Ticker

5/recent/ticker-posts

Header Ads Widget

MANGALORE UNIVERSITY

ನೀರಾಗಲೇನೇ ನಾ.....!

ನೀರಾಗಲೇನೇ ನಾ.....!

 (ಪ್ರವಾಸ ಹೊರಡುವಾಗ ಇದ್ದ ಹೊರೆ, ಮರಳುವಾಗ ಹಗುರಾಗಿ ಮನಸ್ಸು ಅರಳಿತ್ತು....)!

 




ಆತ್ಮೀಯರೇ...

 

ನಿಜ ಹೇಳಬೇಕು ಅಂದರೆ ಈ ಪ್ರವಾಸ ಹೊರಡುವ ಮೊದಲು ನಾನು ಪ್ರವಾಸದ ಬಗ್ಗೆ ಇಷ್ಟುದ್ದ ಬರೆದು ಹಾಕುವ ಉದ್ದೇಶ ಇರಲಿಲ್ಲ. ಮತ್ತು ಪ್ರವಾಸದ ಅನುಭವದ ಬಗ್ಗೆ ನನಗೆ ನಿಶ್ಚಿತತೆ ಇರಲಿಲ್ಲ. ಪ್ರವಾಸ ಮುಗಿದ ನಂತರ ಸಂಜೆ ವಾಪಸ್ ಬಂದ ಬಳಿಕ 15 ದಿನಗಳ ಬಳಿಕ ನಾನು ಅಲ್ಪ ವಿರಾಮಕ್ಕಾಗಿ ಗ್ರೂಪಿನಿಂದ ಎಕ್ಸಿಟ್ ಆಗುವವನಿದ್ದೆ (ಯಾಕೆ ಅಂತ ಕೊನೆಗೆ ಹೇಳುತ್ತೇನೆ)... ಆದರೆ ದಿನದ ಕೊನೆಗೆ ನನಗೆ ಪ್ರವಾಸದಿಂದ ಸಿಕ್ಕಿದ ಅನುಭೂತಿ ಮತ್ತು ನನ್ನ ಸ್ನೇಹಿತರು ಪ್ರವಾಸದಿಂದ ಪಟ್ಟ ಖುಷಿ ಕಂಡಾಗ ಯಾವುದೋ ಬೇರೆಯೇ ಖುಷಿ ಸಿಕ್ಕಿತು... ಅದಕ್ಕಾಗಿ ಈ ಬರಹ ಪ್ರವಾಸಕ್ಕೆ ಬಂದವರಿಗೆ, ಪ್ರವಾಸಕ್ಕೆ ಬಾರದವರಿಗೆ, ನಾನಾ ಕಾರಣಗಳಿಂದ ಬರಲಾಗದೆ ನೊಂದವರಿಗೆ ಎಲ್ಲರನ್ನೂ ಉದ್ದೇಶಿಸಿ ಬರೆದದ್ದು. ನನ್ನ ಪಾಲಿಗೆ ಗ್ರೂಪಿನಲ್ಲಿ ಮಾತನಾಡುವವರು, ಮಾತನಾಡದವರು, ಮಾತನಾಡದೇ ಇದ್ದರೂ ಎಲ್ಲವನ್ನೂ ಗಮನಿಸುವವರು, ಗ್ರೂಪಿನಲ್ಲಿ ಪ್ರತಿಕ್ರಿಯೆ ನೀಡದಿದ್ದರೂ ವೈಯಕ್ತಿಕವಾಗಿ ಆಗಾಗ ನಿಮ್ಮ ಫೀಡ್ ಬ್ಯಾಕ್ ನೀಡುವವರು... ಹೀಗೆ ಪ್ರತಿಯೊಬ್ಬರೂ ಶ್ರೇಷ್ಠರೇ ಹಾಗಾಗಿ. ಎಲ್ಲರನ್ನೂ ಉದ್ದೇಶಿಸಿ ನಾನು ಎಲ್ಲವನ್ನೂ ಹೇಳುತ್ತೇನೆ..

 

ನಿನ್ನೆಯ ಪ್ರವಾಸದ ದಿನಚರಿ, ಎಲ್ಲೆಲ್ಲ ಹೋದೆವು ಎಂಬ ಬಗ್ಗೆ ಸುಶೀಲ್ ಸವಿವರವಾಗಿ ಬರೆಯುತ್ತಾರೆ ಎಂಬ ನಂಬಿಕೆ ಇದೆ. ಹಾಗಾಗಿ ನಾನೂ ಆ ಬಗ್ಗೆ ಬರೆಯುತ್ತಿರುವುದಲ್ಲ...

 

ನಾವು ಪ್ರವಾಸಕ್ಕೆ ತೆರಳಿದಾಗಿನ ಓಡಾಟಕ್ಕಿಂತಲೂ ಅಲ್ಲಿ ಸುತ್ತಾಡಿದ ನೆನಪುಗಳ ಮೆಲುಕು, ಆ ಫೋಟೋ,ವಿಡಿಯೋಗಳು ನಮಗೆ ಕಳೆದ ಕ್ಷಣಗಳ ನೆನಪುಗಳನ್ನು ಒಂದು ದೊಡ್ಡ ನೆನಪಾಗಿ ಕಟ್ಟಿ ಕೊಡುತ್ತವೇ. ಸಂಚಾರ, ಓಡಾಟ, ಸುತ್ತಾಟಗಳೆಲ್ಲ ಸಣ್ಣದೊಂದು ಸಿನಿಮಾದ ಹಾಗೆ. ಅಕೋ ಶುರುವಾಯಿತು, ಅಕೋ ಮುಗಿಯುತು ಎಂಬಷ್ಟರಲ್ಲಿ ಆಗಿ ಮುಗಿದಿರುತ್ತದೆ. ಉಳಿಯುವುದು ನೆನಪು ಮಾತ್ರ. ಬೇರೆ ಬೇರೆ ಕಾರಣಗಳಿಂದ ಸುತ್ತಾಟಗಳು ವಿಫಲವಾಗುತ್ತವೆ, ಸಫಲವೂ ಆಗುತ್ತವೆ. ಸ್ಥಳದ ಆಯ್ಕೆ, ವಾಹನ, ಆಹಾರ, ಸಮಯದ ಪಾಲನೆ, ಪ್ರವಾಸಿಗರ ಸಂಖ್ಯೆ ಕೂಡಾ ಇಡೀ ಪ್ರಯಾಣದ ಯಶಸ್ಸಿನ ಮಾನದಂಡಗಳಾಗುತ್ತವೆ.

 

ಸ್ಥಳವನ್ನು ಆರಿಸಿದವನು ನಾನೇ, ಹಾಗಾಗಿ ಆ ಬಗ್ಗೆ ನನ್ನ ವಿಮರ್ಶೆ ಇಲ್ಲ.ವಾಹನ ಅಂತೂ ನನಗೆ ತುಂಬ ಇಷ್ಟ ಆಯಿತು (ಬ್ಲೂ ಟೂತ್ ಮೂಲಕ ಮಾತು ಮತ್ತು ಹಾಡು ಒಟ್ಟಿಗೇ ಪ್ಲೇ ಆಗುವ ವ್ಯವಸ್ಥೆ ಇಲ್ಲದ್ದು ಅನಾನುಕೂಲವಾಯಿತು, ವಿಷಾದವಿದೆ). ಬಾಕಿ ಉಳಿದಂತೆ ವಾಹನ ಇಷ್ಟವಾಯಿತು.

 

ಸಂಖ್ಯೆಯಂತೂ ಸೂಪರ್. ಆರಂಭದಲ್ಲಿ 25ರ ಅಂದಾಜಿಗಿದ್ದದ್ದು, ಕೊನೆಯ ಎರಡು ದಿನಗಳಲ್ಲಿ 35ರ ಗಡಿ ತಲುಪಿದ್ದು ಮಾತ್ರ ಖುಷಿ. ಆಹಾರ ತಿನ್ನುವ ಸಮಯ ಆಚೀಚೆ ಆಯ್ತು, ಆದರೆ ಆಹಾರ ಮತ್ತು ನಾಲಗೆ ಚಪ್ಪರಿಸುವ ಹಾಗಿತ್ತು.

 

ಸಮಯದ ಪಾಲನೆ ಸಂಜೆಯ ತನಕವೂ ತುಂಬ ಅಚ್ಚುಕಟ್ಟಾಗಿತ್ತು. ಎಲ್ಲದಕ್ಕಿಂತ ಆಶ್ಚರ್ಯ ಕೊಟ್ಟ ಸಂಗತಿ ಎಂದರೆ ಪ್ರತಿ ಸ್ಟಾಪಿನಲ್ಲೂ ನಾವು ನಿಗದಿಪಡಿಸಿದ ಟೈಂಟೇಬಲಿಗಿಂತ ಮೊದಲೇ ಪ್ರತಿಯೊಬ್ಬರೂ (ಉತ್ಪ್ರೇಕ್ಷೆ ಇಲ್ಲ) ಬಂದು ನಿಂತಿದ್ದರು. ಪ್ರತಿಯೊಬ್ಬರೂ ಅಂದರೆ 36 ಮಂದಿ... ಇದು ಸಣ್ಣ ವಿಚಾರವಲ್ಲ. ಸಂಜೆ ಮಾತ್ರ ಹೊರಡುವಾಗ ತಡವಾಯಿತು. ಆದರೆ ಪ್ರವಾಸದ ಎಂಡಿಂಗ್ ಮಾತ್ರ ಸ್ಮರಣೀಯವಾಯಿತು. ಇಷ್ಟು ಕಾರಣಕ್ಕೆ ನನಗೆ ಪ್ರವಾಸ ಇಷ್ಟ ಆಯಿತು.

 

 ಬದುಕಿನಲ್ಲಿ ವೃತ್ತಿ, ಸಂಸಾರ, ಸಾಮಾಜಿಕ ಚಟುವಟಿಕೆಗಳಿಂದ ನಮ್ಮ ತಲೆಯೊಳಗೆ ಸಾಕಷ್ಟು ಜಂಕ್ ಫೈಲುಗಳು ಕ್ರಿಯೇಟ್ ಆಗಿರುತ್ತವೆ. ಬಿಡುವಿಲ್ಲದ ಓಡಾಟ, ಕೆಲಸ ಕೆಲಸ ಕೆಲಸ, ಟೆನ್ಶನ್, ಉದ್ವೇಗ, ಸಿಟ್ಟು, ಆತಂಕ, ಬೇಸರ, ಅಸಹಾಯಕತೆಯ ಭಾವಗಳು, ಜೊತೆಗೆ ಈ ಸಾಮಾಜಿಕ ಜಾಲತಾಣಗಳ ಅತಿರೇಕಗಳು ಇವೆಲ್ಲ ನಮ್ಮ ಮನಶಾಂತಿಯನ್ನು ಕದಡುತ್ತಲೇ ಇರುತ್ತವೆ. ಇವುಗಳ ನಡುವೆ ಒಂದು ದಿನ ನಮ್ಮ ಟೆನ್ಶನ್ನನ್ನು ಮರೆತು ಇರಲು ಸಾಧ್ಯವಾಗುವುದು, ಒಂದಷ್ಟು ಹೊತ್ತು ಲೈಕು, ಕಮೆಂಟುಗಳ ಹಂಗಿಲ್ಲದ ಆಫ್ ಲೈನ್ ಹೋಗಲು ಅವಕಾಶ ಕೊಡುವುದು, ಮನಸಾರೆ ನಗಲು, ಹರಟೆ ಹೊಡೆಯಲು, ಕಾಲೆಳೆಯಲು, ಕುಣಿದು ಕುಪ್ಪಳಿಸಲು ಅವಕಾಶ ಕೊಡುವುದು ಇಂತಹ ಹೊರ ಸಂಚಾರಗಳು... ಅದನ್ನೇ ಸಾಧ್ಯವಾಗಿಸಿದ್ದು ಈ ಪ್ರವಾಸ.

 

ನಮ್ಮ ಮುಖದಲ್ಲೊಂದು ನಗು ತರಿಸಬಲ್ಲವ, ಒಂದಷ್ಟು ಹೊತ್ತು ಕುಳಿತು ಮಾತನಾಡಿದ ಬಳಿಕ ಮನಸ್ಸನ್ನು ತುಂಬ ಹಗುರವಾಗಿಸಬಲ್ಲವ, ಇನ್ನಷ್ಟು ಮಾತನಾಡಬೇಕೆಂಬ ತುಡಿತ ಹುಟ್ಟಿಸುವವ, ಯಾವುದೇ ಉತ್ಪ್ರೇಕ್ಷೆ, ನಟನೆ, ಮುಜುಗರ ಇಲ್ಲದೆ ನೇರಾನೇರ ಮಾತನಾಡಲು ಅವಕಾಶ ಕಲ್ಪಿಸುವವರು ನಿಜವಾದ ಸ್ನೇಹಿತರು. ಅಂತಹ ಸುಮಾರು 25 ಮಂದಿ (ಮಕ್ಕಳನ್ನು ಹೊರತುಪಡಿಸಿ) ಒಟ್ಟು ಸೇರಿದರೆ ಅದರ ಅನುಭೂತಿ ಎಷ್ಟು ದೊಡ್ಡದಿರಬಹುದು ಎಂದು ಯೋಚಿಸಿ... ಇದೇ ಕಾರಣಕ್ಕೆ ಹೇಳಿದ್ದು ನಿನ್ನೆಯ ಪ್ರವಾಸ ಮನಸ್ಸನ್ನು ಹಗುರಾಗಿಸಿದ, ದಿನದ ಕೊನೆಗೆ ಸಂತೃಪ್ತಿಯಿಂದ ಮರಳುವಂತೆ ಮಾಡಿದ ದಿವಸ. ನಾವು ಮಾಡಿದ ಎಲ್ಲ ಕೆಲಸಗಳು ನಮಗೆ ಸಾರ್ಥಕ ಭಾವ ಕೊಡುವುದಿಲ್ಲ, ಕೆಲವು ಮಾತ್ರ, ಅವುಗಳಲ್ಲಿ ನಿನ್ನೆಯ ದಿನವೂ ಒಂದು...

 ನೀವೆಲ್ಲ ನಿನ್ನೆ ಖುಷಿ ಖುಷಿಯಾಗಿ ಶಿಶಿಲವೆಂಬ ಪುಟ್ಟು ಊರಿನಲ್ಲಿ ಓಡಾಡುವಾಗ, ಸುಡು ಬಿಸಿನಲ್ಲಿ ನನಗೆ ಬೈದುಕೊಂಡು ಗುಡ್ಡ ಏರಿದಾಗ, ಹೊಳೆಯಲ್ಲಿ ಈಜಿದಾಗ, ಬೇಕು ಬೇಕಾದ್ದನ್ನು ತಿಂದು, ಕುಡಿದು ಸಮಾಧಾನ ಪಟ್ಟಾಗ, ದೇವರ ದರ್ಶನ ಪಡೆದು ಪ್ರಾರ್ಥಿಸಿದಾಗ, ಮತ್ತೆ ವಾಪಸಾಗುವಾಗ ಆ ಹಾಡು, ಕುಣಿತ ಇವೆಲ್ಲವುಗಳು ದಿನವನ್ನು ಕಟ್ಟಿಕೊಟ್ಟವು. ಪ್ರವಾಸದಕೊನಗೆ ನೀವೆಲ್ಲ ನಿಮ್ಮ ಅನಿಸಿಕೆ ಹಂಚಿದಿರಿ. ಅದನ್ನು ಕೇಳಿದಾಗ ಮನಸ್ಸು ತುಂಬಿ ಬಂತು. ಕೆಲವು ವಿಚಾರಗಳನ್ನು ಥ್ಯಾಂಕ್ಸ್ ಹೇಳಿ ಕೈತೊಳೆದುಕೊಳ್ಳುವುದರಲ್ಲಿ ನನಗೆ ನಂಬಿಕೆಯೇ ಇಲ್ಲ. ಮಾತಿನಲ್ಲಿ ಕಟ್ಟಿಕೊಡಲಾಗದ ವಿಚಾರಗಳಿಗೆ ಥ್ಯಾಂಕ್ಸ್ ಸಹಕಾರ ನೀಡುವುದಿಲ್ಲ. ನೀವೆಲ್ಲ ನಿನ್ನೆ ಮನಃಪೂರ್ವಕವಾಗಿ ನಿಮ್ಮ ಖುಷಿಯನ್ನು ಹಂಚಿಕೊಂಡಿದ್ದೀರಿ ಅಂತ ನಾನು ಭಾವಿಸುತ್ತೇನೆ. ಹಾಗಾಗಿ ಎಲ್ಲರಿಗೂ ಉಂಟಾದ ಖುಷಿ ಸಂಘಟಕರಾಗಿ ನಮ್ಮಲ್ಲೂ ಅದನ್ನು ಪ್ರತಿಫಲಿಸಿದೆ. ಇದು ಪ್ರವಾಸಕ್ಕೆ ಬಂದವರು, ಬಾರದಿದ್ದರೂ ಪ್ರೋತ್ಸಾಹ ನೀಡಿದವರು, ಒಳ್ಳೆ ಮನಸ್ಸಿನಿಂದ ಹೋಗಿ ಬನ್ನಿ ಅಂತಹಾರೈಸಿ ಕಳಿಸಿದ ನಿಮ್ಮೆಲ್ಲರಿಂದ ಸಾಧ್ಯವಾಗಿದ್ದು. ಅಡ್ಮಿನ್ನುಗಳ ಎಂಬ ಹೆಸರಿನ ಇಬ್ಬರು ಮಹಾನ್ ವ್ಯಕ್ತಿಗಳಿಂದಾಗಿ ಪ್ರವಾಸ ಚಂದ ಆದ್ದಲ್ಲ. ಹೋಗುವ ಅಂತ ಹೇಳಿದಾಗ ಜೈ ಅಂತ ಬಂದ ನಿಮ್ಮಿಂದಾಗಿ....

 ಸುಶೀಲ್ ಬಗ್ಗೆ ನಾನು ವಿಶೇಷವಾಗಿ ಹೇಳಿದರೆ ಅದು ಹೊಗಳಿಕೆ ಅಥವಾ ಮುಖಸ್ತುತಿ ಆಗುತ್ತದೆ. ಹಾಗಾಗಿ ಡೇ 1ರಿಂದ ನಿನ್ನೆಯ ಪ್ರವಾಸ ಅಂತ್ಯ ವರೆಗೆ ಹೇಳಿದ್ದಕ್ಕೆ, ಕೇಳಿದ್ದಕ್ಕೆಲ್ಲ ಜೈ ಅನ್ನುತ್ತಲೇ, ಇಡೀ ದಿನದುದ್ದಕ್ಕೂ ಲವಲವಿಕೆಯನ್ನು ಉಳಿಸಿಕೊಟ್ಟ ಅವನು, ಕೊನೆಯ ದಿನದಲ್ಲಿ ನಮ್ಮನ್ನು ಸೇರಿಕೊಂಡು ದಣಿವರಿಯದಂತೆ ಮಾತನಾಡಿ, ಓಡಾಡಿ, ಎಲ್ಲರನ್ನೂ ಹುರುದುಂಬಿಸಿ ಅಚ್ಚರಿ ಹುಟ್ಟಿಸುವಂಥ ಜೀವನೋತ್ಸಾಹದ ಸುದರ್ಶನ, ಗ್ರೂಪಿನಲ್ಲಿ ಸೈಲೆಂಟು ಇದ್ರೂ, ನಿನ್ನೆ ಮಾತ್ರ ಎಲ್ಲರಗಿಂತ ಮೊದಲು ಬಂದು ನಿಂತ ರಾಜೇಶ ಪೈ, ಸುಮಿತ್ರಾ, ಆಕೆಯ ಇಬ್ಬರು ಮಕ್ಕಳು, ಹೊಸ ಬದುಕಿನಲ್ಲಿ ಸಾಗುತ್ತಿರುವ ಪುಷ್ಪಾ, ಅಚ್ಚು ಕಟ್ಟಾಗಿ ಊಟ ಬಡಿಸಿದ, ಪಾತ್ರೆಗಳನ್ನು ಹೊತ್ತುಕೊಂಡು ಹೋದ ಧನವಂತಿ...ಮೊದಲ ಬಾರಿಗೆ ನಮ್ಮ ತಂಡದ ಜೊತೆ ಬಂದ ರಶ್ಮಿಯ ಮಗ ಚಿರಾಗ್, ಸುಶೀಲನ ಇಬ್ಬರು ಪುತ್ರರು, ಉಷಾನ ಮಗಳು....ಮೊದಲ ಬಾರಿಗೆ ಬಂದ ಸಂಪತ್ ಆಳ್ವ, ರಾಮ ಮೊಗೇರ... ಇವರೆಲ್ಲ ನಾನು ಈ ಕ್ಷಣಕ್ಕೆ ನೆನಪಾಗಿ ಹೇಳುತ್ತಿರುವ ಹೆಸರುಗಳು ಮಾತ್ರ.... ಇನ್ನುಳಿದವರ ಹೆಸರು ಯಾಕೆ ಹೇಳಲಿಲ್ಲ ಅಂತ ಕೇಳುವುದು ಬೇಡ. ಅವರೆಲ್ಲ ತಮ್ಮ ವೈಯಕ್ತಿಕ ಸಮಸ್ಯೆ, ಒತ್ತಡಗಳನ್ನು ದಾಟಿ ಎಲ್ಲ ಚಟುವಟಿಕೆಗಳಲ್ಲಿ ಗ್ರೂಪಿನೊಂದಿಗೆ ಸೇರಿ ಬರುವವರು. ಅವರಿಗೆ ನಾನು ಥ್ಯಾಂಕ್ಸ್ ಹೇಳದೇ ಇರಲು ನನಗೇನೂ ಮುಜುಗರ ಇಲ್ಲ... ನಮ್ಮ ಮನೆಯವರಿಗೆ ನಾವು ಥ್ಯಾಂಕ್ಸ್ ಹೇಳಬೇಕಾಗಿದ್ದಿಲ್ಲ.

 

ಇವರನ್ನೆಲ್ಲ ನಿನ್ನೆ ನೋಡುವಾಗ, ಇವರು ಪ್ರವಾಸದ ಕೊನೆಗೆ ಆಡಿದ ಮಾತುಗಳನ್ನು ಕೇಳಿದಾಗ, ನಾನು ತುಂಬ ಖುಷಿ ಪಟ್ಟೆ ಅಂದದ್ದನ್ನು ಕೇಳಿದಾಗ ನಮ್ಮ ಗ್ರೂಪಿನಲ್ಲಿ ಎಂಥೆಂಥ ಸೂಕ್ಷ್ಮ ಮನಸ್ಸಿನವರು, ತೊಡಗಿಸಿಕೊಳ್ಳುವವರು, ಜೀವನೋತ್ಸಾಹಿಗಳೂ ಇದ್ದಾರೆ ಎಂಬ ಅರಿವಾಯಿತು. ಅದಕ್ಕೇ ನಾನು ಹೇಳುವುದು ಜಾಲತಾಣಗಳ ವಿಚಿತ್ರ ಸಂವಹನಕ್ಕೂ ನಾವು ಮನುಷ್ಯರನ್ನು ಮುಖಾಮುಖಿ ನೋಡಿ, ಅಕ್ಕಪಕ್ಕ ಕುಳಿತು ಮಾತನಾಡಿದಾಗ ಸಿಕ್ಕುವ ಅನುಭವಕ್ಕೂ ನೂರು ಪಾಲು ವ್ಯತ್ಯಾಸಗಳಿವೆ... ಜಾಲತಾಣದ ಪ್ರಪಂಚವೇ ಬೇರೆ. ಜೊತೆ ಜೊತೆಗೆ ಕುಳಿತು ಮಾತನಾಡುವ ಸುಖವೇ ಬೇರೆ...

 

21 ವರ್ಷಗಳ ಹಿಂದಿನ ಆ ಲವಲವಿಕೆ, ಅದೇ ತುಂಟತನ, ಮತ್ತು ಒಗ್ಗಟ್ಟಿನ ಭಾವ ನಿಮ್ಮೆಲ್ಲರ ಮುಖದಲ್ಲಿ ಕಾಣಲು ನನಗೆ ಸಾದ್ಯವಾಯಿತು...ಕೊನೆಯ ಕ್ಷಣದಲ್ಲಿ ಕರ್ತವ್ಯದ ಕಾರಣಕ್ಕೆ ಪ್ರವಾಸ ತಪ್ಪಿಸಿಕೊಂಡ ಶುಭಾ, ಗಣೇಶ, ನಂದೀಶ, ಅಶ್ವಿನ್... ಚೆಂದಕೆ ಹೋಗಿ ಬನ್ನಿ ಅಂತ ಹರಸಿದ ಇನ್ನೂ ಹಲವರು ದೂರದಿಂದಲೇ ಕಿವಿಮಾತು ಹೇಳಿದ ಗೆಳೆಯ, ಗೆಳತಿಯರು ನಿಮ್ಮೆನ್ನು ತುಂಬ ನೆನಪು ಮಾಡಿಕೊಂಡೆವು...

 ಇನ್ನು ಉಮೇಶ!!!

 

ಕೆಲವು ವಿಚಾರಗಳನ್ನು ಅಕ್ಷರಕ್ಕಿಳಿಸಲು ಹೊರಟಾಗ ಭಾವನೆ ದುರ್ಬಲವಾಗುತ್ತದೆ, ಸಂಬಂಧದ ತೀವ್ರತೆ ಕಡಿಮೆಯಾಗಲೂ ಬಹುದು. ಈ ಮನುಷ್ಯ, ಕಳೆದ ವಾರ ದಿಢೀರ್ ಬಿ.ಸಿ.ರೋಡಿ ಬಂದು ಅಚ್ಚರಿ ಮೂಡಿಸಿದ್ದ. ಪ್ರವಾಸ ನಿರ್ಧಾರ ಆದಾಗಲೇ ಎನ್ನವು ಗ್ಯಾರಂಟಿ ಇಜ್ಜಿ ಅಂತ ಸೂಚನೆ ಕೊಟ್ಟಿದ್ದ. ಎಲ್ಲರಿಗಿಂತ ಮೊದಲು ಅಡ್ವಾನ್ಸ್ ಪಾವತಿಸಿದ್ದ. ಪ್ರವಾಸದ ಹಿಂದಿನ ಅಲ್ಲ, ಅದರ ಮೊದಲ ರಾತ್ರಿ ಕರೆ ಮಾಡಿ, ತುರ್ತು ಕರ್ತವ್ಯದ ಕರೆಯನ್ನು ನನಗೆ ಕಾಲ್ ಮಾಡಿ ತಿಳಿಸಿ ಬರಲಾಗದ್ದಕ್ಕೆ ವಿಷಾದವ್ಯಕ್ತಪಡಿಸಿದ್ದ. ಇದರಿಂದ ಆತನಿದಾಗ ನೋದು ಆತನ ಸ್ಟೇಟಸ್ಸಿನಲ್ಲಿ ಕಾಣಿಸುತ್ತಿತ್ತು. ಆದರೆ, ನಾನು ನಿನ್ನೆ ಬೆಳಗ್ಗೆ ಪ್ರವಾಸದ ಸ್ಟಾರ್ಟಿಂಗ್ ಪಾಯಿಂಟ್ ಹಂಪನಕಟ್ಟೆಗೆ ಬಂದಾಗ ಅಲ್ಲಿ ಈ ಮನುಷ್ಯ ಹಾಜರ್ !

 

ನನಗೆ ಖುಷಿಯಾಯಿತು ಇವ ಬರ್ತಾನಲ್ಲ ಅಂತ. ನಂತರ ಗೊತ್ತಾಯಿತು, ಇವ ಕೇವಲ ನಮಗೆ ವಿಶ್ ಮಾಡಲು ಅಷ್ಟು ದೂರದಿಂದ ಬಂದದ್ದು ಅಂತ. ಅವ ಬಸ್ಸಿನಲ್ಲಿ ಪಡಿಲ್ ವರೆಗೆ ಬಂದು ಎಲ್ಲರನ್ನೂ ಮಾತನಾಡಿಸಿ ಹೊರಟು ಹೋದ... ಅವನೊಬ್ಬ ಕಲ್ಪನೆಗೆ ಸಿಕ್ಕದ ವ್ಯಕ್ತಿ... ಸೋ, ನನಗೇ ಈ ಬಗ್ಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ... ನಿನ್ನೆ ರಾತ್ರಿಯ ಅವನ ಸ್ಟೇಟಸ್ಸಿನಲ್ಲೂ ಕಂಡೆ, ಬೇರೆಯವರಿಗೆ ಖುಷಿ ನೀಡುವುದರಿಂದ ನಮಗಾಗುವ ಖುಷಿಗೆ ಪಾರವಿಲ್ಲ ಅಂತ... ನನಗಂತೂ ಅವನ ಹಾಗಿರಲು ಸಾಧ್ಯವಿಲ್ಲ... ಉಮೇಶೆರೇ ನೆಕ್ಕ್ ದಾದ ಪನೋಡುಂದು ಎಂಕ್ ಗೊತ್ತಾಪುಜ್ಜಿ....

 

ಇನ್ನು ಫಾರೂಕ್... ಫಾರೂಕ್ ಊರಿಗೆ ಬಂದಾಗ ಪ್ರವಾಸ ನಡೆದರೆ ಚೆನ್ನಾಗಿತ್ತು ಎಂಬ ಭಾವನೆ ಇತ್ತು. ಇದಕ್ಕೆ ಕಾರಣ ಇದೆ. ಅವನು ಕೋ ಅಡ್ಮಿನ್ ಆಗದೇ ಇರುತ್ತಿದ್ದರೆ ಈ ಗ್ರೂಪು ಇಷ್ಟು ದಿನ ಮುಂದೆ ಸಾಗುತ್ತಿರಲಿಲ್ಲ. ಅವ ದೂರದ ದುಬೈಯಲ್ಲಿ ಕುಳಿತು ಎಲ್ಲ ಚಟುವಟಿಕೆಗಳ ದಾಖಲೀಕರಣ ಮಾಡುತ್ತಾನೆ. ನಾನು ಕಂಗೆಟ್ಟಾಗಲೆಲ್ಲ ಧೈರ್ಯ ತುಂಬುತ್ತಾನೆ ಮತ್ತು ನನಗಿಂತ ಎಷ್ಟೋ ಪ್ರೌಢ ಹಾಗೂ ಸಹನೆಯ ವ್ಯಕ್ತಿಯಾಗಿದ್ದಾನೆ. ಅವನು  ಈ ವರೆಗೆ ಯಾವತ್ತೂ ಗ್ರೂಪಿನವರನ್ನು ಭೇಟಿಯಾಗಿರಲಿಲ್ಲ. ಹಾಗಾಗಿ ಅವನ ಉಪಸ್ಥಿತಿ ನನಗಂತೂ ವೈಯಕ್ತಿಕವಾಗಿ ತುಂಬ ಸಂತೋಷ ಕೊಟ್ಟಿದೆ. ಹಾಗೂ ಅವನ ರಜೆಯ ಒಂದು ದಿನವನ್ನು ಚಂದ ಮಾಡಿ ಆತನಿಗೆ ನೀಡಿದ್ದೇವೆ ಅಂತ ಅಂದುಕೊಳ್ಳುತ್ತೇನೆ....

 

🌸🌸🌸🌸🌸🌸🌸

 

ಕೊನೆಯ ಮಾತು....

 

ಪ್ರವಾಸದ ಸಿದ್ಧತೆ, ಬರುವವರ ಸಂಖ್ಯೆಯ ಅನಿಶ್ಚಿತತೆ, ಊಟ, ತಿಂಡಿಯ ವ್ಯವಸ್ಥೆ ಹಾಗೂ ನನ್ನ ಕೆಲಸ ಇವೆಲ್ಲ ಪರಸ್ಪರ ಮ್ಯಾಚ್ ಆಗದೆ ನನ್ನೊಳಗೆ ತುಂಬ ಒತ್ತಡ ಸೃಷ್ಟಿಯಾಗಿತ್ತು. ಜೊತೆಗೆ ಪ್ರವಾಸದ ನಿರ್ಧಾರದ ಆರಂಭದಲ್ಲಿ ಕೇಳಿ ಬಂದ ಒಂದು ಮಾತು ತುಂಬ ಬೇಸರ ನೀಡಿತ್ತು, ಗ್ರೂಪಿನಲ್ಲಿ ಪಾರ್ಶಿಯಾಲಿಟಿ ಇದೆ, ಇಂತಹ ಗ್ರೂಪು ಬೇಕ ಎಂಬ ಮಾತು ಕೇಳಿಬಂದಿತ್ತು. ಯಾವುದೇ ಬೇಸರದಲ್ಲಿ ಹೇಳಿರಲಿ, ಯಾವುದೇ ಭಾವದಲ್ಲಿ ಹೇಳಿರಲಿ ಗ್ರೂಪಿನ ಬಗ್ಗೆ ಹಾಗೆ ಹೇಳಿದ್ದು, ಆ ಥರ ಕನಸಿನಲ್ಲೂ ಊಹಿಸಿರದ, ಅಥವಾ ಭೇದ ಭಾವ ಕಲ್ಪಿಸಿರದ ನನಗೆ ವೈಯಕ್ತಿಕವಾಗಿ ತುಂಬ ನೋವುಂಟು ಮಾಡಿದೆ. ಹಾಗಾಗಿ ಈ ಪ್ರವಾಸದ ಮುಗಿದರೆ ಸಾಕು, ನಾನು ಸ್ವಲ್ಪ ದಿನ ಗ್ರೂಪಿನಿಂದ ಎಕ್ಸಿಟ್ ಆಗ್ತೇನೆ. ಸ್ವಲ್ಪ ವಿರಾಮ ಬೇಕು, ಆಮೇಲೆ ಸೇರ್ತೇನೆ ಅಂತ ನಿರ್ಧಾರ ಮಾಡಿದ್ದೆ. ನೀವು ನಂಬ್ತೀರೋ ಗೊತ್ತಿಲ್ಲ, ಗ್ರೂಪು ಬಿಡುವಾಗ ನಿಮ್ಮ ಜೊತೆ ಆಡಬೇಕಾದ ಮಾತುಗಳನ್ನು ಟೈಪ್ ಮಾಡಿ ಇಟ್ಟಿದ್ದೆ. ಈಗಲೂ ಇದೆ ಅದು ನನ್ನ ಜೊತೆ. ಆದರೆ, ನಿನ್ನೆಯ ನಿಮ್ಮ ಸಂಭ್ರಮ, ನಿನ್ನೆ ನೀವು ನೀಡಿದ ಸಹಕಾರ ಹಾಗೂ ಸರ್ಕಸ್ಸು ಮಾಡಿ ನಡೆಸಿದ ಪ್ರವಾಸವೂ ದಿನದ ಕೊನೆಗೆ ನೀಡಿದ ಆ ಒಂದು ನಿರಾಳ ಭಾವ ಇದೆಯಲ್ಲ ಇದು ನನ್ನ ನಿರ್ಧಾರವನ್ನು ಮತ್ತು ಗ್ರೂಪಿನ ಕುರಿತಾಗಿ ಇದ್ದ ಅಸಹನೆಯನ್ನು ಕಡಿಮೆ ಮಾಡಿತು. ಎಲ್ಲದಕ್ಕಿಂತ ವಾಪಸ್ ಬರುವಾಗ ಫಾರೂಕ್ ಹೇಳಿದ, ನೀನಿವತ್ತು ಗ್ರೂಪನ್ನು ತ್ಯಜಿಸಿದರೆ ಇಡೀ ಸಂಭ್ರಮ ಕಳೆದುಹೋಗುತ್ತದೆ, ಅಂತಹ ನಿರ್ಧಾರ ಬೇಡ ಅಂತ... ಸೋ ಅದು ಕ್ಯಾನ್ಸಲ್ ಆಗಿದೆ.

 

ಒಂದು ವಿಚಾರ ನೆನಪಿಡಿ ನಾವೆಲ್ಲ ಒಟ್ಟು ಸೇರಿದ್ದೇ ಈ ಗ್ರೂಪಿನಿಂದ. ನಮಗೆ ನಮ್ಮ ಮನೆಯಲ್ಲಿರುವ ಆರೇಳು ಜನರನ್ನೇ ಒಪ್ಪಿಸಿ, ಒಂದೇ ದಿನ ಒಂದೇ ಕಡೆಗೆ ಪ್ರವಾಸ ಕರೆದೊಯ್ಯಲು ಸಾಧ್ಯವಾಗುವುದಿಲ್ಲ. ಹಾಗಿರುವಾಗ ಗ್ರೂಪಿನ ಎಲ್ಲರನ್ನೂ (ಐ ಮೀನ್ ಎಲ್ಲ ಊರಿನಲ್ಲಿರುವವರು, ಎಲ್ಲ ಕೆಲಸದಲ್ಲಿರುವವರ ಸಹಿತ) ಒಂದೇ ದಿನ ಒಂದೇ ಕಡೆ ಕರೆದೊಯ್ಯಲು ಎಂತಹ ಪರಿಣತನಿಗೂ ಸಾಧ್ಯವಿಲ್ಲ. ಕೆಲವರಿಗಾದರೂ ಬೇಸರ ಆಗಿಯೇ ಆಗುತ್ತದೆ. ಹಾಗಾಗಿ ಯಾವತ್ತೋ ಒಂದು ದಿನ, ಒಂದು ಸ್ಥಳಕ್ಕೆ ಯಾರೋ ಕೆಲವರು ಪ್ಲಾನ್ ಮಾಡಿ ಹೋಗಲೇಬೇಕಾಗುತ್ತದೆ, ಉಳಿದವರು ಅನುಸರಿಸಬೇಕಾಗುತ್ತದೆ, ಇದು ಹಾರ್ಡ್ ಟ್ರೂತ್. ಈ ಹಿಂದೆ ಇರಲಿ,ಈಗ ಇರಲಿ, ಮುಂದೆ ನಾನು  ಈ ಗ್ರೂಪಿನಲ್ಲಿ ಉಳಿದರೆ ಮುಂದೆಯೂ ಅಷ್ಟೇ... ನಾನ್ಯಾವತ್ತೂ ಗ್ರೂಪಿನವರಲ್ಲಿ ಭೇದ ಭಾವ ತೋರಿಸಿಲ್ಲ, ಎಲ್ಲರೂ ಮಾಡಿದ ಉಪಕಾರ ನನಗೆ ನೆನಪಿದೆ. ಯಾರನ್ನೂ ನೋಯಿಸಿ ಏನನ್ನೂ ಮಾಡುವ ಉದ್ದೇಶವಿಲ್ಲ, ಅದರಿಂದ ನನಗೆ ವೈಯಕ್ತಿಕವಾಗಿ ಸಿಕ್ಕುವುದು ಏನೂ ಇಲ್ಲ. ಕೆಲವು ವಿಚಾರಗಳು ಮನಸ್ಸಿಗೆ ನೋವು ನೀಡುವುದು, ನಿರಾಶೆ ಹುಟ್ಟಿಸುವುದು ಸಹಜ. ಆದರೆ 90 ಮಂದಿ ಇರುವ ಗ್ರೂಪಿನಲ್ಲಿ ಅದನ್ನು ಹಂಚಿಕೊಳ್ಳುವಾಗ ಇಲ್ಲಿ ಎಷ್ಟು ಮಂದಿ ಇದ್ದಾರೆ, ಇದು ಯಾರಿಗೆ ನೋವುಂಟು ಮಾಡುತ್ತದೆ ಎಂಬ ಕಲ್ಪನೆ ಇಟ್ಟು ಮಾತನಾಡುವುದು ಉತ್ತಮ. ಇಲ್ಲವಾದಲ್ಲಿ ಅದು ಇಡೀ ವಾತಾವರಣವನ್ನೇ ಹಾಳೆಗೆಡಹುತ್ತದೆ...

 

ಏನೇ ಇರಲಿ... ನಾವು ಧನಾತ್ಮಕವಾಗಿ ಚಿಂತಿಸುವ, ವಾಸ್ತವಿಕವಾಗಿ ಚಿಂತಿಸುವ, ಮುಂದಿನ ಪ್ರವಾಸದ ನೇತೃತ್ವ ಯಾರೇ ವಹಿಸಲಿ... ನಿನ್ನೆಗಿಂತ ಮೂರು ಪಟ್ಟು ಜನ ಸೇರಬೇಕು, ನೀವೆಲ್ಲ ಇದೇ ರೀತಿ ಬರಬೇಕು. ಮತ್ತೊಮ್ಮೆ ಇಂತಹ ಸಂಭ್ರಮಗಳು ಮರುಕಳಿಬೇಕು. ಆ ದಿನ ಎಲ್ಲ ಊರಿನಲ್ಲಿರುವ ಸ್ನೇಹಿತರು ಜೊತೆಯಾಗಬೇಕು. ದೇವರು ನಮಗೆ ಅಂತಹ ಅವಕಾಶ ಕಲ್ಪಿಸಲಿ...

 

 ತುಂಬ ಉದ್ದ ಬರೆದಿದ್ದೇನೆ.... ಕ್ಷಮೆ ಇರಲಿ.. (ಬರೆಯುವ ಭರಾಟೆಯಲ್ಲಿ ಯಾರದ್ದಾದರೂ ಹೆಸರು ಉಲ್ಲೇಖಿಸಲು ಬಾಕಿಯಾದರೆ ಕ್ಷಮಿಸಿ). ಧನ್ಯವಾದಗಳು (ಯಾರಾದರೂ ಕೊನೆ ತನಕ ಓದಿದ್ದರೆ, ಓದಿದ್ದಕ್ಕೆ, ನಿಮ್ಮೆ ಪ್ರತಿಕ್ರಿಯೆಗಳಿಗೆ ಸ್ವಾಗತ ಇದೆ)

 🌸🌸🌸🌸🌸

 

-ಕೆ.ಎಂ. (14.03.2021, 8.31 AM)

Post a Comment

0 Comments