Ticker

5/recent/ticker-posts

Header Ads Widget

MANGALORE UNIVERSITY

ಜ್ಯಾಕ್ ಫ್ರೂಟ್ ಡೈರಿ ಭಾಗ -11

ಜಗನ್ನಾಥ ಸಮುದ್ರಕ್ಕೆ ಹಾರಿದ್ದು ಯಾಕೆ ?





ಇಲ್ಲಿಯ ವರೆಗಿನ ಕಥೆ:ಪ್ರಗತಿಪರ ಹಲಸು ಬೆಳೆಗಾರ ಉಳ್ಳಾಲಗುತ್ತು ನಾರಾಯಣರ ಹಲಸು ಬೆಳೆಯ ಸಾಧನೆ ಕುರಿತು ಅಧ್ಯಯನ ಮಾಡಲು ಬಂದ ಅಚಿನ್ ಸಲ್ಮೇಡಾ, ಅಲ್ಲೇ ಸಮೀಪದ ನಾರಾಯಣರ ಗೆಳೆಯ ಗುಣಶೀಲ ಕುಮಾರನ ಮನೆಯಲ್ಲಿ ವಾಸ್ತವ್ಯ ಹೂಡಿರುತ್ತಾನೆ. ತನ್ನ ಅಧ್ಯಯನ ಪ್ರಬಂಧ ಪೂರ್ತಿಯಾದ ಹಿನ್ನೆಲೆಯಲ್ಲಿ ನಾರಾಯಣರಿಗೆ ಗುಣಶೀಲನ ಮನೆಯಲ್ಲಿ ಒತ್ತಾಯಪೂರ್ವಕ ಸನ್ಮಾನ ಸಮಾರಂಭ ಏರ್ಪಡಿಸಿರುತ್ತಾನೆ. ಸನ್ಮಾನ ಸಮಾರಂಭ ಯಶಸ್ವಿಯಾಗಿ ನಡೆಯುತ್ತದೆ. ಸಮಾರಂಭದಲ್ಲಿ, ತಾನು ನಾರಾಯಣರ ಅನುಪಸ್ಥಿತಿಯಲ್ಲಿ ಹಲಸು ತಿಂದದ್ದನ್ನು ಅಚಿನ್ ಬಹಿರಂಗವಾಗಿ ಒಪ್ಪುತ್ತಾನೆ, ಅದನ್ನು ಉದಾರ ಮನಸ್ಸಿನಿಂದ ನಾರಾಯಣರು ಮನ್ನಿಸುತ್ತಾರೆ. ಎಲ್ಲರೂ ಹಲಸಿನ ಖಾದ್ಯಗಳ ಊಟ ಸವಿಯುತ್ತಾರೆ. ಸಮಾರಂಭ ಮುಗಿಸಿ ಕಾಲ್ನಡಿಗೆಯಲ್ಲಿ ಮುಸ್ಸಂಜೆ ಮನೆಗೆ ಮರಳುತ್ತಿದ್ದ ಗುಣಶೀಲ ಹಾಗೂ ಅಚಿನ್ ಅನ್ನು ಮೂವರು ಮುಸುಕುಧಾರಿ ಅಪರಿಚಿತರು ತಡೆಯುತ್ತಾರೆ.....

(ಮುಂದಿನ ಕಥೆ...)



ಎದುರಿದ್ದ ಗುಣಶೀಲ ಹಾಗೂ ಆತನ ಹಿಂದೆ ನಡುಗುತ್ತಾ ನಿಂತಿದ್ದ ಅಚಿನ್ ಇಬ್ಬರಿಗೂ ಇಂತಹ ಅನುಭವ ಹೊಸತು. ಏನು ಮಾಡಬೇಕು ಅಂತಲೇ ಗೊತ್ತಾಗಲಿಲ್ಲ. ಅಷ್ಟುಹೊತ್ತಿಗೆ ಎದುರಿಗಿದ್ದ ಮುಸುಕುಧಾರಿ ಹತ್ತಿರ ಬಂದಾಗಿತ್ತು. ಆತ ಡರೋನಾ 20 ನಿವಾರಣೆಗೆ ಬಳಸುವ ಮಾಸ್ಕ್ ಧರಿಸಿದ್ದ, ತಲೆಗೆ ಶಾಲು ಸುತ್ತಿದ್ದ, ಹಾಗಾಗಿ ಯಾರೆಂದು ತಿಳಿಯುತ್ತಿರಲಿಲ್ಲ. ಇನ್ನಿಬ್ಬರು ಮರದಿಂದ ಹಾರಿದವರು ಹತ್ತಿರ ಬರುತ್ತಿದ್ದರು....



ತಕ್ಷಣ ಕಣ್ಣು ಮುಚ್ಚಿ ಏಕಾಗ್ರತೆ ತಂದುಕೊಂಡ ಗುಣಶೀಲನ ತಲೆಯಲ್ಲಿ ಸಿನಿಮಾಗಳಲ್ಲಿ ತಾನು ನೋಡಿದ್ದ ಹೊಡೆದಾಟದ ದೃಶ್ಯಗಳು ನೆನಪಾಗತೊಡಗಿದವು. ತಾವೀಗ ಹೊಡೆದಾಡದಿದ್ದರೆ ಉಳಿಗಾಲವಿಲ್ಲ ಎಂದು ಅರಿತ ಗುಣಶೀಲ ತನ್ನೆಲ್ಲ ಬಲವನ್ನು ಒಟ್ಟುಗೂಡಿಸಿ ಝಾಡಿಸಿ (ಎದುರಿಗೆ ತುಳಿಯುವ ಬದಲು, ಅರ್ಜೆಂಟಲ್ಲಿ) ಹಿಂಭಾಗಕ್ಕೆ ಒದ್ದ....



“ಓ, ದಾನೆಂಬೆ ಮೂಜಿಕಾಸ್ದಾಯ... ಕೆರ್ಪಾನ...”

ಹಿಂದಿನಿಂದ ಅಚಿನ್ ಕಿರುಚಾಟ ಕೇಳಿದಾಗಲೇ ಗುಣಶೀಲನಿಗೆ ಗೊತ್ತಾದ್ದು, ತಾನು ನರ್ವಸ್ ಆಗಿ ಅರ್ಜಂಟಲ್ಲಿ ತುಳಿದದ್ದು ಅಚಿನ್ ಹೊಟ್ಟೆಗೆ ಅಂತ... ಪುಣ್ಯಕ್ಕೆ ಅಚಿನ್ ಗೆ ಹೆಚ್ಚಿನ ಪೆಟ್ಟಾಗಲಿಲ್ಲ....

ತನ್ನೆಲ್ಲ ಬಲವನ್ನು ಒಟ್ಟುಸೇರಿಸಿ ಗುಣಶೀಲ... ಜೋರಾಗಿ ಕಿರುಚುತ್ತಾ ಎದುರಿನ ಮುಸುಕುಧಾರಿಯ ಎದೆಗೆ ಹಾರಿ ಒದೆಯಲು ಹೋದ, ಮುಸುಕುಧಾರಿ ಪಕ್ಕಕ್ಕೆ ಸರಿದಾಗ ಹೋಗಿ ಮಣ್ಣಿನ ರಾಶಿ ಮೇಲೆ ಬಿದ್ದ, ಮೈಯೆಲ್ಲ ಹುಡಿಹುಡಿಯಾದ ಅನುಭವ.... ಸಿನಿಮಾದಲ್ಲಿ ತೋರಿಸುವ ಫೈಟಿಂಗ್ ದೃಶ್ಯಗಳು ನಡೆಯುವಂಥಹ ಮರದ ತೋಪಿನ ನಡುವಿನ ತರಗೆಲೆಗಳು ಇದ್ದ ಜಾಗ ಅದಾಗಿದ್ದರಿಂದ, ಬಿದ್ದರೂ ನೋವಾಗುವಂತಿರಲಿಲ್ಲ....

ಅಷ್ಟೊತ್ತಿಗೆ.... ಅಚಿನ್ ಕೂಡಾ ಹೋಗಿ ಎದುರಿನ ಮುಸುಕುಧಾರಿಯ ಸೊಂಟಕ್ಕೆ ಒದ್ದ... ಮುಸುಕುಧಾರಿ ನೆಲಕ್ಕುರುಳಿದ... ಆಗ ಹಿಂದಿದ್ದವರು ವೇಗವಾಗಿ ಬಂದು ಅಚಿನ್ ನ್ನು ಎರಡು ಕೈಗಳಲ್ಲಿ ಹಿಡಿದುಕೊಂಡರು... ಮೂರನೆಯವ ಕೈಯ್ಯಲ್ಲಿದ್ದ ಹಾಕಿ ಸ್ಟಿಕ್ಕಿನಿಂದ ಅಚಿನ್ ಮೊಣಕಾಲಿಗೆ ಹೊಡೆದ.. ಜೋರಾಗಿ ಕಿರುಚಿದ ಅಚಿನ್. ಅಷ್ಟೊತ್ತಿಗೆ ಭಯದಿಂದ ಸಮೀಪದಲ್ಲಿದ್ದ ಹಲಸಿನ ಮರ ಏರಿದ್ದ ಗುಣಶೀಲ, ಅಲ್ಲಿ ಹಣ್ಣಾಗಿದ್ದ ಹಲಸಿನ ಹಣ್ಣನ್ನುಬಿಚ್ಚಿ ಅದರಿಂದ ಪೆಲತ್ತರಿ (ಹಲಸಿನ ಬೀಜ) ತೆಗೆದು ಒಂದೊಂದೇ ಬೀಜಗಳನ್ನು ದುಷ್ಕರ್ಮಿಗಳ ತಲೆಗೆ ಎಸೆಯತೊಡಗಿದ... ಕತ್ತಲಿನಲ್ಲಿ ಗುಣಶೀಲನನ್ನು ಕಾಣದ ದುಷ್ಕರ್ಮಿಗಳು ಹಲಸಿನ ಬೀಜದ ಏಟು ತಾಳಲಾರದೆ, ಅಚಿನ್ ನ್ನು ಬಿಟ್ಟುರು... ಅಚಿನ್ ತಕ್ಷಣ ಒಂದು ಮರದ ಹಿಂದೆ ಹೋಗಿ ಅವಿತುಕೊಂಡ...



“ಎಲ್ಲಿದ್ದೀರ ಹೇಡಿಗಳಾ... ಮುಂದೆ ಬನ್ನಿ...” ಮೂವರ ಪೈಕಿ ಎತ್ತರದ ವ್ಯಕ್ತಿ ಘರ್ಜಿಸಿತು... ಈ ಧ್ವನಿಯನ್ನು ಎಲ್ಲೋ ಕೇಳಿದ ಹಾಗಿದೆಯಲ್ಲ ಅಂತ ಮರದ ಮೇಲಿದ್ದ ಗುಣಶೀಲನಿಗೆ ಅನ್ನಿಸಿತು...



ತಾನು ಹೆಚ್ಚು ಹೊತ್ತು ಮರದ ಮೇಲೆಯೇ ಕುಳಿತಿರುವಂತಿಲ್ಲ, ಕೆಳಗೆ ಸಿಕ್ಕಿಹಾಕಿಕೊಂಡಿರುವ ಅಚಿನ್ ಗೆ ತೊಂದರೆ ಆದರೆ ಕಷ್ಟ... ಅದಕ್ಕಾಗಿ ಏನಾದರೂ ಮಾಡಬೇಕು ಅಂತ ತೀರ್ಮಾನಿಸಿದ ಗುಣಶೀಲ. ಒಂದು ಉಪಾಯ ಹೊಳೆಯಿತು... ತುಂಬ ಹಣ್ಣಾಗಿ ಕೊಳೆತ ಹಲಸಿನ ಹಣ್ಣನ್ನು ಕೊಯ್ದು ನಿಶ್ಯಬ್ಧವಾಗಿ ಮರದಿಂದ ಇಳಿದು... ಹಿಂದಿನಿಂದಹೋಗಿ ಎತ್ತರದವನ ತಲೆಗೆ ಪ್ಲಾಸ್ಟಿಕ್ ಕವರ್ ಹಾಕಿದ ಹಾಗೆ ಹಲಸಿನ ಹಣ್ಣನ್ನು ಕುಕ್ಕಿದ... ಹಲಸಿನ ಹಣ್ಣು ದುಷ್ಕರ್ಮಿಯ ತಲೆಯಲ್ಲಿ ಫಿಕ್ಸ್ ಆಗಿ... ಆತನಿಗೆ ಉಸಿರು ಕಟ್ಟತೊಡಗಿತು...



ನಂತರ ಸಿನಿಮಾದಲ್ಲಿ ಮಾಡುವ ಹಾಗೆ, ಎದುರುಬಂದ ಅಚಿನ್ ಹಾಗೂ ಗುಣಶೀಲಾ ಇಬ್ಬರೂ ಟೈಗರ್ ಪ್ರಭಾಕರ್ ಶೈಲಿಯಲ್ಲಿ ಕರಾಟೆಯ ಸ್ಟೈಲಿನಲ್ಲಿ ಪೋಸ್ ಕೊಟ್ಟು “ಬನ್ನಿ... ಫೈಟಿಂಗಿಗೆ” ಅನ್ನುವ ಥರ ಪೋಸ್ ಕೊಟ್ಟರು. (ಇಬ್ಬರಿಗೂ ಕರಾಟೆಯನ್ನು ಸಿನಿಮಾದಲ್ಲಿ ಮಾತ್ರ ನೋಡಿ ಗೊತ್ತಿತ್ತು)....



🤼‍♀️🤼‍♀️🤼‍♀️🤼‍♀️🤼


ಇತ್ತ ಉಸಿರು ಕಟ್ಟಿ ಒದ್ದಾಡುತ್ತಿದ್ದ ದುಷ್ಕರ್ಮಿಯ ತಲೆಯಿಂದ ಹಲಸಿನ ಹಣ್ಣನ್ನು ಇತರ ಇಬ್ಬರೂ ಸೇರಿ ಕಷ್ಟಪಟ್ಟು ತೆಗೆದರು... ತೆಗೆಯುವಾಗ ಆತನ ಮಾಸ್ಕ್ ಕಳಚಿಕೊಂಡಿತು... ಅದು ಮತ್ಯಾರೂ ಅಲ್ಲ, ಸತ್ಯನಾರಾಯಣ!!!!



ನಾರಾಯಣರ ದೊಡ್ಡ ಮಗ... ಜೊತೆಗಿದ್ದವರಿಬ್ಬರೂ ಆತನ ತಮ್ಮಂದಿರು... “ಹೌದು ಕಣೋ, ಇದು ನಾನೇ ಸತ್ಯನಾರಾಯಣ...”

ಸತ್ಯನಾರಾಯಣ ಮಾತು ಮುಂದುವರಿಸಿದ.... “ಏನ್ರೋ ಪರದೇಶಿಗಳ, ನಮ್ಮ ಅಪ್ಪನನ್ನು ಮರುಳು ಮಾಡಿ, ಅವರ ಆಸ್ತಿ ಕಬಳಿಸಲು ಹೊಂಚು ಹಾಕುತ್ತಿದ್ದೀರ....? ಯಾರ್ರೋ ನೀವು? ನಿಮ್ಗೇನ್ರೋ ಸಂಬಂಧ? ನ್ಯಾಯವಾಗಿ ನಮಗೆ ಬರಬೇಕಾದ ಆಸ್ತಿ ಈ ಹಲಸಿನ ತೋಟ... ನೀವು ಅತಿ ವಿನಯ ತೋರಿಸಿ ಅದನ್ನು ವಶಪಡಿಸಿಕೊಳ್ತಾ ಇದ್ದೀರ, ನಮ್ಮ ಅಪ್ಪ ನಿನ್ನ ಹೆಸರಿಗೆ ಒಂದು ತೋಟವನ್ನೇ ಬರೆದುಕೊಟ್ಟಿದ್ದಾರೆ. ಇನ್ನು ಒಂದೊಂದೇ ತೋಟವನ್ನು ನಿನಗೇ ಬರೆದು ಕೊಡ್ತಾ ಹೋದರೆ, ನಾರಾಯಣರ ಮಕ್ಕಳಾದ ನಮಗೇನಿದೆ...? ಅದಕ್ಕೇ ಒಂದು ನಿರ್ಧಾರಕ್ಕೆ ಬಂದಿದ್ದೇವೆ... ಇವತ್ತು ನಿಮ್ಮನ್ನು ಕೊಲ್ಲದೇ ಬಿಡುವುದಿಲ್ಲ. ಏನು ಬೇಕಾದರೂ ಆಗಲಿ....”

 🥊🥊🥊🥊🥊🥊

ಅವರ ಮಾತು ಮುಗಿಯುವ ಮೊದಲೇ ಕೋಪದಿಂದ ಅಚಿನ್ ವೇಗವಾಗಿ ಘರ್ಜಿಸುತ್ತಾ ಹೋಗಿ ಸತ್ಯನಾರಾಯಣನನ್ನು ನೂಕಿ ಹಾಕಲು ಪ್ರಯತ್ನಿಸಿದ. ಕುಳ್ಳ ಅಚಿನ್ ನನ್ನು ಬಲವಾಗಿ ಹಿಡಿದುಕೊಂಡ ಸತ್ಯನಾರಾಯಣ. ತಮ್ಮಂದಿರು ದೊಡ್ಡ ಬಡಿಗೆಯಿಂದ ಅಚಿನ್ ತಲೆಗೆ ಬಡಿದಾಗ ಅಚಿನ್ ಅಲ್ಲೇ ಕುಸಿದು ಹೋದ... ನಂತರ ಉಳಿದವನು ಗುಣಶೀಲ...

 🙏🙏🙏🙏🙏

ಗುಣಶೀಲ ಕೈಮುಗಿದು ಹೇಳಿದ... “ನೋಡಪ್ಪ ಸತ್ಯನಾರಾಯಣ, ಸಣ್ಣವರಾಗಿದ್ದಾಗಿನಿಂದ ಒಟ್ಟಿಗೇ ಬೆಳೆದವರು ನಾವು. ನಿನಗೆ ಗೊತ್ತಲ್ಲ, ನಾನು ಹೇಗೆಂದು. ನಾರಾಯಣ ಅಂಕಲ್ ಮೇಲಿನ ಪ್ರೀತಿಯಿಂದ ಅವರ ಜೊತೆಗಿದ್ದೇನೆಯೇ ಹೊರತು, ಅವರ ಮಕ್ಕಳಾದ ನಿಮಗೆ ಉಪದ್ರ ಮಾಡುವ ಉದ್ದೇಶದಿಂದಲ್ಲ. ಮತ್ತೆ, ಆಸ್ತಿಯನ್ನು ನಾನು ಕೇಳಿ ಅವರು ಕೊಟ್ಟದ್ದಲ್ಲ, ಅವರಾಗೇ ಕೊಟ್ಟದ್ದು. ನೀವೇ ಅವರ ಜೊತೆ ಮಾತನಾಡಿ ಸರಿ ಮಾಡಿಕೊಳ್ಳಿ, ನನಗೆ ಯಾಕೆ ಹೊಡೆಯುತ್ತೀರಿ...?” ಅಷ್ಟು ಹೇಳಿದ್ದೇ ತಡ, “ಹೋಗೋ... ನೀನೇ ಹೋಗಿ ನಮ್ಮ ಅಪ್ಪನತ್ರ ಹೇಳಬೇಕು ನನಗೆ ಆಸ್ತಿ ಬೇಡ ಅಂತ... ಅಲ್ಲಿಯವರೆಗೆ ಬಿಡುವುದಿಲ್ಲ” ಅನ್ನುತ್ತಾ ಗುಣಶೀಲನಿಗೆ ಜೋರಾಗಿ ಬಡಿಗೆಯಿಂದ ಹೊಡೆಯತೊಡಗಿದರು...



“ಢಂ...............”


🔫🔫🔫🔫


ಅಷ್ಟರಲ್ಲಿ ದೊಡ್ಡದಾಗಿ ಬಂದೂಕಿನ ಸದ್ದು ಕೇಳಿಸಿತು... ಮರದ ಮೇಲಿನ ಬಾವಲಿ, ಗೂಬೆಗಳು ಹೆದರಿ ಚೆಲ್ಲಾಪಿಲ್ಲಿಯಾಗಿ ಓಡಿದವು...!!!



ಮೂವರು ಮಕ್ಕಳು ಹಾಗೂ ಗುಣಶೀಲ... ಸದ್ದು ಬಂದತ್ತ ನೋಡಿದಾಗ ಅಲ್ಲಿ ನಾರಾಯಣರು ಬಂದೂಕು ಹಿಡಿದು ನಿಂತಿದ್ದರು! ಅವರು ಗಲಾಟೆ ನಿಲ್ಲಿಸಲು ಗಾಳಿಯಲ್ಲಿ ಗುಂಡು ಹಾರಿಸಿದ್ದರು.

 🔫🔫🔫🔫🔫🔫

ವಿಷಾದದ ಹೆಜ್ಜೆ ಹಾಕುತ್ತಾ ಮುಂದೆ ಬಂದ ನಾರಾಯಣರು ಮಾತನಾಡತೊಡಗಿದರು...


😥😥😥😥😥

“ಓ ದೇವರೇ, ನನ್ನ ಬದುಕಿನಲ್ಲಿ ಯಾವತ್ತೂ ನಾನು ಇಂತಹ ದಿನ ನೋಡುತ್ತೇನೆ ಅಂತ ಭಾವಿಸಿರಲಿಲ್ಲ. ಇದೇನಾಗಿ ಹೋಯಿತು... ನನ್ನ ಮಕ್ಕಳು ಇಷ್ಟು ಕೆಟ್ಟವರಾಗಿ ಹೋದರಾ? ತುಂಡು ಭೂಮಿಗಾಗಿ ಚಿಕ್ಕಂದಿನಿಂದಲೇ ನೋಡುತ್ತಾ ಬಂದ ಓರಗೆಯವನನ್ನು ಕೊಲ್ಲಲು ಹೋಗುವುದಾ...? ಇದೇನಾ ನಾನು ನಿಮಗೆ ಕಲಿಸಿದ ಸಂಸ್ಕಾರ...? ಅಷ್ಟಕ್ಕೂ ಈ ವಿಚಾರದಲ್ಲಿ ಆ ಹುಡುಗರ ತಪ್ಪೇನಿದೆಯಪ್ಪ... ಅವರೇನು ನನ್ನತ್ರ ಕೇಳಿದ್ರಾ ಆಸ್ತಿ ಕೊಡಿ ಅಂತ... ಅಷ್ಟೇ ಅಲ್ಲ.. ಇಷ್ಟು ವಿಶಾಲ ಭೂಮಿಯನ್ನು ಕಷ್ಟಪಟ್ಟು ಅಭಿವೃದ್ಧಿ ಮಾಡಿ ಇವತ್ತು ಈ ಸ್ಥಿತಿಗೆ ತಂದದ್ದು ಯಾರು? ನಾನು, ನನ್ನ ಸ್ವಯಾರ್ಜಿತ ಇದು. ನಿಮಗೆ ಒಂದಿಂಚೂ ಭೂಮಿ ಕೊಡದೇ ಇರಬಹುದಿತ್ತು ನಾನು. ಆದರೆ ಹಾಗೆ ಮಾಡಲಿಲ್ಲ.... ನಿಮಗೂ ಆಸ್ತಿ ಇರಿಸಿದ್ದೇನೆ. ಆದರೆ, ನಿಮ್ಮ ಬೇಜವಾಬ್ದಾರಿ ಬದುಕು, ಕೃಷಿಯ ಕುರಿತ ನಿಮ್ಮ ಕಡೆಗಣನೆ ನೋಡಿ ಬೇಸರವಾಗಿ, ನನ್ನ ನಂತರಕ್ಕೆ ಈ ಹಲಸಿನ ತೋಟ ಹಾಳಾಗಬಾರದು ಅಂತ ಅವನಿಗೊಂದು ಪುಟ್ಟತೋಟ ಬರೆದು ಕೊಟ್ಟೆ... ಈಗ ಆ ದೇವರಂಥ ಮನುಷ್ಯನನ್ನು ಕೊಲ್ಲಲು ಹೊರಟಿದ್ದೀರಲ್ಲೋ ಪಾಪಿಗಳಾ.. ನಾನು ಇನ್ನೇನು ಕಾಣಬೇಕೋ ಈ ಬದುಕಿನಲ್ಲಿ....”


ನಾರಾಯಣರ ಕಣ್ಣಿನಿಂದ ಧಾರಾಕಾರವಾಗಿ ನೀರು ಇಳಿಯತೊಡಗಿತು... ಅಷ್ಟರಲ್ಲಿ ಬಂದೂಕಿನ ಸದ್ದು ಕೇಳಿ ಮನೆಯಿಂದ ಓಡಿ ಬಂದ ಡ್ರೈವರ್ ಸಿಂಪತಿ ಆಳ್ವ... ಹೋಗಿ ಕೈರಂಗಳದ ಜಗನ್ನಾಥನಿಗೆ ಅಲ್ಲಿಗೆ ಬರಲು ಕರೆ ಮಾಡಿ ತಿಳಿಸಿದ....


ನಾರಾಯಣರು ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಮೌನವಾದರು, ಬಂದೂಕು ಕೈಯ್ಯಲ್ಲೇ ಇತ್ತು.... ಅವರ ಮೂರೂ ಮಕ್ಕಳಿಗೆ ಒಂದಕ್ಷರ ಮಾತನಾಡುವಾ ಧೈರ್ಯ ಇರಲಿಲ್ಲ... ಅಚಿನ್ ಮೂರ್ಛಾಗತನಾಗಿದ್ದ, ಗುಣಶೀಲ ನೆಲದಲ್ಲಿ ಕುಳಿತು ನೋವಿನಿಂದ ಕಂಗಾಲಾಗಿದ್ದ... ನಾರಾಯಣರು ಮಾತು ಮುಂದುವರಿಸಿದರು..


“ಸಾಕಪ್ಪ, ಈ ಬದುಕು ಸಾಕು ನನಗೆ. ನಾನು ಸತ್ತ ಮೇಲೂ ನೀವು ಈ ಇಬ್ಬರು ಹುಡುಗರನ್ನು ಕೊಲ್ಲದೇ ಬಿಡುವುದಿಲ್ಲ ಅಂತ ನನಗಿಂದು ಖಾತರಿ ಆಯ್ತು... ನನ್ನ  ಈ ಕೃಷಿ, ಹಸಿರಿನ ಕುರಿತ ನನಗಿದ್ದ ಅಕ್ಕರೆ, ಯಾವುದೂ ನಿಮಗಿಲ್ಲ. ನಾನು ಸತ್ತ ನಂತರ ನೀವು ಈ ಮರಗಳನ್ನು ಕಡಿದು ಮಾರಿ ಗುಂಡಾಂತರ ಮಾಡುವಿರಿ.... ನಿಮಗೆ ಇದು ಯಾವುದರ ಬೆಲೆ ಗೊತ್ತಿಲ್ಲ, ದುಡ್ಡಿನ ಅಮಲು ಹಿಡಿದಿದೆ ನಿಮಗೆ, ಮನುಷ್ಯತ್ವದ ಬೆಲೆ ಗೊತ್ತಿಲ್ಲ, ಆಸ್ತಿಗಾಗಿ ಕೊಲೆ ಮಾಡಲು ಮುಂದಾಗುತ್ತೀರ... ಸಾಕು ಸಾಕು ಈ ಬದುಕು ನನಗೆ, ನನಗಿನ್ನೂ ಯಾವುದನ್ನು ನೋಡಬೇಕಾಗಿಲ್ಲ, ಆಗ ಮಧ್ಯಾಹ್ನ ನನಗೆ ಎಲ್ಲ ಸೇರಿ ಸನ್ಮಾನ ಮಾಡಿದರು... ಈಗ ನೀವು ಮಕ್ಕಳು ಸೇರಿ ನನ್ನ ತಲೆಯನ್ನೇ ಕಡಿದಿರಿ.... ಸಾಕಪ್ಪಾ ಸಾಕು.... ಒಂದು ನೆನಪಿಟ್ಟುಕೊಳ್ಳಿ ಪಾಪಿಗಳಾ... ದುಡ್ಡು ಶಾಶ್ವತ ಅಲ್ಲ, ಪ್ರೀತಿ ವಿಶ್ವಾಸ ಶಾಶ್ವತ. ದುಡ್ಡನ್ನು ಪುನಃ ಸಂಪಾದಿಸಬಹುದು. ಆದರೆ, ಕಳೆದುಕೊಂಡ ವಿಶ್ವಾಸ, ನಂಬಿಕೆ ಪುನಃ ಸಂಪಾದಿಸಲು ಕಷ್ಟ.... ದುಡ್ಡಿನಾಸೆಗೆ ಇವರನ್ನು ಕೊಂದು ಯಾವ ನರಕಕ್ಕೆ ಹೋಗ್ತೀರಿ... ನನ್ನ ಇಷ್ಟು ದಿನದ ನಂಬಿಕೆ, ಧ್ಯೇಯ, ನಿಷ್ಠೆಗಳನ್ನು ಹಾಳು ಮಾಡಿಬಿಟ್ಟಿರಲ್ಲಾ... ಇದು ಇಂದಿಗೇ ಕೊನೆಯಾಗಲಿ, ನಿಮ್ಮನ್ನು ತಡೆಯುವ ತ್ರಾಣ ನನ್ನ ದೇಹದಲ್ಲಿಲ್ಲ, ನಿಮಗೆ ಬೇಕಾದ್ದು ಮಾಡಿಕೊಳ್ಳಿ... ಅವರ ಹಣೆಯಲ್ಲಿ ಬದುಕಬೇಕು ಅಂತ ಬರೆದಿದ್ರೆ ಆ ಹುಡುಗರು ಬದುಕಿಯಾರು... ನನಗಿನ್ನು ಬದುಕುವ ಆಸೆ ಉಳಿದಿಲ್ಲ, ಮರ್ಯಾದೆ ಕಳೆದುಕೊಂಡ ಬದುಕು ಬದುಕೇ ಅಲ್ಲ.....”

 🎯🎯🎯🎯🎯🎯

ಮಾತು ಮುಗಿಸಿದ ನಾರಾಯಣರು ಬಂದೂಕು ಬಿಸಾಕಿ ನೇರವಾಗಿ ಸೋಮೇಶ್ವರದತ್ತ ನಡೆಯತೊಡಗಿದರು... ಯಾರಿಗೂ ಅವರನ್ನು ತಡೆಯುವ ಧೈರ್ಯ ಬರಲಿಲ್ಲ... ಅಷ್ಟೊತ್ತಿಗೆ ಅಲ್ಲಿಗೆ ತಲುಪಿದ ಜಗನ್ನಾಥ ಸಹಿತ ಎಲ್ಲರೂ ಅವರ ಹಿಂದೆಯೇ ಟಾರ್ಚ್ ಹಿಡಿದುಕೊಂಡು ಹೊರಟರು.. ಯಾವುದೋ ವಶೀಕರಣಕ್ಕೆ ಒಳಗಾದಂತೆ ನಾರಾಯಣರು ಗಂಟೆಗೆ 40 ಕಿ.ಮೀ. ವೇಗದಲ್ಲಿ ನಡೆಯುತ್ತಾ ಹೋಗಿ ಸೋಮೇಶ್ವರದ ರುದ್ರಪಾದೆ ಏರಿದರು. ಅಷ್ಟೊತ್ತಿಗೆ ರಾತ್ರಿ 8 ಗಂಟೆ ತಣ್ಣನೆ ಗಾಳಿ ಬೀಸುತ್ತಿತ್ತು... ಬಾಕಿದ್ದವರೆಲ್ಲ ಬಂಡೆಯ ಹತ್ತಿರ ತಲಪುವಷ್ಟರಲ್ಲಿ ಆಕಾಶ ನೋಡಿ ಕೈಮುಗಿದ ನಾರಾಯಣರು ನೇರವಾಗಿ ಸಮುದ್ರದೊಳಗೆ ಜಿಗಿದರು....!!!!!



ಜಗನ್ನಾಥ, ಸಿಂಪತಿ ಆಳ್ವಹಾಗೂ ಕೆಲಸದವರು ಬಂಡೆಯ ತುದಿಗೆ ತಲಪುವಷ್ಟರಲ್ಲಿ ಕೆಳಗೆ ಅಬ್ಬರದ ತೆರೆಯ ಸುಳಿಯೊಳಗೆ ನಾರಾಯಣರ ದೇಹ ಹಾರಿ ಹಾರಿ ಮುಳುಗುತ್ತಿತ್ತು.... ಹಿಂದೆ ಮುಂದೆ ನೋಡದೆ ಜಗನ್ನಾಥ ನೇರ ಸಮುದ್ರಕ್ಕೆ ಧುಮುಕಿದ....


🏊‍♀️🏊‍♀️🏊‍♀️🏊‍♀️🏊‍♀️🏊‍♀️🏊‍♀️

ಈಜು ಪರಿಣಿತ ಜಗನ್ನಾಥ ಇನ್ನೇನು ಹೋಗಿ ನಾರಾಯಣರನ್ನು ಹಿಡಿದು ಎಳೆಯಬೇಕು ಅನ್ನುವಷ್ಟರಲ್ಲಿ ಅವರ ದೇಹ ನೀರಿನೊಳಗೆ ಮುಳುಗತೊಡಗಿತು... ಜಗನ್ನಾಥನೂ ಉಸಿರು ಬಿಗಿ ಹಿಡಿದು ನೀರಿನಾಳಕ್ಕೆ ಇಳಿಯತೊಡಗಿದ.... ಎಷ್ಟೇ ಪ್ರಯತ್ನಿಸಿದರೂ ಒಂದು ಅಡಿ ದೂರದಲ್ಲಿದ್ದ ನಾರಾಯಣರ ದೇಹ ಆತನ ಕೈಗೆ ಸಿಗುತ್ತಲೇ ಇರಲಿಲ್ಲ... ಅಷ್ಟರಲ್ಲಿ ಯಾವುದೋ ಅವ್ಯಕ್ತಿ ಶಕ್ತಿ ಜಗನ್ನಾಥನನ್ನು ಬಲವಾಗಿ ಸಮುದ್ರದಾಳಕ್ಕೆ ಎಳೆಯತೊಡಗಿತು... ಏನು ಮಾಡಬೇಕೆಂದೇ ತೋಚದೆ ಜಗನ್ನಾಥ ಪ್ರಾಣದಾಸೆಯನ್ನೇ ಬಿಟ್ಟು ನಿಧಾನಕ್ಕೆ ಕಣ್ಣು ಮುಚ್ಚತೊಡಗಿದ.... !!!!!!!


🔜🔜🔜🔜🔜


(ಮುಂದಿನ ಸಂಚಿಕೆಯಲ್ಲಿ ಮುಕ್ತಾಯ)



-ಕೆಎಂ.


🙏🙏🙏🙏

(ಸ್ಪಷ್ಟನೆ: ಈ ಧಾರಾವಾಹಿಯಲ್ಲಿ ಬರುವ ಎಲ್ಲ ಪಾತ್ರಗಳು, ಸನ್ನಿವೇಶ ಕಾಲ್ಪನಿಕ. ವಾಸ್ತವಕ್ಕೆ ಹೋಲಿಕೆ ಇದ್ದರೆ ಅದು ಕಾಕತಾಳೀಯ ಮಾತ್ರ. ಲಘು ಧಾಟಿಯಲ್ಲಿ ಪ್ರಸ್ತುತ ಪಡಿಸಿದ ವಿಚಾರಗಳೆಲ್ಲ ತಮಾಷೆಗೋಸ್ಕರ ಅಷ್ಟೆ.)

Post a Comment

0 Comments