಿ.... ದಿನಾ ಗ್ರೂಪಿನಲ್ಲಿ ಚಾಟ್ ಮಾಡುವವರ ಹೆಸರುಗಳೆಲ್ಲ ನಿಮ್ಮ ಮನಸ್ಸಿನಲ್ಲಿ ಅಚ್ಚಾಗಿದ್ದು, ಅವ್ವೇ ಪಾತ್ರಧಾರಿಗಳಾಗಿ ನಿಮ್ಮ ಕನಸಿನಲ್ಲಿ ಕಂಡಿವೆ ಅಷ್ಟೆ... ಕನಸಾದ ಕಾರಣ ಪಾತ್ರಗಳ ಹೆಸಲು ಆಚೀಚೆ ಆಗಿವೆ ಅಷ್ಟೆ...."

"ನಿಮಗೊಂದು ವಿಚಾರ ಗೊತ್ತ? ನಮ್ಮ ಹೊರ ಮನಸ್ಸಿಗಿಂತಲೂ ವಿಚಿತ್ರ ಒಳಮನಸ್ಸು, ಹೊರ ಮನಸ್ಸಿನಿಂದ ಕೆಲವು ವಿಚಾರಗಳು ಒಳಮನಸ್ಸಿಗೆ ಹೋಗಿ ಅವಿತು ಕೂತಿರ್ತವೆ. ಬಹಳಷ್ಟು ಬಾರಿ ಭ್ರಮೆಗಳಾಗಿಯೋ, ಕನಸಿನ ರೂಪದಲ್ಲೋ ಅವೇ ವಿಚಾರಗಳು ಹೊರ ಬರುತ್ತವೆ... ಆ ಮೂಲಕ ಅವು ಸ್ವಲ್ಪ ನಿರಾಳವಾಗುತ್ತವೆ. ನೀವು ಆ ನಾರಾಯಣರ ಬಗ್ಗೆ ತುಂಬ ಯೋಚಿಸಿದ್ದೀರಿ, ಅಥವಾ ಆ ಪಾತ್ರದ ಬಗ್ಗೆ ತುಂಬ ಚಿಂತಿಸಿದ್ದೀರಿ. ನಾನು, ಸಚಿನ್ ಎಲ್ಲ ಗ್ರೂಪಿನಲ್ಲಿ ಯಾವಾಗಲೂ ಮಾತನಾಡ್ತಾ ಇರ್ತೀವಲ್ಲ, ಹಾಗಾಗಿ ನಮ್ಮ ಸಹಚರ್ಯ ನಿಮ್ಮ ಜೊತೆ ಜಾಸ್ತಿ. ಅದಕ್ಕೇ ಸಹಜವಾಗಿ ನಾವೆಲ್ಲ ಪ್ರಧಾನ ಪಾತ್ರಗಳಾಗಿ ಓಡಾಡಿದ್ದೇವೆ... ಡೋಂಟ್ ವರಿ... ನನಗೆ ಗೊತ್ತಿದ್ದ ಹಾಗೆ, ಅಂತಹ ನಾರಾಯಣರಾಗಲೀ, ಅವರ ಮಕ್ಕಳಾಗಲೀ, ಹಲಸಿನ ತೋಟವಾಗಲಿ ಈ ಉಳ್ಳಾಲದಲ್ಲಿ ಇಲ್ಲ. ಇವೆಲ್ಲ ನಿಮ್ಮ ಒಳಮನಸ್ಸಿನ ಕಲ್ಪನೆಯ ಕೂಸು ಅಷ್ಟೇ... ಸುಮ್ನೆ ಟೆನ್ಶನ್ ಮಾಡಬೇಡಿ... ಕೂಲಾಗಿರಿ... ಈಗ ನನ್ನತ್ರ ಎಲ್ಲ ಹೇಳ್ಕೊಂಡ್ರಲ್ಲ. ನಿಮ್ಮ ಮನಸ್ಸು ಹಗುರವಾಗಿರಬಹುದು... ಏನಂತೀರಿ...?"

....

ನಿಜಕ್ಕೂ ಜಗ್ಗ ಈಗ ಸ್ವಲ್ಪ ಹಗುರವಾಗಿದ್ದ.... ತನಗೆ ಅರಿವಿಲ್ಲದೇ ತನ್ನ ಮನಸ್ಸಿನೊಳಗಿದ್ದ ನಾರಾಯಣರು ದೃಶ್ಯರೂಪದಲ್ಲಿ ಕನಸಿನಲ್ಲಿ ಕಾಣಿಸಿದ್ದು ಅವನಿಗೀಗ ಸ್ಪಷ್ಟವಾಯಿತು... ಸುಶೀಲನಿಗೆ ವಿದಾಯ ಹೇಳಿ ಅಲ್ಲಿಂದ ಹೊರಟ...ಆದರೂ ಆತನ ಕುತೂಹಲ ತಣಿದಿರಲಿಲ್ಲ....


ಉಳ್ಳಾಲದ ಬೀದಿ ಬೀದಿಗಳಲ್ಲಿ ಬೈಕ್ ಓಡಿಸಿ ನೋಡಿದ ಎಲ್ಲಿಯಾದರೂ ಹಲಸಿನ ತೋಟ ಕಾಣಿಸ್ತದ ಅಂತ... ಸಿಗಲಿಲ್ಲ. ಕೊನೆಗೆ ಆತ ಬಂದು ತಲುಪಿದ್ದು ಸೋಮೇಶ್ವರ ಬೀಚಿಗೆ...


ಆಗ ಸಂಜೆಯಾಗಿತ್ತು.... ಕೊರೋನಾ ಹೆದರಿಕೆಯಿಂದ ಅಷ್ಟೇನು ಜನ ಸಂಚಾರ ಇರಲಿಲ್ಲ....

ನೇರವಾಗಿ ಹೋಗಿ ಬೃಹತ್ ಬಂಡೆ ರುದ್ರಪಾದೆ ಏರಿ ಕುಳಿತ... ಮೋಡದ ಮರೆಯಲ್ಲಿ ಸೂರ್ಯಾಸ್ತ ಆಗ್ತಾ ಇತ್ತು.... ನಿನ್ನೆ ರಾತ್ರಿ ನಾರಾಯಣರು ಇದೇ ಬಂಡೆಯಿಂದ ಹಾರಿದ್ದಲ್ಲವೇ... ಅಂತ ಅನ್ನಿಸಿತು.. ಬಂಡೆಯ ತುದಿಗೆ ಹೋಗಿ ಇಣುಕಿದಾಗ ಅಲೆಗಳ ರುದ್ರ ನರ್ತನಕ್ಕೆ ಎದೆ ಝಲ್ಲೆಂದಿತು... ಕನಸಿನಲ್ಲೂ ಅಂತಹ ಪ್ರಪಾತಕ್ಕೆ ಹಾರಲು ಸಾಧ್ಯವಿಲ್ಲ ಅಂತ ಅನ್ನಿಸಿತು... ಆದರೆ ಕಥಾ ಹಂತರ ಕೊರೆಯುತ್ತಲೇ ಇತ್ತು...

ಕೊನೆಗೆ ಗಲ್ಫಿನಲ್ಲಿರುವ ಗೆಳೆಯ ಫಾರೂಕಿಗೆ ಮೆಸೇಜ್ ಮಾಡಿದ..

"ಫಾರೂಕ್ ನನಗೊಂದು ವಿಚಿತ್ರವಾದ ಕಥೆ ತಲೆಯಲ್ಲಿ ಕೂತಿದೆ ಮಾರಾಯ. ಅದನ್ನು ಬರೆಯದೆ ಮನಸ್ಸಿಗೆ ಸಮಾಧಾನ ಇಲ್ಲ.... ನಾನದನ್ನು ಬರೆದು ದಿನಾ ನಿನಗೆ ಮೈಲ್ ಮಾಡ್ತೇನೆ. ನೀನು ಅದನ್ನು ಸರಿ ಮಾಡಿ ನಮ್ಮ ವಾಟ್ಸಪ್ ಗ್ರೂಪಿಗೆ ಹಾಕ್ತೀಯ...? ಈ ಕಥೆಯಲ್ಲಿ ನಮ್ಮ ಗ್ರೂಪಿನ ತುಂಬ ಮಂದಿ ಬಂದು ಹೋಗುತ್ತಾರೆ.. ಆ ಕಥೆ ಬರೆದಾಗ ನನಗೆ ಸ್ವಲ್ಪ ನೆಮ್ಮದಿ ಸಿಗಬಹುದು... ನಂತರ ನೀನು ಆ ಕಥೆಯನ್ನು ನಮ್ಮ ಬ್ಲಾಗ್ ಗೆ ಹಾಕು... ಓದುವವರು ಓದಲಿ... ಏನಂತೀಯ...?"

ಅಂತ ಹೇಳಿ ಸೂಕ್ಷ್ಮವಾಗಿ ಕಥೆಯ ವಿಚಾರ ಬರೆದು ಕಳುಹಿಸಿದ...

ಐದು ನಿಮಿಷದಲ್ಲಿ ಫಾರೂಕ್ ಉತ್ತರ ಬಂತು. ಓಕೆ ಡನ್... ಕಥೆಯನ್ನು ಬ್ಲಾಗಿಗೆ ಹಾಕುವ ಜವಾಬ್ದಾರಿ ನನಗೆ ಬಿಡು... ಕಥೆಯ ಹೆಸರು ಜಾಕ್ ಫ್ರೂಟ್ ಡೈರಿ ಅಂತ ಇಡುವ, ಆಗಬಹುದೇ....?

ಸರಿ... ನನಗೊಂದು ಅರ್ಧ ಗಂಟೆ ಟೈಂ ಕೊಡು ನಾನು ಕಥೆಯ ಮೊದಲ ಕಂತನ್ನು ಈಗಲೇ ಬರೆದು ಕಳುಹಿಸುತ್ತೇನೆ....


ಸೋಮೇಶ್ವರ ಬೀಚಿನ ಸುಂದರ ಸೂರ್ಯಾಸ್ತದ ನಡುವೆ ಜಗ್ಗ ತನ್ನ ಮೊಬೈಲಿನಲ್ಲಿ ಜಾಕ್ ಫ್ರೂಟ್ ಡೈರಿಯ ಮೊದಲ ಕಂತು ಬರೆಯಲು ಶುರು ಮಾಡಿದ...

"ಬೆಳಗ್ಗೆ ಕೋಳಿ ಕೂಗಿದ ತಕ್ಷಣ ನಾರಾಯಣರು ತಮ್ಮ ಇಷ್ಟ ದೇವರಿಗೆ ಕೈ ಮುಗಿದರು.. ಬಳಿಕ ಹಟ್ಟಿಗೆ ಹೋಗಿ, ತಾನು ಸಾಕಿದ ಕೋಣಗಳ ಮೈದಡವಿ, ಒಂದಿಷ್ಟು ಹುಲ್ಲು ಹಾಕಿ ಕುಡಿಯಲು ಅಕ್ಕಚ್ಚು ಇರಿಸಿ ಬಂದರು...."


🖋️🖋️🖋️🖋️

ಟೈಪ್ ಮಾಡ್ತಾ.. ಮಾಡ್ತಾ ತನ್ನನ್ನೇ ಮರೆತ ಜಗ್ಗ, ಅರ್ಧ ಗಂಟೆ ಅಂದುಕೊಂಡದ್ದು, ಟೈಪ್ ಮಾಡಲು ಒಂದು ಗಂಟೆ ಬೇಕಾಯ್ತು... ಅಲ್ಲೇ ಕುಳಿತು ಕಥೆಯನ್ನು ಫಾರೂಕಿಗೆ ಮೈಲ್ ಮಾಡಿ ಮೈಮುರಿದು ಎದ್ದು ನಿಂತಾಗ ರಾತ್ರಿ 7 ಗಂಟೆ, ತುಂಬ ನಿರಾಳ ಎನಿಸಿತು ಅವನಿಗೆ. ತಾನೂ ಒಬ್ಬ ಕತೆಗಾರನಾಗುತ್ತಿದ್ದೇನೆ ಎಂಬ ನವಿರಾದ ಖುಷಿ.... ಜೊತೆಗೆ ಮೂಲೆಯಲ್ಲೆಲ್ಲೋ... ನಾರಾಯಣರ ಆತ್ಮವೇ ಕಥೆ ಬರೆಸುತ್ತಿರಬಹುದೇನೋ ಎಂಬ ಆತಂಕ.... 

"ಒಕೆ ಡನ್... ನಾಳೆ ಬೆಳಗ್ಗೆ ನಮ್ಮ ವಾಟ್ಸಪ್ ಗ್ರೂಪಿನಲ್ಲಿ ಅಪ್ಲೋಡ್ ಮಾಡ್ತೇನೆ..." ಫಾರೂಕಿನ ಮೆಸೇಜ್ ನೋಡಿ ಬೈಕು ಹತ್ತಿ ಮನೆಗೆ ಹೊರಟ ಜಗ್ಗ..


ಬೈಕ್ ನಿಲ್ಲಿಸಿ ಕೈಕಾಲು ತೊಳೆದು ಒಳಗೆ ಹೋಗುವಾಗ ಜಗಲಿಯಲ್ಲಿ ಟೋಪಿ ಹಾಕಿ ಇರಿಸಿದ್ದ ಹಲಸಿನ ಕಾಯಿಯನ್ನು ಕಂಡಾಗ ಎದೆ ಝಲ್ಲೆಂದಿತು...!!!!

ಕಿವಿಯಲ್ಲಿ ನಾರಾಯಣ ಧ್ವನಿ ಅನುರಣಿಸಿದಂತಾಯಿತು... 'ನನ್ನ ಶಿಷ್ಯರಲ್ಲೊಬ್ಬನಾದ ಜಗನ್ನಾಥ ನನ್ನಷ್ಟೇ ಪ್ರೀತಿಯಿಂದ ಹಲಸಿನ ಕೃಷಿ ಮಾಡ್ತಾನೆ, ನನ್ನ ಹಾಗೆಯೇ ಆತನೂ ಹಲಸಿನ ಕಾಯಿಗೆ ಅಕ್ಕರೆಯಿಂದ ಟೋಪಿ ಇರಿಸಿ ಕಾಪಾಡುತ್ತಾನೆ.....!!!!!!"

(ಮುಕ್ತಾಯ).


-ಕೆಎಂ.



(ಸ್ಪಷ್ಟನೆ: ಈ ಧಾರಾವಾಹಿಯಲ್ಲಿ ಬಂದ ಎಲ್ಲ ಪಾತ್ರಗಳು, ಸನ್ನಿವೇಶ ಕಾಲ್ಪನಿಕ. ವಾಸ್ತವಕ್ಕೆ ಹೋಲಿಕೆ ಇದ್ದರೆ ಅದು ಕಾಕತಾಳೀಯ ಮಾತ್ರ. ಲಘು ಧಾಟಿಯಲ್ಲಿ ಪ್ರಸ್ತುತ ಪಡಿಸಿದ ವಿಚಾರಗಳೆಲ್ಲ ತಮಾಷೆಗೋಸ್ಕರ ಅಷ್ಟೆ.)

Post a Comment

0 Comments